logo
ಕನ್ನಡ ಸುದ್ದಿ  /  ಮನರಂಜನೆ  /  Prem Chopra: ಬದುಕಿರುವಾಗಲೇ ಸಮಾಧಿ ಕಟ್ಟಬೇಡಿ...ಬಾಲಿವುಡ್ ಹಿರಿಯ ನಟ ಹೀಗೆ ಮನವಿ ಮಾಡಿದ್ದೇಕೆ..?

Prem Chopra: ಬದುಕಿರುವಾಗಲೇ ಸಮಾಧಿ ಕಟ್ಟಬೇಡಿ...ಬಾಲಿವುಡ್ ಹಿರಿಯ ನಟ ಹೀಗೆ ಮನವಿ ಮಾಡಿದ್ದೇಕೆ..?

HT Kannada Desk HT Kannada

Jul 28, 2022 09:30 PM IST

google News

ಬಾಲಿವುಡ್ ಹಿರಿಯ ನಟ ಪ್ರೇಮ್ ಚೋಪ್ರಾ

  • ''ನಿನ್ನೆ ಬೆಳಗ್ಗೆಯಿಂದ ನನಗೆ ಅನೇಕ ಫೋನ್ ಕರೆಗಳು ಬರುತ್ತಿವೆ. ಸೆಲೆಬ್ರಿಟಿ ಸ್ನೇಹಿತರು ಕರೆ ಮಾಡಿ ಎಲ್ಲವೂ ಸರಿಯಾಗಿದೆಯೇ ಎಂದು ಕೇಳುತ್ತಿದ್ದಾರೆ. ನಾನು ಸತ್ತಿದ್ದೇನೆ ಎಂದು ಯಾರು ಪ್ರಚಾರ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ'' ಎಂದು ಹಿರಿಯ ನಟ ಮನವಿ ಮಾಡಿದ್ದಾರೆ.

ಬಾಲಿವುಡ್ ಹಿರಿಯ ನಟ ಪ್ರೇಮ್ ಚೋಪ್ರಾ
ಬಾಲಿವುಡ್ ಹಿರಿಯ ನಟ ಪ್ರೇಮ್ ಚೋಪ್ರಾ

ಸಿನಿಮಾ ಎಂದರೆ ಗಾಸಿಪ್ ಸಹಜ. ಆದರೆ ಕೆಲವೊಮ್ಮೆ ಅದು ನಟ ನಟಿಯರಿಗೆ ಇರಿಸುಮುರಿಸಾಗುವಂತೆ ಇರುತ್ತದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬದುಕಿರುವ ನಟ ನಟಿಯರನ್ನು ಸಾಯಿಸೇ ಬಿಡುತ್ತಾರೆ. ನಟ ನಟಿಯರು ಬದುಕಿರುವಾಗಲೇ ಅವರು ಸಾವನ್ನಪ್ಪಿದ್ಧಾರೆ ಎಂದು ಕೆಲವು ವಿಕೃತ ಮನಸ್ಸಿನವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇಂತಹ ಎಷ್ಟೋ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಇದೀಗ ಖ್ಯಾತ ಬಾಲಿವುಡ್ ಹಿರಿಯ ನಟ ಪ್ರೇಮ್ ಚೋಪ್ರಾ ವಿಚಾರದಲ್ಲಿ ಕೂಡಾ ಆಗಿರುವುದು ಇದೇ.

ಬಾಲಿವುಡ್ ಹಿರಿಯ ನಟ ಪ್ರೇಮ್ ಚೋಪ್ರಾ ನಿಧನರಾಗಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜನರು ಇದನ್ನು ನಿಜ ಎಂದು ಭಾವಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದು ಪ್ರೇಮ್ ಚೋಪ್ರಾ ಕಿವಿಗೂ ಬಿದ್ದಿದೆ. ಈ ವಿಚಾರವಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬದುಕಿರುವಾಗಲೇ ಸಮಾಧಿ ಕಟ್ಟುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ನಾನಿನ್ನೂ ಬದುಕಿದ್ದೇನೆ, ಆರೋಗ್ಯವಾಗಿದ್ದೇನೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.

