ಭೈರತಿ ರಣಗಲ್‌ನಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ಏನು ಪಾತ್ರ? ತನ್ನವರನ್ನು ಕೊಲ್ಲುವ ರಣಭೀಕರ ಕಟುಕನೆದುರು ನಿಂತ ಪುಟಾಣಿ
Nov 18, 2024 05:54 PM IST
ಭೈರತಿ ರಣಗಲ್‌ನಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ಏನು ಪಾತ್ರ?
- Bhairathi Ranagal: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದಲ್ಲಿ ನಮ್ಮಮ್ಮ ಸೂಪರ್‌ಸ್ಟಾರ್, ಗಿಚ್ಚಿ ಗಿಲಿಗಿಲಿ ಟೆಲಿವಿಷನ್ ಶೋಗಳಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ಬಾಲ ಕಲಾವಿದೆ ಮಹಿತಾಳ ಪಾತ್ರವೇನು? ಆಕೆಯ ನಟನೆ ಹೇಗಿತ್ತು? ತಿಳಿಯೋಣ ಬನ್ನಿ.
Bhairathi Ranagal: ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾವು ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದೊಂದಿಗೆ ಇನ್ನೂ ಕೆಲವು ಪಾತ್ರಗೂ ಗಮನ ಸೆಳೆಯುತ್ತವೆ. ಅಮೃತಧಾರೆ ಧಾರಾವಾಹಿಯ ಭೂಮಿಕಾ ಪಾತ್ರ ಮಾಡುತ್ತಿರುವ ಭೂಮಿ ಸಿಂಗ್ ಮಫ್ತಿಯಂತೆ ಈ ಸಿನಿಮಾದಲ್ಲಿಯೂ ಮುಂದುವರೆದಿದ್ದಾರೆ. ಶಿವಣ್ಣನ ಸಹೋದರಿಯಾಗಿ ನಟಿಸಿರುವ ಈಕೆ ಒಂದಿಷ್ಟು ಸಮಯ ವಿದೇಶದಲ್ಲಿ, ಇನ್ನೊಂದಿಷ್ಟು ಸಮಯ ರಣಗಲ್ ಜತೆ ಇರುತ್ತಾರೆ. ಗರ್ಭಿಣಿಯಾಗಿ ಸ್ಟೇಷನ್ ಮುಂದೆ ನಿಲ್ಲುವಂತಹ ಮತ್ತು ತನ್ನ ಗಂಡನನ್ನು ಅಣ್ಣ ಕೊಂದಾಗ ಮಾತು ಬಿಡುವಂತಹ ಪಾತ್ರಗಳಲ್ಲಿ ಇವರು ಗಮನ ಸೆಳೆಯುತ್ತಾರೆ.
ಭೈರತಿ ರಣಗಲ್ ಸಿನಿಮಾದಲ್ಲಿ ಭಾವನಾತ್ಮಕವಾಗಿ ಗಮನ ಸೆಳೆಯುವಂತಹ ಅಂಶಗಳು ಕೆಲವೇ ಕೆಲವು ಮಾತ್ರ ಇವೆ. ಉಳಿದಂತೆ ಶಿವರಾಜ್ ಕುಮಾರ್‌ನ ಅಬ್ಬರಕ್ಕೆ ಚಿತ್ರ ಸೀಮಿತವಾಗಿ ಬಿಡುತ್ತದೆ. ಈ ಸಿನಿಮಾದಲ್ಲಿ ಖಳ ನಾಯಕನ ಪಾತ್ರದಲ್ಲಿದ್ದ ರಾಹುಲ್ ಬೋಸ್‌ಗಿಂತ ಶಬೀರ್ ಕಲ್ಲರಕ್ಕಲ್ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಈತ ಈ ಚಿತ್ರದಲ್ಲಿ ಅತಿಕ್ರೂರವಾಗಿ ಕಾಣಿಸುತ್ತಾನೆ. ವಿಶೇಷವಾಗಿ ಚಿತ್ರದ ಆರಂಭದಲ್ಲಿಯೇ ಅನಿರೀಕ್ಷಿತವಾಗಿ ವ್ಯಕ್ತಿಯೊಬ್ಬರ ಕೈ ಕತ್ತರಿಸಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾರೆ. ಈ ಮೂಲಕ ಈತ ಈ ಸಿನಿಮಾದ ಮಹಾ ಕಟುಕ ಎಂಬ ಭಾವ ಚಿತ್ರದ ಉದ್ದಕ್ಕೂ ಮೂಡುತ್ತದೆ. ಈ ಪಾತ್ರದ ಎದುರು ನಿಲ್ಲುವಂತಹ ಅಸಹಾಯಕ ಪಾತ್ರದಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ದೊರಕಿದೆ.
