ಕಿರಿಕ್ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ- ಡಿಯರ್ ಕಾಮ್ರೆಡ್ ವಿಜಯ ದೇವರಕೊಂಡ ನಿಶ್ಚಿತಾರ್ಥದ ಸುದ್ದಿ ಸುಳ್ಳಂತೆ
Jan 09, 2024 08:03 AM IST
ರಶ್ಮಿಕಾ ಮಂದಣ್ಣ- ವಿಜಯ ದೇವರಕೊಂಡ ಸಿನಿಮಾದ ಸ್ಟಿಲ್
- Rashmika Mandanna Vijay Deverakonda engagement: ಸ್ಯಾಂಡಲ್‌ವುಡ್‌ನ ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಅನಿಮಲ್ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ ದೇವರಕೊಂಡ ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಆದರೆ, ಆ ಸುದ್ದಿ ಸುಳ್ಳೆಂಬ ವಿವರ ಲಭ್ಯವಾಗಿದೆ.
ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರು ಫೆಬ್ರವರಿ ತಿಂಗಳಲ್ಲಿ ಅಂದರೆ ಪ್ರೇಮಿಗಳ ದಿನ ಇರುವ ವ್ಯಾಲೆಂಟಿನ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಕೇಳಿಬರುತ್ತಿದೆ. ಈ ವದಂತಿ ಕುರಿತು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ, ಎಎನ್‌ಐ ಸುದ್ದಿಸಂಸ್ಥೆ ಮೂಲಗಳ ಪ್ರಕಾರ "ರಶ್ಮಿಕಾ- ವಿಜಯ್ ದೇವರಕೊಂಡ ನಿಶ್ಚಿತಾರ್ಥ ಸುಳ್ಸುದ್ದಿ".
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯು ಸುಳ್ಳುಸುದ್ದಿ ಎಂದು ಈ ನಟಿ-ನಟರ ಆಪ್ತ ಮೂಲಗಳು ತಿಳಿಸಿವೆ ಎಂದು ಎಎನ್‌ಐ ವರದಿ ಮಾಡಿದೆ.
ಕನ್ನಡದ ಕಿರಿಕ್ ಪಾರ್ಟಿಯ ಯಶಸ್ಸು ಬಳಿಕ ತೆಲುಗು ಚಿತ್ರರಂಗಕ್ಕೆ ನೆಗೆದಿದ್ದ ರಶ್ಮಿಕಾ ಮಂದಣ್ಣ ಬಳಿಕ ಡಿಯರ್ ಕಾಮ್ರೆಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಜತೆ ನಟಿಸಿದ್ದರು. ಕಳೆದ ಎರಡು ದಿನಗಳಿಂದ ಇವರಿಬ್ಬರ ಎಂಗೇಜ್‌ಮೆಂಟ್ ಕುರಿತು ಸುದ್ದಿಗಳು ಹಬ್ಬಿದವು. ಆದರೆ, ಇವರಿಬ್ಬರು ಎಂಗೇಜ್‌ಮೆಂಟ್ ಆಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕಳೆದ ಒಂದೆರಡು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿರುವುದು ಜಾಹೀರಾಗಿತ್ತು. ಆದರೆ, ಅವರಿಬ್ಬರು ತಮ್ಮ ಸಂಬಂಧದ ಕುರಿತು ಅಧಿಕೃತವಾಗಿ ಎಲ್ಲೂ ಮಾತನಾಡಿಲ್ಲ. ಗೀತಾ ಗೋವಿಂದಂ ಸಿನಿಮಾದಲ್ಲಿಯೂ ಇವರಿಬ್ಬರು ಜತೆಯಾಗಿ ನಟಿಸಿದ್ದರು.
ಇತ್ತೀಚೆಗೆ ರಣಬೀರ್ ಕಪೂರ್ ಜತೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಸದ್ಯ ಪುಷ್ಪ 2 ಸಿನಿಮಾದ ನಟನೆಯಲ್ಲಿ ನಿರತರಾಗಿದ್ದಾರೆ. ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಛಾವಾ ಮುಂತಾದ ಪ್ರಾಜೆಕ್ಟ್‌ಗಳು ರಶ್ಮಿಕಾರ ಕೈಯಲ್ಲಿದೆ.
ವಿಜಯ್ ದೇವರಕೊಂಡ ಅವರು ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇವರ ಮುಂದಿನ ಸಿನಿಮಾ ಫ್ಯಾಮಿಲಿ ಸ್ಟಾರ್. ವಿಡಿ 12 ಎಂಬ ಇನ್ನೂ ಹೆಸರಿಡದ ಸಿನಿಮಾದ ಕುರಿತೂ ನಿರೀಕ್ಷೆ ಹೆಚ್ಚಾಗಿದೆ.
ಕಳೆದ ವರ್ಷ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮಿಬ್ಬರ ಸಂಬಂಧದದ ಕುರಿತು ಮಾತನಾಡಿದ್ದರು. "ಸೋಷಿಯಲ್ ಮೀಡಿಯಾದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಅರಿವಿದೆ. ಸೋಷಿಯಲ್ ಮೀಡಿಯಾವು ತಮ್ಮ ಸಂಬಂಧದ ಕುರಿತು ಸಾಕಷ್ಟು ಆಸಕ್ತಿ ಹೊಂದಿದೆ. ಆದರೆ, ನಾವಿಬ್ಬರು ಜಸ್ಟ್ ಸ್ನೇಹಿತರು ಅಷ್ಟೇ" ಎಂದು ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. "ನಾವಿಬ್ಬರು ದೀರ್ಘಕಾಲದ ಸ್ನೇಹಿತರು. ಇದೇ ಕಾರಣಕ್ಕೆ ನನಗೆ ಉದ್ಯಮದ ಬಗ್ಗೆ ಏನಾದರೂ ಸ್ಪಷ್ಟತೆ ಬೇಕಿದ್ದರೆ ಆತನಲ್ಲಿ ಕೇಳುವೆ. ನಾವಿಬ್ಬರು ನಿಜಕ್ಕೂ ಕ್ಲೋಸ್ ಫ್ರೆಂಡ್ಸ್. ನಾವು ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತ ಇರುತ್ತೇವೆ. ಆದರೆ, ಇಂತಹ ವಿಷಯಗಳನ್ನು ಚರ್ಚಿಸಿಲ್ಲ" ಎಂದು ಹೇಳಿದ್ದರು.