Hosa Dinachari Poster Released: ಹೊಸಬರ 'ಹೊಸ ದಿನಚರಿ' ಚಿತ್ರಕ್ಕೆ ನಿರ್ದೇಶಕ ಟಿ.ಎಸ್.ನಾಗಾಭರಣ ಸಾಥ್
Oct 20, 2022 07:02 PM IST
'ಹೊಸ ದಿನಚರಿ' ಚಿತ್ರತಂಡ
- ಸ್ಯಾಂಡಲ್‌ವುಡ್ ಹಿರಿಯ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಪೋಸ್ಟರ್ ಬಿಡುಗಡೆ ಮಾಡಿ 'ಹೊಸ ದಿನಚರಿ' ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊಸ ಹೊಸ ಪ್ರತಿಭೆಗಳು ಬೆಂಗಳೂರು ಹಾದಿ ಹಿಡಿಯುತ್ತಾರೆ. ಸಿನಿಪ್ರಿಯರು ಕೂಡಾ ಹೊಸಬರ ಚಿತ್ರಗಳನ್ನು ನೋಡಿ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ಹೊಸ ಚಿತ್ರತಂಡ 'ಹೊಸ ದಿನಚರಿ' ಎಂಬ ಚಿತ್ರವನ್ನು ನಿರ್ಮಿಸಿದ್ದು ಇತ್ತೀಚೆಗೆ ಪೋಸ್ಟರ್ ಬಿಡುಗಡೆ ಸಮಾರಂಭ ಕೂಡಾ ಮಾಡಿದೆ.
ಸ್ಯಾಂಡಲ್‌ವುಡ್ ಹಿರಿಯ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಪೋಸ್ಟರ್ ಬಿಡುಗಡೆ ಮಾಡಿ 'ಹೊಸ ದಿನಚರಿ' ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಚಿತ್ರದ ಟ್ರೇಲರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚಾಗಿ ಸ್ಯಾಂಡಲ್‌ವುಡ್‌ಗೆ ಬರಬೇಕು. ಕನ್ನಡ ಚಿತ್ರರಂಗವನ್ನು ಮತ್ತಷ್ಟು ಬೆಳೆಸಬೇಕು ಎಂದು ಹಾರೈಸಿದರು.
ಚಿತ್ರವನ್ನು ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ನಿರ್ದೇಶಿಸಿದ್ದಾರೆ. ''ಎಲ್ಲರ ಜೀವನದಲ್ಲೂ ಪ್ರೀತಿ ಇದ್ದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುವುದಿಲ್ಲ. ಅವರ ಬದಲಿಗೆ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೇ 'ಹೊಸ ದಿನಚರಿ'ಯ ಕಥಾಸಾರಾಂಶ. ನಾವು ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ಮಾಡಿರುವ ಅನುಭವ ಇದೆ. ಸಿನಿಮಾ ಮಾಡುವ ನಮ್ಮ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ. ಡಿಸೆಂಬರ್ 9 ರಂದು ಚಿತ್ರ ತೆರೆಗೆ ಬರುತ್ತಿದೆ ಪ್ರೋತ್ಸಾಹ ನೀಡಿ'' ಇಬ್ಬರೂ ನಿರ್ದೇಶಕರು ಸಿನಿಪ್ರಿಯರಿಗೆ ಮನವಿ ಮಾಡಿದರು.
ಚಿತ್ರದ ನಿರ್ಮಾಪಕ ಇದಕ್ಕೂ ಮುನ್ನ 'ಆಯನ' ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಸಿನಿಮಾಗೆ ಶುಭ ಕೋರಿದ ನಿರ್ದೇಶಕ ನಾಗಾಭರಣ ಅವರಿಗೆ ನಿರ್ಮಾಪಕ ಗಂಗಾಧರ ಸಾಲಿಮಠ ಧನ್ಯವಾದ ಅರ್ಪಿಸಿದರು. ಚಿತ್ರದ ನಾಯಕರಾದ ದೀಪಕ್ ಸುಬ್ರಹ್ಮಣ್ಯ ಹಾಗೂ ಚೇತನ್ ವಿಕ್ಕಿ, ನಟಿಯರಾದ ಮಂದಾರ ಹಾಗೂ ವರ್ಷ, ಛಾಯಾಗ್ರಾಹಕ ರಾಕಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು 'ಹೊಸ ದಿನಚರಿ' ಚಿತ್ರದ ಬಗ್ಗೆ ಮಾತನಾಡಿದರು. 'ಹೊಸ ದಿನಚರಿ' ಚಿತ್ರದಲ್ಲಿ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಹಾಗೂ ಇನ್ನಿತರರು ನಟಿಸಿದ್ದಾರೆ.