logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಅಣ್ಣ ತಮ್ಮಂದಿರ ಪಾಲಿಗೆ ಕಹಿಯಾದ ರೀಮೇಕ್‌ ಚಿತ್ರಗಳು; ಭೋಲಾ ಶಂಕರ್‌, ಬ್ರೋ ಸಿನಿಮಾಗಳು ಹೀನಾಯ ಸೋಲು; ನಿರ್ಮಾಪಕರಿಗೆ ನಷ್ಟ

Tollywood News: ಅಣ್ಣ ತಮ್ಮಂದಿರ ಪಾಲಿಗೆ ಕಹಿಯಾದ ರೀಮೇಕ್‌ ಚಿತ್ರಗಳು; ಭೋಲಾ ಶಂಕರ್‌, ಬ್ರೋ ಸಿನಿಮಾಗಳು ಹೀನಾಯ ಸೋಲು; ನಿರ್ಮಾಪಕರಿಗೆ ನಷ್ಟ

Rakshitha Sowmya HT Kannada

Aug 14, 2023 11:43 AM IST

google News

ಚಿರಂಜೀವಿ ಅಭಿನಯದ ಭೋಲಾ ಶಂಕರ್‌, ಪವನ್‌ ಕಲ್ಯಾಣ್‌ ಅಭಿನಯದ ಬ್ರೋ ಸಿನಿಮಾಗಳ ಸೋಲು

  • ಚಿರಂಜೀವಿಗೆ 65 ಕೋಟಿ ರೂ ಸಂಭಾವನೆ ನೀಡಲಾಗಿದೆ, ಹಣ ನೀಡದೆ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಚಿರಂಜೀವಿ, ನಿರ್ಮಾಪಕ ಅನಿಲ್‌ ಸುಂಕರಗೆ ಕಂಡಿಷನ್‌ ಹಾಕಿದ್ದರು ಎಂಬ ಮಾತು ಕೂಡಾ ಕೇಳಿಬಂದಿತ್ತು. ಆದರೆ ಚಿರು ಅಭಿಮಾನಿಗಳು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಚಿರಂಜೀವಿ ಅಭಿನಯದ ಭೋಲಾ ಶಂಕರ್‌, ಪವನ್‌ ಕಲ್ಯಾಣ್‌ ಅಭಿನಯದ ಬ್ರೋ ಸಿನಿಮಾಗಳ ಸೋಲು
ಚಿರಂಜೀವಿ ಅಭಿನಯದ ಭೋಲಾ ಶಂಕರ್‌, ಪವನ್‌ ಕಲ್ಯಾಣ್‌ ಅಭಿನಯದ ಬ್ರೋ ಸಿನಿಮಾಗಳ ಸೋಲು

2019ರಲ್ಲಿ ತೆರೆ ಕಂಡ ಚಿರಂಜೀವಿ ಅಭಿನಯದ 'ಆಚಾರ್ಯ' ಸಿನಿಮಾ ನಿರ್ಮಾಪಕ, ವಿತರಕರಿಗೆ ದೊಡ್ಡ ಹೊಡೆತ ನೀಡಿತ್ತು. ಸಿನಿಮಾದಿಂದ ಆದ ನಷ್ಟ ತುಂಬಿಕೊಂಡುವಂತೆ ವಿತರಕರು ನಿರ್ದೇಶಕ ಕೊರಟಾಲ ಶಿವ ಹಾಗೂ ಚಿರಂಜೀವಿ ಮನೆ ಮುಂದೆ ಜಮಾಯಿಸಿದ್ದರು. ಕರ್ನಾಟಕದ ವಿತರಕರೊಬ್ಬರು ಕೂಡಾ ಚಿರಂಜೀವಿಗೆ ಪತ್ರ ಬರೆದು ಹಣದ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ಆಚಾರ್ಯ ಸೋಲನ್ನು ನೆನಪಿಸಿದ ಭೋಲಾ ಶಂಕರ್‌

'ಆಚಾರ್ಯ' ಚಿತ್ರದ ಸೋಲು ಚಿರಂಜೀವಿ ನಿದ್ರೆ ಕಸಿದಿತ್ತು. ಆ ಚಿತ್ರವನ್ನು ಚಿರಂಜೀವಿ ಮಗ ರಾಮ್‌ ಚರಣ್‌ ನಿರ್ಮಿಸಿದ್ದರು. ಆದರೆ ನಂತರ ತೆರೆ ಕಂಡ 'ಗಾಡ್‌ ಫಾದರ್‌' ಹಾಗೂ 'ವಾಲ್ತೇರು ವೀರಯ್ಯ' ಸಿನಿಮಾಗಳು ಒಂದು ಮಟ್ಟಿಗೆ ಲಾಭ ಮಾಡಿಕೊಟ್ಟಿದ್ದವು. ಆದರೆ ಇದೀಗ ಮತ್ತೆ ಚಿರಂಜೀವಿ ಪಾಲಿಗೆ ಅದೇ ಸೋಲು ವಾಪಸ್‌ ಬಂದಿದೆ. ಆಗಸ್ಟ್‌ 11ರಂದು ತೆರೆ ಕಂಡ 'ಭೋಲಾ ಶಂಕರ್‌' ಹೀನಾಯ ಸೋಲು ಕಂಡಿದೆ. ರಿಲೀಸ್‌ ಆದ ದಿನವೇ ಸಿನಿಪ್ರಿಯರಿಂದ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ.

