ಅಪರ್ಣಾ ಕಾಯಿಲೆ ಬಗ್ಗೆ ಹೇಳಿರಲಿಲ್ಲ, ಯಾಕೆಂದ್ರೆ... ಕಣ್ಣೀರಾದ ಶ್ವೇತ ಚೆಂಗಪ್ಪ; ದೇವರು ಇಷ್ಟಿಷ್ಟು ಹಣೆಬರಹ ಬರೆದಿರ್ತಾರೆ ಎಂದ ಕುರಿ ಪ್ರತಾಪ್
Jul 16, 2024 06:19 PM IST
ಖ್ಯಾತ ನಿರೂಪಕಿ, ನಟಿ, ಮಗುವಿನಂಥ ಮನಸಿನ ಅಪರ್ಣ ಅವರಿಗೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಬಾಷ್ಪಾಂಜಲಿ
- Aparna Vastarey death: ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಅವರನ್ನು ನೆನೆದು ಕುರಿ ಪ್ರತಾಪ್, ಶ್ವೇತ ಚೆಂಗಪ್ಪ ಕಣ್ಣೀರಾಗಿದ್ದಾರೆ. ದಿವಂಗತ ಅಪರ್ಣಾ ಕುರಿತು ಅವರು ಆಡಿದ ಮಾತುಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದ ನಿರೂಪಕಿ, ನಟಿ ಅಪರ್ಣಾ ವಸ್ತಾರೆ ಅವರನ್ನು ನೆನೆದು ಕುರಿ ಪ್ರತಾಪ್, ಶ್ವೇತ ಚೆಂಗಪ್ಪ ಕಣ್ಣೀರಾಗಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮದ ಪ್ರಮೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಅಪರ್ಣಾರಿಗೆ ಬಾಷ್ಪಾಂಜಲಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಅಪರ್ಣಾ ಒಡನಾಡಿಗಳಾದ ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ಅವರಲ್ಲಿ ನೆನಪುಗಳನ್ನು ಹಂಚಿಕೊಳ್ಳಲು ತಿಳಿಸಿದ್ದಾರೆ. ಇವರಿಬ್ಬರು ತಮ್ಮ ನೆನಪುಗಳನ್ನು ಹಂಚಿಕೊಂಡಾಗ ನೆರೆದ ಪ್ರೇಕ್ಷಕರ ಕಣ್ಣಾಲಿಗಳು ತುಂಬಿಬಂದವು. ದಿವಂಗತ ಅಪರ್ಣಾ ಕುರಿತು ಅವರು ಆಡಿತ ಮಾತುಗಳನ್ನು ಇಲ್ಲಿ ನೀಡಲಾಗಿದೆ.
ದೇವರು ಇಷ್ಟಿಷ್ಟು ಹಣೆಬರಹ ಬರೆದಿರ್ತಾರೆ
"ಸುಮಾರು ಎಂಟು ವರ್ಷ ನಾವು ಜತೆಗೆ ನಿರಂತರವಾಗಿ ಕೆಲಸ ಮಾಡಿದೆವು. ಒಂಥರ ಮಗು ತರ ಅವರಿದ್ರು. ನಿಮಗೆ ವಯಸ್ಸಾಗಿಲ್ಲ ವಯಸ್ಸಾಗಿಲ್ಲ ಎಂದುಕೊಂಡೇ ಅವರನ್ನು ರೇಗಿಸ್ತಾ ಇದ್ದೇವು. ಸಣ್ಣ ಮಗು ತರಹನೇ ಇದ್ರು. ಅವರನ್ನು ಆಂಕರ್ ಆಗಿ ನೋಡಿದ್ದು ಡಿಡಿ ವನ್‌ನಲ್ಲಿ. ಈಗ ಒಂದು ಎಂಟು ವರ್ಷ ನಾವು ಜತೆಯಾಗಿಯೇ ಕೆಲಸ ಮಾಡಿದ್ದೇವೆ. ಅವರು ಇಷ್ಟು ಬೇಗ ನಿಧನರಾಗ್ತಾರೆ ಎಂದುಕೊಂಡಿರಲಿಲ್ಲ. ಜಗ್ಗೇಶಣ್ಣ ಹೇಳ್ತಾ ಇರುತ್ತಾರೆ ಎಲ್ಲರಿಗೂ ದೇವರು ಇಷ್ಟಿಷ್ಟು ಹಣೆಬರಹ ಎಂದು ಬರೆದಿಟ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಕುರಿ ಪ್ರತಾಪ್ ಅವರು ಅಗಲಿದ ಅಪರ್ಣಾರಿಗೆ ಬಾಷ್ಪಾಂಜಲಿ ಸಲ್ಲಿಸಿದ್ದಾರೆ.
ಅಪರ್ಣಾ ನನ್ನಲ್ಲಿ ಕಾಯಿಲೆ ಬಗ್ಗೆ ಹೇಳಿಲ್ಲ, ಯಾಕೆಂದ್ರೆ...
ಇದೇ ಸಮಯದಲ್ಲಿ ಅಪರ್ಣಾರ ಕುರಿತು ಶ್ವೇತಾ ಚಂಗಪ್ಪ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಅಳು ನಿಯಂತ್ರಿಸಲಾಗದೆ ಮಾತನಾಡಿದ್ದಾರೆ. "ನಾನು ಅಕುಲ್ ಕುರಿ ಸೇರಿದಂತೆ ಎಲ್ಲರೂ ನಿರೂಪಣೆ ಮಾಡಬಹುದು. ಆದರೆ, ನಿರೂಪಣೆ ಎಂದು ಬಂದರೆ ಕರ್ನಾಟಕದಲ್ಲಿ ಕಾಣುವ ಒಂದೇ ಒಂದು ಹೆಸರು, ಅದು ಅಪರ್ಣಾ. ಅವರು ರಾಷ್ಟ್ರಪತಿಗಳ ಕಾರ್ಯಕ್ರಮ, ಪ್ರಧಾನಮಂತ್ರಿಗಳ ಕಾರ್ಯಕ್ರಮ, ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲೂ ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದರು. ಈ ರೀತಿ ನಿರೂಪಣೆ ಮಾಡಲು ಎಲ್ಲರಿಂದಲೂ ಆಗೋದಿಲ್ಲ. ಅದಕ್ಕೆ ಅದರದ್ದೇ ಆದ ಪ್ರಬುದ್ಧತೆ ಬೇಕು. ಅದರದ್ದೇ ಆದ ಸ್ಪಷ್ಟತೆ ಇರಬೇಕು. ಅವರನ್ನು ನೋಡುವಾಗ ಅಂತಹ ಗೌರವ ಭಾವನೆ ನಮ್ಮಲ್ಲಿ ಬರಬೇಕು. ಆ ಎಲ್ಲವನ್ನೂ ಅಪರ್ಣಾ ಗಳಿಸಿಕೊಂಡಿದ್ದರು. ಅಲ್ಲಿ ಅಷ್ಟು ಗಂಭೀರವಾಗಿ ಇರ್ತಾರೆ. ಇಲ್ಲಿ ಇಷ್ಟು ಮಗು ರೀತಿ ಇರ್ತಾರೆ. ತುಂಬಾ ಮನಸ್ಸು ಬಿಚ್ಚಿ ನಮ್ಮಲ್ಲಿ ಮಾತನಾಡುತ್ತ ಇದ್ರು. ನನಗೆ ತುಂಬಾ ಮನಸ್ಸಿಗೆ ಹತ್ತಿರವಾದವರು" ಎಂದು ಶ್ವೇತ ಚೆಂಗಪ್ಪ ನೆನಪಿಸಿಕೊಂಡು ಕಣ್ಣೀರಾದರು.
"ಕಳೆದ ಕೆಲವು ಸಮಯದಿಂದ ಅಪರ್ಣಾ ಕೊಂಚ ಅಂತರ ಕಾಪಾಡಿಕೊಂಡಿದ್ದರು. ಅವರಲ್ಲಿ ಕಾಯಿಲೆ ಬಗ್ಗೆ ವೈಯಕ್ತಿಕವಾಗಿ ಕೇಳಲು ನನಗೆ ಮನಸ್ಸಾಗಲಿಲ್ಲ. ಇದನ್ನು ಕೇಳುವುದು ತುಂಬಾ ತಪ್ಪು ಅನಿಸಿತ್ತು. ಅವರಿಗೂ ಬೇಸರವಾಗುತ್ತದೆ. ಅವರ ಆಪ್ತರು ಬಂದು ಹೇಳಿದ್ರು. ನಾನು ಶ್ವೇತನಿಂದ ಯಾಕೆ ದೂರಾವಾದೆ ಎಂದು. ನಾನು ಹೋಗ್ತಿನಿ ಅಂತ ಅವಳಿಗೆ ಗೊತ್ತಾದ್ರೆ ತುಂಬಾ ನೋವು ಮಾಡಿಕೊಳ್ಳುತ್ತಾಳೆ. ನನ್ನ ಮಗಳ ತರಹ ಇದ್ಲು ಅಂತ ಅಂದಿದ್ರಂತೆ. ಎಷ್ಟು ಸರಳ ವ್ಯಕ್ತಿ ಅವರು.. ಹೀಗೆ ಶ್ವೇತಾ ಕಣ್ಣೀರಾಗಿದ್ದಾರೆ.