ತಮ್ಮ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿರುವ ಪ್ರೇಮ್ ಚೋಪ್ರಾ ''ನಾನು ಬದುಕಿರುವಾಗಲೇ ನನ್ನನ್ನು ಕೊಲ್ಲುತ್ತಿದ್ದಾರೆ. ಇದನ್ನು ಸ್ಯಾಡಿಸಂ ಎಂದು ಕರೆಯಲಾಗುತ್ತದೆ. ನಾನು ಇನ್ನಿಲ್ಲ ಎಂದು ವದಂತಿ ಹಬ್ಬಿಸಿ ಯಾರೋ ಖುಷಿ ಪಡುತ್ತಿದ್ದಾರೆ. ಆದರೆ ನಾನು ನಿಮ್ಮೊಂದಿಗೆ ಹೃದಯದಿಂದ ಮಾತನಾಡುತ್ತೇನೆ. ನಿನ್ನೆ ಬೆಳಗ್ಗೆಯಿಂದ ನನಗೆ ಅನೇಕ ಫೋನ್ ಕರೆಗಳು ಬರುತ್ತಿವೆ. ಸೆಲೆಬ್ರಿಟಿ ಸ್ನೇಹಿತರು ಕರೆ ಮಾಡಿ ಎಲ್ಲವೂ ಸರಿಯಾಗಿದೆಯೇ ಎಂದು ಕೇಳುತ್ತಿದ್ದಾರೆ. ನಾನು ಸತ್ತಿದ್ದೇನೆ ಎಂದು ಯಾರು ಪ್ರಚಾರ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಹಿಂದೆ ನನ್ನ ಆತ್ಮೀಯ ಗೆಳೆಯ ಜಿತೇಂದ್ರನ ಬಗ್ಗೆಯೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈಗ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ'' ಎಂದು ಹಿರಿಯ ನಟ ಮನವಿ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಪ್ರೇಮ್ ಚೋಪ್ರಾ ಹಾಗೂ ಅವರ ಪತ್ನಿ ಉಮಾ ಇಬ್ಬರೂ ಕೋವಿಡ್ ಸೋಂಕಿಗೆ ತುತ್ತಾಗಿ ಮುಂಬೈ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಇಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗಿತ್ತು. ಪ್ರೇಮ್ ಚೋಪ್ರಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಅವರು ದೋಸ್ತಾನಾ, ಕ್ರಾಂತಿ, ಜನವರ್, ಶಹೀದ್, ಉಪಕಾರ್, ಪುರಬ್ ಔರ್ ಪಶ್ಚಿಮ್, ದೋ ರಸ್ತೆ, ಕಾಟಿ ಪಥಂಗ್, ದೋ ಆಂಜನೇ, ಜಾದು ಟೋನಾ, ಕಾಲಾ ಸೋನಾ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮ್ಮ ಬಗೆಗಿನ ಸುಳ್ಳು ಸುದ್ದಿಗೆ ಬೇಸರ ವ್ಯಕ್ತಪಡಿಸಿದ್ದ ತಮಿಳು ನಟ ವಿಕ್ರಮ್

ತಮಿಳು ನಟ ವಿಕ್ರಮ್ ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಗುಣಮುಖರಾಗಿದ್ದರು. ಅವರಿಗೆ ಹೃದಯಾಘಾತವಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಸುದ್ದಿ ಕೂಡಾ ವೈರಲ್ ಆಗಿತ್ತು. ಆದರೆ ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ಹಾಗೂ ಆಸ್ಪತ್ರೆ ವೈದ್ಯರು ವಿಕ್ರಮ್​​ಗೆ ಹೃದಯಾಘಾತವಾಗಿರಲಿಲ್ಲ. ಎದೆಯಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿತ್ತು ಅಷ್ಟೇ ಅವರು ಈಗ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ಎದೆ ಮೇಲೆ ಕೈ ಇಟ್ಟರೂ, ಹಾರ್ಟ್ ಅಟ್ಯಾಕ್ ಎಂದುಕೊಳ್ಳುತ್ತಾರೆ ಎಂಬ ಭಯ, ಸೋಷಿಯಲ್ ಮೀಡಿಯಾ ಹಾಗೂ ಇತರ ಮಾಧ್ಯಮಗಳಲ್ಲಿ ನನ್ನ ಅನಾರೋಗ್ಯದ ಬಗ್ಗೆ ಹರಿದಾಡಿದ್ದ ಸುದ್ದಿಯನ್ನು ನೋಡಿದೆ. ಕೆಲವರು ಬೇರೆ ಯಾರೋ ರೋಗಿಯ ದೇಹಕ್ಕೆ ನನ್ನ ತಲೆ ಸೇರಿಸಿ ಬಹಳ ಗಂಭೀರ ಎಂದು ಬರೆದಿದ್ದರು. ನಿಮ್ಮೆಲ್ಲರ ಕ್ರಿಯೇಟಿವಿಟಿ ಚೆನ್ನಾಗಿದೆ, ನನಗೆ ಇಷ್ಟವಾಯ್ತು. ಆದರೂ ಪರವಾಗಿಲ್ಲ, ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ನೋಡಿದ್ದೇನೆ. ಅದರ ಮುಂದೆ ಇದೇನು ಅಲ್ಲ, ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಎಲ್ಲರೂ ನನಗೆ ಬೆನ್ನುಲುಬಾಗಿ ನಿಂತಿದ್ದೀರಿ, ನನಗೆ ಏನೂ ಆಗುವುದಿಲ್ಲ ಎಂದು ಹೇಳಿಕೊಂಡು ಪರೋಕ್ಷವಾಗಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