'ಭೋಲಾ ಶಂಕರ್‌' ಚಿತ್ರವನ್ನು ಅನಿಲ್‌ ಸುಂಕರ, ಕೆಎಸ್‌ ರಮೇಶ್‌ ರಾವ್‌ ಸೇರಿ ನಿರ್ಮಿಸಿದ್ದರು. ಮೆಹರ್‌ ರಮೇಶ್‌ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದು 2015ರಲ್ಲಿ ತಮಿಳಿನಲ್ಲಿ ತೆರೆ ಕಂಡಿದ್ದ ತಮಿಳಿನ 'ವೇದಾಳಂ' ಸಿನಿಮಾ ರೀಮೇಕ್.‌ ಆ ಚಿತ್ರದಲ್ಲಿ ಅಜಿತ್‌ ನಟಿಸಿದ್ದ ಪಾತ್ರವನ್ನು 'ಭೋಲಾ ಶಂಕರ್‌'ನಲ್ಲಿ ಚಿರಂಜೀವಿ ನಟಿಸಿದ್ದಾರೆ. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್‌, ಮುರಳಿ ಶರ್ಮಾ, ಸಯ್ಯಾಜಿ ಶಿಂಧೆ, ಬ್ರಹ್ಮಾನಂದಂ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಈ ನಡುವೆ ಚಿರಂಜೀವಿ ಸಂಭಾವನೆ ಬಗ್ಗೆ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ನಿರ್ಮಾಪಕ ಅನಿಲ್‌ ಸುಂಕರ ತಮ್ಮ ಮನೆ ಅಡವಿಟ್ಟು, ಚಿರಂಜೀವಿಗೆ 65 ಕೋಟಿ ರೂ ಸಂಭಾವನೆ ನೀಡಿದ್ದಾರೆ. ಸಂಭಾವನೆ ನೀಡದೆ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಚಿರಂಜೀವಿ, ಅನಿಲ್‌ ಸುಂಕರಗೆ ಕಂಡಿಷನ್‌ ಹಾಕಿದ್ದರು ಎಂಬ ಮಾತು ಕೂಡಾ ಕೇಳಿಬಂದಿತ್ತು. ಆದರೆ ಚಿರು ಅಭಿಮಾನಿಗಳು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಪವನ್‌ ಕಲ್ಯಾಣ್‌ ಬ್ರೋ ಸಿನಿಮಾಗೂ ಹಿನ್ನಡೆ

ಇನ್ನು ಮತ್ತೊಂದೆಡೆ ಚಿರಂಜೀವಿ ಸಹೋದರ ಪವನ್‌ ಕಲ್ಯಾಣ್‌ 'ಬ್ರೋ' ಸಿನಿಮಾ ಕೂಡಾ ಸೋತಿದೆ. ಇದೂ ಕೂಡಾ 2021ರಲ್ಲಿ ತೆರೆ ಕಂಡ ತಮಿಳಿನ 'ವಿನೋಧ ಸೀತಂ' ಸಿನಿಮಾ ರೀಮೇಕ್‌. ಚಿತ್ರವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟರಿ ಹಾಗೂ ಜೀ ಸ್ಟುಡಿಯೋಸ್‌ ಬ್ಯಾನರ್‌ ಅಡಿ ತ್ರಿವಿಕ್ರಮ್‌ ಶ್ರೀನಿವಾಸ್‌ ಕಥೆ ಬರೆದು ಸಮುದ್ರಖನಿ ನಿರ್ದೇಶಿಸಿದ್ದಾರೆ. ಪವನ್‌ ಕಲ್ಯಾಣ್‌, ಸಾಯಿ ಧರ್ಮ ತೇಜ, ಕೇತಿಕಾ ಶರ್ಮಾ, ಪ್ರಿಯಾ ಪ್ರಕಾಶ್‌ ವಾರಿಯರ್‌, ಬ್ರಹ್ಮಾನಂದಂ, ಸುಬ್ಬರಾಜು ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಜುಲೈ 27ರಂದು ತೆರೆ ಕಂಡಿದ್ದ ಈ ಸಿನಿಮಾ ಇದುವರೆಗೂ 110 ಕೋಟಿ ರೂಪಾಯಿ ಮಾತ್ರವಷ್ಟೇ ಕಲೆಕ್ಷನ್‌ ಮಾಡಿದೆ.

ಒಟ್ಟಿನಲ್ಲಿ ಸ್ಟಾರ್‌ ನಟರು, ನಿರ್ದೇಶಕರ ಲೆಕ್ಕಾಚಾರ ತಲೆ ಕೆಳಗಾಗಿದೆ. ಅಣ್ಣ ತಮ್ಮಂದಿರ ರೀಮೇಕ್‌ ಸಿನಿಮಾಗಳು ಹೀನಾಯ ಸೋಲು ಕಂಡಿದ್ದು ನಿರ್ಮಾಪಕರು, ವಿತರಕರು ನಷ್ಟದಲ್ಲಿದ್ದಾರೆ ಎಂದು ಟಾಲಿವುಡ್‌ ಮೂಲಗಳು ಮಾಹಿತಿ ನೀಡಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