logo
ಕನ್ನಡ ಸುದ್ದಿ  /  Entertainment  /  Three Movie Personalities Get Padma Award 2023 Including Vani Jayaram

Padma Awards 2023: ವಾಣಿ ಜಯರಾಂ, ಕೀರವಾಣಿ ಸೇರಿ ನಾಲ್ವರು ಸಿನಿಮಾ ಸಾಧಕರಿಗೆ ಒಲಿದು ಬಂದ ಪದ್ಮ ಪ್ರಶಸ್ತಿ..ಮತ್ತಿಬ್ಬರು ಯಾರು?

Rakshitha Sowmya HT Kannada

Jan 26, 2023 08:50 AM IST

ಪದ್ಮ ಪ್ರಶಸ್ತಿ 2023

    • ಗಣರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಸೇವಾಪ್ರಶಸ್ತಿಯಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರಿ ಪ್ರಶಸ್ತಿಯನ್ನು ಘೋಷಿಸಿದೆ. ಸಾಮಾಜಿಕ ಸೇವೆ, ಕಲೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಹಾಗೂ ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಪದ್ಮ ಪ್ರಶಸ್ತಿ 2023
ಪದ್ಮ ಪ್ರಶಸ್ತಿ 2023

2023ನೇ ಸಾಲಿನಲ್ಲಿ 6 ಸಾಧಕರಿಗೆ ಪದ್ಮವಿಭೂಷಣ, 9 ಗಣ್ಯರಿಗೆ ಪದ್ಮಭೂಷಣ ಹಾಗೂ 91 ಪದ್ಮಶ್ರೀ ಸೇರಿ ಒಟ್ಟು 106 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಇನ್ಫೋಸಿಸ್‌ನ ಸುಧಾಮೂರ್ತಿ ಸೇರಿ ಒಟ್ಟು 8 ಕರ್ನಾಟಕದ ಗಣ್ಯರಿಗೆ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ಲಭಿಸಿದೆ. ಮೂವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ. 106ರಲ್ಲಿ ನಾಲ್ವರು ಸಿನಿಮಾ ಮಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.

ಟ್ರೆಂಡಿಂಗ್​ ಸುದ್ದಿ

ವಿಶೇಷ ಸೂಚನೆ; ರಕ್ಷಿತ್‌ ಶೆಟ್ಟಿಯ ‘ರಿಚರ್ಡ್‌ ಆಂಟನಿ’ ಚಿತ್ರದಲ್ಲಿ ಕರಾವಳಿ ಭಾಗದ ಕಲಾವಿದರಿಗಷ್ಟೇ ಅವಕಾಶ!

Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿದ್ಯಾ ಬಾಲನ್‌

Ranneeti Review: ಒಂದು ಯುದ್ಧದ ಹಿಂದಿನ ಹಲವು ಯುದ್ಧಗಳ ಕಥೆ; ದೇಶದೇಶಗಳ ರಾಜಕೀಯ ಚದುರಂಗದಲ್ಲಿ ಸುದ್ದಿಯೂ ಅಸ್ತ್ರ -ರಣ್‌ನೀತಿ ವೆಬ್‌ಸೀರೀಸ್

Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ

ವಾಣಿ ಜಯರಾಂ

ಖ್ಯಾತ ಸಿನಿಮಾ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಪದ್ಮಭೂಷಣ ಗೌರವ ದೊರೆತಿದೆ. ವಾಣಿ ಜಯರಾಂ ಸುಮಾರು 50 ವರ್ಷಗಳಿಂದ ಸಿನಿಮಾ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 18 ವಿವಿಧ ಭಾರತೀಯ ಭಾಷೆಗಳ ಸಿನಿಮಾಗಳಲ್ಲಿ ವಾಣಿ ಜಯರಾಂ ಹಾಡಿದ್ದು ತಮ್ಮ ವಿಭಿನ್ನ ಕಂಠದಿಂದಲೇ ಸಂಗೀತ ಪ್ರಿಯರನ್ನು ಸೆಳೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ತಮಿಳುನಾಡಿಗೆ ಸೇರಿದ ವಾಣಿ ಜಯರಾಂ ಕನ್ನಡದಲ್ಲಿ ಕೂಡಾ ಅನೇಕ ಹಾಡುಗಳನ್ನು ಹಾಡಿದ್ಧಾರೆ. ವಿಜಯ್‌ ಭಾಸ್ಕರ್‌ ಸಂಗೀತ ನಿರ್ದೇಶನದ 'ಕೆಸರಿನ ಕಮಲ' ಚಿತ್ರದ ಹಾಡನ್ನು ಹಾಡುವ ಮೂಲಕ ವಾಣಿ ಜಯರಾಂ 1973ರಲ್ಲಿ ಕನ್ನಡಕ್ಕೆ ಬಂದರು.

ಬೂತಯ್ಯನ ಮಗ ಅಯ್ಯು ಚಿತ್ರದ ಸೋಬಾನೆ...ಎರಡು ಕನಸು ಚಿತ್ರದ ಎಂದೆಂದೂ ನಿನ್ನನು ಮರೆತು, ಉಪಾಸನೆ ಚಿತ್ರದ ಭಾವಯ್ಯ ಭಾವಯ್ಯ..ಶುಭ ಮಂಗಳ ಚಿತ್ರದ ಟೈಟಲ್‌ ಹಾಡು ಸೇರಿದಂತೆ ಲೆಕ್ಕವಿಲ್ಲದಷ್ಟು ಸೂಪರ್‌ ಹಿಟ್‌ ಹಾಡುಗಳನ್ನು ವಾಣಿ ಜಯರಾಂ ಕನ್ನಡದಲ್ಲಿ ಹಾಡಿದ್ದಾರೆ.

ಎಂ.ಎಂ. ಕೀರವಾಣಿ

ಆಂಧ್ರಪ್ರದೇಶಕ್ಕೆ ಸೇರಿದ ಎಂ.ಎಂ. ಕೀರವಾಣಿ ಅವರಿಗೆ ಈ ಬಾರಿ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಪದ್ಮಶ್ರಿ ಪ್ರಶಸ್ತಿ ದೊರೆತಿದೆ.

1990 ರಲ್ಲಿ ತೆಲುಗಿನ 'ಮನಸು ಮಮತ' ಎಂಬ ಚಿತ್ರದ ಮೂಲಕ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಬಂದರು. ಘರಾನಾ ಮುಗುಡು, ಕ್ರಿಮಿನಲ್‌, ಕೈದಿ ನಂ 1, ಬೊಬ್ಬಿಲಿ ಸಿಂಹಂ, ಪೆಳ್ಳಿ ಸಂದಡಿ, ಬಾಹುಬಲಿ, ಆರ್‌ಆರ್‌ಆರ್‌ ಸೇರಿ ಅನೇಕ ಸಿನಿಮಾಗಳಿಗೆ ಕೀರವಾಣಿ ಸಂಗೀತ ನೀಡಿದ್ದಾರೆ. ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿ, ಕನ್ನಡ ಸಿನಿಮಾಗಳಿಗೂ ಸಂಗೀತ ನಿರ್ದೇಶನದ ಮಾಡಿದ್ದಾರೆ. ಕನ್ನಡದಲ್ಲಿ ಅಳಿಮಯ್ಯ, ಭೈರವ, ಸ್ವಾತಿ, ಅಪ್ಪಾಜಿ, ಕರ್ನಾಟಕ ಸುಪುತ್ರ, ದೀಪಾವಳಿ, ಸುಂದರಕಾಂಡ, ಜಮೀನ್ದಾರು, ವೀರಮದಕರಿ, ಮರ್ಯಾದೆ ರಾಮಣ್ಣ ಸಿನಿಮಾಗಳಲ್ಲಿ ಕೀರವಾಣಿ ಟ್ಯೂನ್‌ ಹಾಕಿರುವ ಸುಂದರ ಹಾಡುಗಳಿವೆ. ಇತ್ತೀಚೆಗೆ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು..... ಹಾಡಿಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಡೆದಿದ್ದರು. ಆಸ್ಕರ್‌ಗೆ ಕೂಡಾ ಈ ಹಾಡು ನಾಮಿನೇಟ್‌ ಆಗಿದೆ.

