ಎಲ್ಲಾ ನೀನೇ ನೋಡಿಕೋ ತಾಯಿ; ಡಿವೋರ್ಸ್ ವಿಚಾರವಾಗಿ ಸಚಿವೆ ಕೊಂಡಾ ಸುರೇಖಾ ಹೇಳಿಕೆ ನಂತರ ಲಿಂಗಭೈರವಿ ದರ್ಶನ ಪಡೆದ ಸಮಂತಾ
Oct 04, 2024 09:00 AM IST
ಎಲ್ಲಾ ನೀನೇ ನೋಡಿಕೋ ತಾಯಿ; ಡಿವೋರ್ಸ್ ವಿಚಾರವಾಗಿ ಸಚಿವೆ ಕೊಂಡಾ ಸುರೇಖಾ ಹೇಳಿಕೆ ನಂತರ ಲಿಂಗಭೈರವಿ ದರ್ಶನ ಪಡೆದ ಸಮಂತಾ
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಕೊಯಂಬತ್ತೂರಿನ ಈಶಾ ಫೌಂಡೇಶನ್‌ಗೆ ತೆರಳಿ ಲಿಂಗಭೈರವಿ ದರ್ಶನ ಪಡೆದಿದ್ದಾರೆ. ಸಚಿವೆ ಕೊಂಡಾ ಸುರೇಖಾ ಹೇಳಿಕೆ ನಂತರ ಡಿಸ್ಟರ್ಬ್ ಆಗಿದ್ದ ಸ್ಯಾಮ್, ದೇವಿ ದರ್ಶನ ಪಡೆದಿದ್ದಾರೆ. ದೇವಸ್ಥಾನ ಭೇಟಿಯ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ನವರಾತ್ರಿ ಶುಭಾಶಯ ಕೋರಿದ್ದಾರೆ.
ತೆಲಂಗಾಣ ಸಚಿವೆ ಕೊಂಡಾ ಸುರೇಖಾ ತಮ್ಮ ಡಿವೋರ್ಸ್ ವಿಚಾರವಾಗಿ ಅಸಭ್ಯ ಕಾಮೆಂಟ್ ಮಾಡಿದ ಬೆನ್ನಲ್ಲೇ ಟಾಲಿವುಡ್ ನಟಿ ಸಮಂತಾ ಕೊಯಂಬತ್ತೂರಿನ ಲಿಂಗಭೈರವಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದುಬಂದಿದ್ದಾರೆ. ಗುರುವಾರದಿಂದ ನವರಾತ್ರಿ ಆರಂಭವಾಗಿದೆ. ಮೊದಲ ದಿನ ಸಮಂತಾ ದೇವಿಯ ದರ್ಶನ ಪಡೆದಿದ್ದಾರೆ.
ಕೊಯಂಬತ್ತೂರಿನಲ್ಲಿರುವ ಲಿಂಗಭೈರವಿ ದೇವಸ್ಥಾನ
ಲಿಂಗಭೈರವಿ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಆಗ್ಗಾಗ್ಗೆ ಈಶಾ ಫೌಂಡೇಶನ್‌ಗೆ ಹೋಗಿ ಬರುತ್ತಾರೆ. ಪ್ರತಿ ಬಾರಿ ಮಹಾಶಿವರಾತ್ರಿ ಸಮಯದಲ್ಲಿ ಸದ್ಗುರು ಏರ್ಪಡಿಸುವ ಕಾರ್ಯಕ್ರಮದಲ್ಲಿ ಸಮಂತಾ ಭಾಗವಹಿಸಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಗುರುವಾರ ಸಮಂತಾ ಹಂಚಿಕೊಂಡಿರುವ ಫೋಟೋದಲ್ಲಿ ಕೆಂಪು ವಸ್ತ್ರ ಧರಿಸಿರುವ ಆಕೆ ಲಿಂಗಭೈರವಿ ಮುಂದೆ ಕೈ ಮುಗಿದು ನಿಂತಿದ್ದಾರೆ. ''ನಿನ್ನ ಮಾತುಗಳನ್ನು ಪಾಲಿಸುತ್ತೇನೆ ದೇವಿ ಧನ್ಯವಾದಗಳು, ನಿಮ್ಮೆಲ್ಲರಿಗೂ ನವರಾತ್ರಿ ಶುಭಾಶಯಗಳು'' ಎಂದು ಸಮಂತಾ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ನೀವು ಇನ್ನಷ್ಟು ಸ್ಟ್ರಾಂಗ್ ಆಗಿ, ದೇವಿ ನಿಮಗೆ ಒಳ್ಳೆಯದು ಮಾಡಲಿ ಎಂದು ಅಭಿಮಾನಿಗಳು ಸಮಂತಾಗೆ ಹಾರೈಸುತ್ತಿದ್ದಾರೆ.
ಕೊಂಡಾ ಸುರೇಖಾ ಅಸಭ್ಯ ಹೇಳಿಕೆ
ಡಿವೋರ್ಸ್ ನಂತರ ನಾಗಚೈತನ್ಯ ಅಭಿಮಾನಿಗಳು ಸಮಂತಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು, ಎಲ್ಲವೂ ಆಗಿದ್ದು ನಿಮ್ಮಿಂದಲೇ ಎಂದು ಆರೋಪಿಸಿದ್ದರು. ಜನರು ತಮ್ಮ ಕಡೆ ಬೆರಳು ತೋರಿದರೂ ಸಮಂತಾ, ಏನೂ ಆಗಿಲ್ಲ ಎಂಬಂತೆ ತಮ್ಮ ಪಾಡಿಗೆ ತಾವು ಇದ್ದರು. ಆದರೆ ಇದೀಗ ಮತ್ತೆ ಸಚಿವೆ ಕೊಂಡಾ ಸುರೇಖಾ ಮಾತುಗಳು ಸಮಂತಾ ಮತ್ತೆ ಸುದ್ದಿಯಾಗುವಂತೆ ಮಾಡಿದೆ. ತಮ್ಮ ಲಾಭಕ್ಕಾಗಿ ಮಾವ ಅಕ್ಕಿನೇನಿ ನಾಗಾರ್ಜುನ ಬಿಆರ್‌ಎಸ್ ನಾಯಕ ಕೆಟಿಆರ್ ಬಳಿ ಹೋಗುವಂತೆ ಸಮಂತಾರನ್ನು ಒತ್ತಾಯಿಸಿದ್ದರು. ಇದರಿಂದಲೇ ಸಮಂತಾ, ನಾಗ ಚೈತನ್ಯಗೆ ಡಿವೋರ್ಸ್ ನೀಡಿ, ಅವರ ಕುಟುಂಬದಿಂದ ದೂರಾದರು. ಕೆಟಿಆರ್ ಮೊದಲಿನಿಂದಲೂ ಅನೇಕ ಹೆಣ್ಣುಮಕ್ಕಳಿಗೆ ಇದೇ ರೀತಿ ಹಿಂಸೆ ಕೊಡುತ್ತಾ ಬಂದಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಮಂತಾ ಬೆಂಬಲಿಸಿದ ಟಾಲಿವುಡ್
ಕೊಂಡಾ ಸುರೇಖಾ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಮಂತಾ, ಅಕ್ಕಿನೇನಿ ನಾಗಾರ್ಜುನ, ಮಹೇಶ್ ಬಾಬು, ವಿಜಯ್ ದೇವರಕೊಂಡ, ಜ್ಯೂನಿಯರ್ ಎನ್‌ಟಿಆರ್ ಸೇರಿದಂತೆ ಟಾಲಿವುಡ್ ಗಣ್ಯರು ಸುರೇಖಾ ವಿರುದ್ದ ಕೋಪಗೊಂಡಿದ್ದರು. ನೀವೂ ಒಬ್ಬ ಮಹಿಳೆಯಾಗಿ, ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದಿದ್ದರು. ಕೆಟಿಆರ್ ಕೂಡಾ ಮಾನಹಾನಿ ನೋಟಿಸ್ ಕಳಿಸಿದ್ದರು. ಸಮಂತಾ ಕೂಡಾ ಪ್ರತಿಕ್ರಿಯಿಸಿ, ಡಿವೋರ್ಸ್ ನನ್ನ ವೈಯಕ್ತಿಕ ವಿಚಾರ, ಮತ್ತು ಅದರ ಬಗ್ಗೆ ಗಾಸಿಪ್‌ನಿಂದ ದೂರವಿರಲು ಬಯಸುತ್ತೇನೆ, ದಯವಿಟ್ಟು ಇಂತಹ ಹೇಳಿಕೆಗಳನ್ನು ನೀಡದಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಸಮಂತಾ ಸೋಷಿಯಲ್ ಮೀಡಿಯಾ ಮೂಲಕ ಸುರೇಖಾಗೆ ಮನವಿ ಮಾಡಿದ್ದರು.