ಭೈರತಿ ರಣಗಲ್‌ನಲ್ಲಿ ಮಹಿತಾಳ ಪಾತ್ರವೇನು?
ಈಗಾಗಲೇ ಹೇಳಿದಂತೆ ಭೈರತಿ ರಣಗಲ್‌ನಲ್ಲಿ ಭಾವನಾತ್ಮಕವಾಗಿ ಕನೆಕ್ಟ್ ಆಗುವಂತಹ ಅಂಶಗಳು ಸ್ವಲ್ಪ ಮಾತ್ರ ಇದೆ. ಅವುಗಳಲ್ಲಿ ಈ ಪುಟಾಣಿ ಮಹಿತಾಳ ಪಾತ್ರವೂ ಒಂದು. ಈಕೆಯ ಪಾತ್ರವನ್ನು ಇನ್ನಷ್ಟು ಆಪ್ತವಾಗಿ ಕಟ್ಟಿಕೊಳ್ಳುವ ಅವಕಾಶವಿದ್ದರೂ ನಿರ್ದೇಶಕರು ಅಂತಹ ಪ್ರಯತ್ನ ಮಾಡಿಲ್ಲ. ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ಬಂದ ರೋಣಾಪುರದ ಜನರಿಗೆ ಭೈರತಿ ರಣಗಲ್ ಆಶ್ರಯ ನೀಡುತ್ತಾನೆ. ಹಾಗೇ ಬಂದವರಲ್ಲಿ ಈ ಪುಟಾಣಿಯೂ ಒಬ್ಬಳು. ಈಕೆಗೆ ಭೈರತಿ ರಣಗಲ್ ನೀಡುವ ಸ್ಲೇಟು, ಆ ಸ್ಲೇಟಿನಲ್ಲಿ ಈಕೆ ಬರೆಯುವ ಇಂಗ್ಲಿಷ್ ಅಕ್ಷರಗಳೇ ಮುಂದೆ ಈಕೆಗೆ ಒಂದು ಭಯಾನಕ ಸವಾಲು ನೀಡುತ್ತದೆ.
ಆರಂಭದಲ್ಲಿ ಈಕೆಯ ಕುರಿತು ಭೈರತಿ ರಣಗಲ್ ಅತೀವ ಪ್ರೀತಿ ತೋರುತ್ತಾನೆ. ತನ್ನ ತೊಡೆಯಲ್ಲಿ ಕುಳ್ಳರಿಸಿಕೊಂಡು ಒಳ್ಳೆಯ ನಾಳೆಯ ಬಗ್ಗೆ ತುಸು ಕನಸು ಬಿತ್ತುತ್ತಾನೆ. ಮುಂದೊಂದು ದಿನ ಭೈರತಿ ರಣಗಲ್ ಇಲ್ಲದ ಸಮಯದಲ್ಲಿ ವಿಲನ್ ಶಬೀರ್ ಗನ್ ಹಿಡಿದುಕೊಂಡು ಈ ಜನರು ಇರುವ ಕಡೆ ಬರುತ್ತಾನೆ. ತನ್ನ ಲಿಸ್ಟ್‌ನಲ್ಲಿರುವ ಹಲವು ಜನರನ್ನು ಕೊಲ್ಲಲು ಮುಂದಾಗುತ್ತಾನೆ. ಲಿಸ್ಟ್‌ನಲ್ಲಿರುವ ಜನರ ಹೆಸರು ಇಂಗ್ಲಿಷ್‌ನಲ್ಲಿ ಇರುವುದರಿಂದ ಅದನ್ನು ಓದಲು ಯಾರಿಗೂ ಬರೋದಿಲ್ಲ. ಆಗ ಆತನಿಗೆ ಪುಟಾಣಿ ಮಹಿತಾಳ ಕೈಯಲ್ಲಿರುವ ಸ್ಲೇಟು ಕಾಣಿಸುತ್ತದೆ. ಅದರಲ್ಲಿ ಫಾದರ್, ಮದರ್ ಎಂದೆಲ್ಲ ಈಕೆ ಬರೆದಿರುತ್ತಾಳೆ. ಈಕೆಯ ಬಾಯಲ್ಲಿ ಲಿಸ್ಟ್‌ನಲ್ಲಿರುವ ಹೆಸರು ಓದಿಸುತ್ತಾನೆ. ತನ್ನ ತಂದೆ ಮತ್ತು ಇತರರ ಹೆಸರನ್ನು ತನ್ನ ಬಾಯಲ್ಲಿ ಹೇಳುವುದು, ಆತ ಕೊಲ್ಲುವುದು.. ಹೀಗೆ ಸಂಕಟ ತರುವ ಸವಾಲು ಈ ಮಗುವಿಗೆ ಎದುರಾಗುತ್ತದೆ.
ಈಕೆ ಒಬ್ಬರೊಬ್ಬರ ಹೆಸರು ಓದುವುದು, ಆತ ಒಬ್ಬರನೊಬ್ಬರನ್ನು ಗನ್‌ನಿಂದ ಸುಡುವುದು... ಹೀಗೆ ಹತ್ತು ಹಲವು ಜನರ ಕಗ್ಗೊಳೆ ಈಕೆಯ ಮುಂದೆಯೇ ನಡೆಯುತ್ತದೆ. ಈಕೆ ತನ್ನ ತಂದೆಯ ಹೆಸರು ತಿಳಿಸುವುದಿಲ್ಲ. ಅದರ ಪರಿಣಾಮ ಏನಾಗುತ್ತದೆ? ಒಟ್ಟಾರೆ ಪುಟಾಣಿ ಮಹಿತಾಳಿಗೆ ಇದು ಭಯಾನಕ ಪಾತ್ರ ಎಂದರೂ ತಪ್ಪಾಗದು. ಈ ಚಿತ್ರದಲ್ಲಿ ಬಡ ಹುಡುಗಿಯ ಪಾತ್ರದಲ್ಲಿ ಸಹಜವಾಗಿ ನಟಿಸಿದ್ದಾಳೆ ಮಹಿತಾ.
ಹೇಗಿದೆ ಭೈರತಿ ರಣಗಲ್ ಸಿನಿಮಾ?
ಇದು ಶಿವರಾಜ್ ಕುಮಾರ್ "ಸ್ಟೈಲ್" ಸಿನಿಮಾ. ಸ್ಯಾಂಡಲ್‌ವುಡ್‌ನಲ್ಲಿ ಶಿವಣ್ಣ ಹಲವು ಸ್ಟೈಲ್‌ಗಳ ರಾಯಭಾರಿ. ಇವರಂತೆ ಮಚ್ಚು ಹಿಡಿಯೋದು ಯಾರಿಂದಲೂ ಸಾಧ್ಯವಿಲ್ಲ. ಶಿವಣ್ಣನ ಕಣ್ಣಲ್ಲಿಯೇ ಬೆಂಕಿ ಕಾಣಿಸುತ್ತದೆ. ಅಂತಹ ಲುಕ್‌ಗೆ ಫಿದಾ ಆಗದವರು ಇಲ್ಲ. ಶಿವಣ್ಣ ನಡೆಯುವ ಸ್ಟೈಲ್, ಫೈಟಿಂಗ್ ಮಾಡುವ ರೀತಿಯೂ ಸುಂದರ. ಇದೇ ರೀತಿ, ಕಪ್ಪು ಲುಂಗಿ ಸ್ಟೈಲ್‌ನಲ್ಲಿ ಸಖತ್ ಕಾಣಿಸುತ್ತಾರೆ. ಡಾನ್ ಕ್ಯಾರೆಕ್ಟರ್‌ನಲ್ಲಿ ತಣ್ಣಗೆ ರೋಮಾಂಚನ ಉಂಟು ಮಾಡುತ್ತಾರೆ. ಚಂದನವನದಲ್ಲಿ ಶಿವಣ್ಣ ಯಾವೆಲ್ಲ ವಿಷಯಗಳಿಗೆ ಐಕಾನಿಕ್ ಆಗಿದ್ದರೋ ಅದನ್ನೇ ಅಭಿಮಾನಿಗಳಿಗೆ ಸಾಕುಸಾಕು ಎಂದು ಹೇಳುವಷ್ಟು ಬಡಿಸಿದ್ದಾರೆ ನಿರ್ದೇಶಕ ನರ್ತನ್. ಜೈಲರ್ ಸಿನಿಮಾದಲ್ಲಿ ಕೆಲವು ನಿಮಿಷಗಳ ಕಾಲ ಶಿವಣ್ಣ ಕಾಣಿಸಿಕೊಂಡಿದ್ದರು. ಅವರ ಆ ಎಂಟ್ರಿಗೆ ಇಡೀ ಇಂಡಿಯಾವೇ ಫಿದಾ ಆಗಿತ್ತು. ಕೆಲವೇ ಸೆಕೆಂಡ್‌ನಲ್ಲಿ, ಕೆಲವೇ ನಿಮಿಷಗಳಲ್ಲಿ ಅಂತಹ ದೃಶ್ಯಗಳು ಇದ್ದರಷ್ಟೇ ರೋಮಾಂಚನ. ಸಿನಿಮಾ ಪೂರ್ತಿ ಶಿವಣ್ಣನನ್ನು ಅದೇ ರೀತಿ ತೋರಿಸುವೆ ಎಂದುಕೊಂಡರೆ ಅಭಿಮಾನಿಗಳಿಗೆ ಆರಂಭದಲ್ಲಿ ಮೃಷ್ಣಾನ್ನದಂತೆ ಕಂಡರೂ ಆಮೇಲೆ ಹೊಟ್ಟೆ ಬಿರಿಯಬಹುದು.
ಮೇಲೆ ನೀಡಿರುವ ಕಾರಣಗಳಿಂದ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಭೈರತಿ ರಣಗಲ್ ಸಿನಿಮಾ ಮೃಷ್ಣಾನ್ನವಾಗಿದೆ. ಅಭಿಮಾನಿಗಳು "ನಮ್ಮ ಶಿವಣ್ಣ" ಎಂದು ಕೊನೆತನಕ ಖುಷಿಯಿಂದ ನೋಡುವಂತಹ ಸಿನಿಮಾ. ಶಿವರಾಜ್ ಕುಮಾರ್ ನಟನೆ ಇಷ್ಟಪಡುವವರಿಗೆ ಅವರ "ಡಾನ್ ನಟನೆ" ಪ್ರತಿಭೆಯನ್ನು ಬಗೆಬಗೆದು ನಿರ್ದೇಶಕರು ಈ ಚಿತ್ರದಲ್ಲಿ ನೀಡಿದ್ದಾರೆ. ಶಿವಣ್ಣ ಇಲ್ಲಿ ತಮ್ಮ ನಟನೆಯಿಂದ ಖುಷಿ ಕೊಡುತ್ತಾರೆ. ಆದರೆ, ಗಟ್ಟಿಯಾದ ಕಥೆ ಇಲ್ಲದೆ ಇರುವುದೇ ಭೈರತಿ ರಣಗಲ್ ಸಿನಿಮಾದ ಕೊರತೆ. ಈ ಸಿನಿಮಾದ ಕುರಿತು ಹಿಂದೂಸ್ತಾನ್ ಟೈಮ್ ಕನ್ನಡ ಬರೆದಿರುವ ವಿಮರ್ಶೆ ಓದಿ. ಲಿಂಕ್ ಕೆಳಗಿದೆ.