ರವೀನಾ ಟಂಡನ್‌

ಖ್ಯಾತ ಬಾಲಿವುಡ್‌ ನಟಿ ರವೀನಾ ಟಂಡನ್‌ಗೆ ಈ ಬಾರಿ ಪದ್ಮಶ್ರೀ ದೊರೆತಿದೆ. ಪಂಜಾಬಿ ಕುಟುಂಬಕ್ಕೆ ಸೇರಿದ ರವೀನಾ ಟಂಡನ್‌ 1991 ರಲ್ಲಿ 'ಪತ್ತರ್‌ ಕೆ ಫೂಲ್‌' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಕ್ಷತ್ರಿಯ, ದಿಲ್‌ ವಾಲೇ, ಅಂಜಾದ್‌ ಅಪ್ನಾ ಅಪ್ನಾ, ಮೊಹರ, ರಕ್ಷಕ್‌, ಆಂಟಿ ನಂ 1, ದುಲ್ಹಾಯ್‌ ರಾಜಾ, ಅನಾರಿ ನಂ 1 ಸೇರಿ ಈ ಚೆಲುವೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಬಂದ ರವೀನಾ, ಉಪ್ಪಿ ಜೊತೆ 'ಉಪೇಂದ್ರ' ಸಿನಿಮಾದಲ್ಲಿ ನಟಿಸಿದ್ದರು. ಮಸ್ತ್‌ ಮಸ್ತ್‌ ಹುಡುಗಿ ಎಂದು ರಿಯಲ್‌ ಸ್ಟಾರ್‌ ಜೊತೆ ಕುಣಿದಿದ್ದರು. ಇದರ ನಂತರ ಬಹಳ ವರ್ಷಗಳ ನಂತರ ಕಳೆದ ವರ್ಷ ತೆರೆ ಕಂಡಿದ್ದ 'ಕೆಜಿಎಫ್‌ 2' ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ರವೀನಾ 'ಗುಡ್‌ಚಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಗಳನ್ನೂ ಚಿತ್ರರಂಗಕ್ಕೆ ಕರೆತರುವ ತಯಾರಿಯಲ್ಲಿದ್ಧಾರೆ ಎನ್ನಲಾಗುತ್ತಿದೆ.

ಸುಮನ್‌ ಕಲ್ಯಾಣ್‌ಪುರ್‌

ಖ್ಯಾತ ಬೆಂಗಾಳಿ ಗಾಯಕಿ ಸುಮನ್‌ ಕಲ್ಯಾಣ್‌ಪುರ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಹಿಂದಿ, ಮರಾಠಿ, ಬೆಂಗಾಳಿ, ಅಸ್ಸಾಮಿ ಹಾಗೂ ಕನ್ನಡ ಭಾಷೆಗಳಲ್ಲಿ ಸುಮನ್‌ ಅನೇಕ ಹಾಡುಗಳನ್ನು ಹಾಡಿದ್ದಾರೆ. ಜಯಂತಿ ಅಭಿನಯದ ಕಲಾವತಿ ಚಿತ್ರದ ಒಡನಾಡಿ ಬೇಕೆಂದು..ಕಲ್ಪವೃಕ್ಷ ಚಿತ್ರದ ಹನಿ ಹನಿ ಹೀರಿ...ತಲ್ಲಣ ನೂರು ಬಗ್ಗೆ...ಹಾಡನ್ನು ಸುಮನ್‌ ಕಲ್ಯಾಣ್‌ ಪುರ್‌ ಹಾಡಿದ್ದಾರೆ.

ಪದ್ಮ ಪ್ರಶಸ್ತಿ ಪಡೆದ ಈ ನಾಲ್ವರಿಗೂ ಸಿನಿಪ್ರಿಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು