Adipurush: ಆದಿಪುರುಷ್ ಸಿನಿಮಾ ನೋಡಲು ಟೋಕಿಯೋದಿಂದ ಸಿಂಗಾಪುರ್‌ವರೆಗೂ 5500 ಕಿ.ಮೀ ಪ್ರಯಾಣಿಸಿದ ಲೇಡಿ ಅಭಿಮಾನಿ!
Jun 23, 2023 11:16 PM IST
ಆದಿಪುರುಷ್ ಸಿನಿಮಾ ನೋಡಲು ಟೋಕಿಯೋದಿಂದ ಸಿಂಗಾಪುರ್‌ವರೆಗೂ 5500 ಕಿ.ಮೀ ಪ್ರಯಾಣಿಸಿದ ಲೇಡಿ ಅಭಿಮಾನಿ!
- ಆದಿಪುರುಷ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ದೂರದ ಟೋಕಿಯೋದಿಂದ ಸಿಂಗಾಪುರ್‌ವರೆಗೂ ಪ್ರಯಾಣ ಮಾಡಿ ಸಿನಿಮಾ ಕಣ್ತುಂಬಿಕೊಂಡಿದ್ದಾರೆ ಪ್ರಭಾಸ್ ಅವರ ಲೇಡಿ ಅಭಿಮಾನಿ.
Adipurush: ಟಾಲಿವುಡ್ ನಟ ಪ್ರಭಾಸ್ ಕೇವಲ ತೆಲುಗು ರಾಜ್ಯಗಳು, ದಕ್ಷಿಣ ಭಾರತ, ಇಡೀ ದೇಶಕ್ಕೆ ಸೀಮಿತವಾದ ನಟನಾಗಿ ಬೆಳೆದಿಲ್ಲ. ಅದಕ್ಕೂ ಮಿಗಿಲಾಗಿ ವಿದೇಶಗಳಲ್ಲಿಯೂ ಇವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಾಹುಬಲಿ ಸಿನಿಮಾ ಬಿಡುಗಡೆ ಬಳಿಕ ಪ್ರಭಾಸ್ ಗ್ಲೋಬಲ್ ಸ್ಟಾರ್ ಆಗಿ ಬೆಳೆದರು. ಇದೀಗ ಇದೇ ನಟ ಸಿನಿಮಾ ನೋಡಲು ಅಭಿಮಾನಿಯೊಬ್ಬರು ಬರೋಬ್ಬರಿ 5500 ಕಿ. ಮೀಟರ್ ಪ್ರಯಾಣ ಮಾಡಿದ್ದಾರೆ!
ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಸದ್ಯ ಟಾಕ್‌ನಲ್ಲಿರುವ ಸಿನಿಮಾ. ಪಾಸಿಟಿವ್ ವಿಚಾರಕ್ಕಿಂತ ನೆಗೆಟಿವ್ ಪ್ರಚಾರವೇ ಸಿನಿಮಾಕ್ಕೆ ಹೆಚ್ಚು ದಕ್ಕುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಸಿನಿಮಾವನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಇದೆಲ್ಲದರ ನಡುವೆಯೇ ವಿದೇಶಿ ಮಹಿಳಾ ಅಭಿಮಾನಿಯೊಬ್ಬರು ಆದಿಪುರುಷ್ ಸಿನಿಮಾ ನೋಡಲೆಂದೇ ಬರೋಬ್ಬರಿ 5500 ಕಿ ಮೀ ಪ್ರಯಾಣ ಮಾಡಿ ಸಿನಿಮಾ ವೀಕ್ಷಿಸಿದ್ದಾರೆ. ಜಪಾನ್‌ನಲ್ಲಿ ಆದಿಪುರುಷ್ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆ ಕಾರಣಕ್ಕೆ ಸುದೀರ್ಘ ಪ್ರಯಾಣ ಬೆಳೆಸಿದ್ದಾರೆ.
'ಬಾಹುಬಲಿ' ನಂತರ ಪ್ರಭಾಸ್ ಅಭಿನಯದ 'ಸಾಹೋ' ಮತ್ತು 'ರಾಧೆ ಶ್ಯಾಮ್' ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಪ್ರಭಾಸ್‌ಗೆ ಅವರ ರೇಂಜ್‌ಗೆ ತಕ್ಕಂತೆ ಆ ಸಿನಿಮಾಗಳು ದೊಡ್ಡ ಹಿಟ್ ಆಗಲಿಲ್ಲ. ಆದಿಪುರುಷ್ ಸಿನಿಮಾದ ಮೇಲೆಯೂ ಪ್ರಭಾಸ್ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆಯೂ ಸಿಕ್ಕಿದೆ. ಒಂದೆಡೆ ಟೀಕೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ. ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಸಿನಿಮಾ ರಿಲೀಸ್ ಆಗಿ ಗಳಿಕೆ ಮುಂದುವರಿಸಿದೆ.
ಟೋಕಿಯೋ ನಿವಾಸಿ ನೊಲ್ಕೋ ಎಂಬ ಮಹಿಳೆ ಪ್ರಭಾಸ್ ಅವರ ಕಟ್ಟಾ ಅಭಿಮಾನಿ. ಅದ್ಯಾವ ಮಟ್ಟಿಗೆ ಎಂದರೆ, ಪ್ರಭಾಸ್ ಅವರ ಸಲುವಾಗಿಯೇ ನೊಲ್ಕೋ ತೆಲುಗು ಕಲಿತಿದ್ದಾರೆ. ಇದೀಗ ತೆಲುಗಿನಲ್ಲಿಯೇ ಮಾತನಾಡಿ, ಸಿನಿಮಾ ವೀಕ್ಷಣೆ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಟೋಕಿಯೋದಿಂದ ಆದಿಪುರುಷ್ ಸಿನಿಮಾ ನೋಡಲು ಸಿಂಗಾಪುರ್‌ಗೆ ಬಂದಿದ್ದೇನೆ ಎಂದು ಹೇಳುತ್ತ ಪ್ರಭಾಸ್ ಅವರ ಫೋಟೋವನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರತಂಡದ ಗಮನಕ್ಕೂ ಬಂದಿದೆ. ಅಂದಹಾಗೆ, ಈ ಎರಡೂ ನಗರಗಳ ನಡುವಿನ ಅಂತರ ಬರೋಬ್ಬರು 5500 ಕಿ ಮೀ!
ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ, ಸನ್ನಿ ಸಿಂಗ್ ಲಕ್ಷ್ಮಣನಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ಬರಲಿದ್ಯಾ ಆದಿಪುರುಷ್ ಪಾರ್ಟ್ 2
ಆದಿಪುರುಷ್ 2 ಕೂಡಾ ಬರ್ತಿದೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಖುಷಿ ನೀಡಿದರೂ, ಬೇರೆಯವರಿಗೆ ಶಾಕ್ ಆಗಿದೆ. ಮೊದಲ ಸಿನಿಮಾ ಸೃಷ್ಟಿಸಿದ ಅವಾಂತರಗಳು ಇಷ್ಟು, ಇನ್ನು ಸೀಕ್ವೆಲ್ ಯಾವ ರೀತಿ ಇರುತ್ತೋ ಎಂದು ಯೋಚಿಸುತ್ತಿದ್ದಾರೆ. ಆದರೆ ವಿಷಯವೇ ಬೇರೆ. ಆದಿಪುರುಷ್ ರಾಮಾಯಣ ಆಧರಿಸಿದ ಚಿತ್ರ. ರಾಮಾಯಣದ ಕಥೆಯನ್ನು ಒಂದೇ ಸೀಕ್ವೆಲ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಓಂ ರಾವುತ್ ಈ ಸಿನಿಮಾವನ್ನು 2 ಭಾಗಗಳಾಗಿ ತೆರೆಗೆ ತರಲು ಪ್ಲಾನ್ ಮಾಡಿ ಎಲ್ಲಾ ತಂತ್ರಜ್ಞರನ್ನು ಒಪ್ಪಿಸಿದ್ದರಂತೆ. ಪ್ರಭಾಸ್‌ಗೆ ಕೂಡಾ ಕಾಲ್‌ಶೀಟ್ ಕೇಳಿದ್ದರಂತೆ. ಆದರೆ ಪ್ರಭಾಸ್, ಸೀಕ್ವೆಲ್‌ಗೆ ಒಪ್ಪಲಿಲ್ಲ ಎಂಬ ಸುದ್ದಿ ಈಗ ಬೆಳಕಿಗೆ ಬಂದಿದೆ.