logo
ಕನ್ನಡ ಸುದ್ದಿ  /  ಮನರಂಜನೆ  /  Karnataka Budget 2023: ಕನ್ನಡ ಚಿತ್ರರಂಗಕ್ಕೆ ಈ ಬಾರಿ ಬಜೆಟ್‌ನಲ್ಲಿ ಸಿಕ್ಕಿದ್ದೇನು... ಫಿಲ್ಮ್‌ ಸಿಟಿಗೆ ಸಂಬಂಧಿಸಿದ ಮನವಿ ಏನಾಯ್ತು..?

Karnataka Budget 2023: ಕನ್ನಡ ಚಿತ್ರರಂಗಕ್ಕೆ ಈ ಬಾರಿ ಬಜೆಟ್‌ನಲ್ಲಿ ಸಿಕ್ಕಿದ್ದೇನು... ಫಿಲ್ಮ್‌ ಸಿಟಿಗೆ ಸಂಬಂಧಿಸಿದ ಮನವಿ ಏನಾಯ್ತು..?

HT Kannada Desk HT Kannada

Feb 17, 2023 02:58 PM IST

google News

2023 ಬಜೆಟ್‌ನಲ್ಲೂ ಫಿಲ್ಮ್‌ ಸಿಟಿ ನಿರ್ಮಾಣದ ಬೇಡಿಕೆ ಈಡೇರಿಲ್ಲ

    • ಸಿಎಂ ಬೊಮ್ಮಾಯಿ ಕೂಡಾ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು. ಇದರಿಂದ ಈ ಬಾರಿ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಏನಾದರೂ ಬಂಪರ್‌ ದೊರೆಯಬಹುದು ಎನ್ನಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿದೆ. ಚಿತ್ರರಂಗಕ್ಕೆ ಹೇಳಿಕೊಳ್ಳುವಂತ ಘೋಷಣೆ ಏನೂ ಆಗಿಲ್ಲ.
2023 ಬಜೆಟ್‌ನಲ್ಲೂ ಫಿಲ್ಮ್‌ ಸಿಟಿ ನಿರ್ಮಾಣದ ಬೇಡಿಕೆ ಈಡೇರಿಲ್ಲ
2023 ಬಜೆಟ್‌ನಲ್ಲೂ ಫಿಲ್ಮ್‌ ಸಿಟಿ ನಿರ್ಮಾಣದ ಬೇಡಿಕೆ ಈಡೇರಿಲ್ಲ

ಪ್ರತಿ ಬಾರಿ ಬಜೆಟ್‌ ಘೋಷಣೆಯಾಗುತ್ತಿದ್ದಂತೆ ಪ್ರತಿ ಕ್ಷೇತ್ರದವರೂ, ನಮಗೆ ಏನು ಕೊಡುಗೆ ದೊರೆಯಬಹುದು ಎಂಬ ಕುತೂಹಲ ಹಾಗೂ ನಿರೀಕ್ಷೆಯಿಂದ ಕಾಯುತ್ತಾರೆ. ಅದೇ ರೀತಿ ಸಿನಿಮಾರಂಗ ಕೂಡಾ ಈ ಬಾರಿ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ದೊಡ್ಡ ಕೊಡುಗೆ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಕನ್ನಡ ಚಿತ್ರರಂಗಕ್ಕೆ ಬಜೆಟ್‌ನಲ್ಲಿ ಅಂತಹ ಕೊಡುಗೆ ನೀಡಿಲ್ಲ.

ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತೆ ಫಿಲ್ಮ್‌ ಸಿಟಿ ನಿರ್ಮಾಣ ಮಾಡಬೇಕು ಎನ್ನವುದು ಬಹಳ ವರ್ಷಗಳ ಕನಸು. ಪ್ರತಿ ಬಾರಿಯೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿನಿಮಾ ಗಣ್ಯರು ಪ್ರತಿ ಬಾರಿ ಆಡಳಿತ ಪಕ್ಷದ ಬಳಿ ತೆರಳಿ ಮನವಿ ಮಾಡುತ್ತಲೇ ಇದ್ದಾರೆ. ಸಿಎಂ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಒಂದಿಷ್ಟು ಅನುದಾನ ಘೋಷಿಸಿದ್ದರು. ಆದರೆ ಯಾವುದೂ ಇನ್ನೂ ಕೈಗೂಡಿಲ್ಲ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರನ್ನೊಳಗೊಂಡ ನಿಯೋಗ, ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಹೋಗಿ ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಾಣ ಘೋಷಣೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮನವಿ ಮಾಡಿದ್ದರು. ಜೊತೆಗೆ ಸಿಎಂ ಬೊಮ್ಮಾಯಿ ಕೂಡಾ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದರು. ಇದರಿಂದ ಈ ಬಾರಿ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ಏನಾದರೂ ಬಂಪರ್‌ ದೊರೆಯಬಹುದು ಎನ್ನಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಸುಳ್ಳಾಗಿದೆ. ಚಿತ್ರರಂಗಕ್ಕೆ ಹೇಳಿಕೊಳ್ಳುವಂತ ಘೋಷಣೆ ಏನೂ ಆಗಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಇತರ ಟೈರ್‌ 2 ನಗರಗಳಲ್ಲಿ ( 50,000-100,000 ಜನಸಂಖ್ಯೆ ಇರುವ ನಗರಗಳು) 100 ರಿಂದ 200 ಆಸನಗಳ ಸಾಮರ್ಥ್ಯ ಇರುವ ಮಿನಿ ಥಿಯೇಟರ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಾಗಿ ಸಿಎಂ ಹೇಳಿದ್ದಾರೆ. ಇದರ ಜೊತೆಗೆ ಈ ವರ್ಷ ಸುಮಾರು 200 ಸಿನಿಮಾಗಳಿಗೆ ಸಬ್ಸಿಡಿ ನೀಡುವುದು ಸೇರಿದಂತೆ ರಾಜ್ಯದ ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಜಾಗಗಳನ್ನು ಗುರುತಿಸಿ ನಟ, ಕರಾಟೆ ಕಿಂಗ್‌ ಶಂಕರ್‌ನಾಗ್‌ ಅವರ ಹೆಸರಿನಲ್ಲಿ ಟ್ಯಾಕ್ಸಿ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದನ್ನು ಹೊರತುಪಡಿಸಿ ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ನಾಗ್‌ ಅವರ ಹೆಸರಿಡುವುದು, ಫಿಲ್ಮ್‌ ಸಿಟಿ ನಿರ್ಮಾಣ ಹಾಗೂ ಇನ್ನಿತರ ಪ್ರಮುಖ ಬೇಡಿಕೆಗಳು ಈ ಬಾರಿ ಕೂಡಾ ಈಡೇರಿಲ್ಲ.

ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಾಣಕ್ಕೆ ಮನವಿ

ಸಾಂಸ್ಕೃತಿಕ ನಗರಿ ಮೈಸೂರು ಚಿತ್ರರಂಗದ ಗಣ್ಯರು ಬಹಳ ಇಷ್ಟಪಡುವ ಸ್ಥಳ. ಮೈಸೂರಿನ ಸುತ್ತಮುತ್ತ 200ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಿದೆ. ಇಂತಹ ಭವ್ಯ ಪರಂಪರೆಯುಳ್ಳ ಐತಿಹಾಸಿಕ ನಗರಿಯಲ್ಲಿ ಫಿಲ್ಮ್‌ ಸಿಟಿ ಸ್ಥಾಪಿಸಬೇಕೆಂಬುದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಲವು ಚಿತ್ರರಂಗದ ಗಣ್ಯರ ಅಭಿಪ್ರಾಯವಾಗಿದೆ. ಕೆಲವು ದಿನಗಳ ಹಿಂದೆ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಫಿಲ್ಮ್‌ ಸಿಟಿ ವಿಚಾರವನ್ನು ಚರ್ಚಿಸಿದ್ದರು. ಆಗ ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಾಣ ಮಾಡುವ ವಿಷಯ ಕೂಡಾ ಪ್ರಸ್ತಾಪವಾಗಿತ್ತು. ಈ ಕುರಿತು ರಿಪೋರ್ಟ್ ಸಿದ್ದ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿ ಕೂಡಾ ಸೂಚಿಸಿದ್ದರು.

ಫೆಬ್ರವರಿ 9 ರಂದು ಕೃಷ್ಣೇಗೌಡ ನೇತೃತ್ವದಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಇನ್ನಿತರರು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ''ಮೈಸೂರಿನಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವುದು ಡಾ. ರಾಜ್‌ ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಹಾಗೂ ಎಲ್ಲರ ಕನಸ್ಸಾಗಿತ್ತು. ತೆಲುಗು, ತಮಿಳು, ಹಿಂದಿ ಸಿನಿಮಾ ತಂತ್ರಜ್ಞರಿಗೂ ಮೈಸೂರು ಮೆಚ್ಚಿನ ತಾಣ. ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರಕ್ಕೆ ಶಿವರಾಜ್‌ಕುಮಾರ್, ರಾಕ್ ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ ಸೇರಿದಂತೆ 20 ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟರಾದ ಧರ್ಮೇಂದ್ರ, ಹೇಮಮಾಲಿನಿ ಕೂಡಾ ಸಹಿ‌ ಮಾಡಿ, ಒಂದು ಪತ್ರ ಕಳಿಹಿಸಿದ್ದಾರೆ‌. ಧರ್ಮೇಂದ್ರ ಅವರ ಸಿನಿ ಕರಿಯರ್‌ ಆರಂಭವಾಗಿದ್ದು ಮೈಸೂರಿನಲ್ಲೇ ಆದ್ದರಿಂದ ಅವರಿಗೂ ಈ ಸ್ಥಳ ಬಹಳ ಅಚ್ಚುಮೆಚ್ಚು'' ಎಂದು ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