‘ನನಗೂ ಆಸೆಗಳಿವೆ, ಮುಂದಿನ ವರ್ಷವೇ ಕಲ್ಯಾಣ’; ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಆಂಕರ್ ಅನುಶ್ರೀ
Oct 27, 2024 08:27 PM IST
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಆಂಕರ್ ಅನುಶ್ರೀ
- Anchor Anushree Wedding: ಸೋಷಿಯಲ್ ಮೀಡಿಯಾದಲ್ಲಿ ನಟಿ ಅನುಶ್ರೀ ಫೋಟೋ ಹಂಚಿಕೊಂಡರೆ, ಕಾಮೆಂಟ್ ರೂಪದಲ್ಲಿ ಅಲ್ಲಿ ಹೆಚ್ಚು ಚರ್ಚೆಯಾಗುವ ವಿಷಯವೇ ಅವರ ಮದುವೆಯದ್ದು. ಈಗ ಅದೇ ಮದುವೆಯ ಬಗ್ಗೆ ಕೊನೆಗೂ ಉತ್ತರ ನೀಡಿದ್ದಾರೆ ಅನುಶ್ರೀ.
Anchor Anushree: ಕನ್ನಡದ ಸ್ಟಾರ್ ನಿರೂಪಕಿ ಆಂಕರ್ ಅನುಶ್ರೀ ಅವರನ್ನು ಯೂಟ್ಯೂಬರ್‌ಗಳು ಈಗಾಗಲೇ ಸಾಕಷ್ಟು ಬಾರಿ ಮದುವೆ ಮಾಡಿಸಿದ್ದಾರೆ. ಅವರು, ಇವರು ಎಂದೆಲ್ಲ ಬಗೆಬಗೆ ಫೋಟೋಗಳನ್ನು ಹಾಕಿ, ಕೊನೆಗೂ ಅನುಶ್ರೀ ಮದುವೆ ಆದರು ಎಂದೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ವದಂತಿಗಳು ಅನುಶ್ರೀ ಗಮನಕ್ಕೂ ಬಂದಿವೆ. ಅವುಗಳನ್ನು ನೋಡಿ ನಕ್ಕು ಸುಮ್ಮನಾಗುತ್ತಿದ್ದಾರೆ. ಇತ್ತ ತಮ್ಮದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಲೂ ಇದೇ ಮದುವೆ ಬಗ್ಗೆಯೇ ಚರ್ಚೆ ನಡೆದ ಉದಾಹರಣೆಗಳಿವೆ. ಮದುವೆ ಯಾವಾಗ ಅಕ್ಕ ಎಂದು ಕೇಳಿದವರೂ ಇದ್ದಾರೆ. ಈಗ ಇದೇ ವಿಚಾರದ ಬಗ್ಗೆ ಅನುಶ್ರೀ ಕೊನೆಗೂ ಮೌನ ಮುರಿದಿದ್ದಾರೆ.
ಹೌದು, ಸಾಕಷ್ಟು ಕಾರ್ಯಕ್ರಮಗಳಲ್ಲಿ "ನನ್ನನ್ನು ಯೂಟ್ಯೂಬರ್‌ಗಳು ಈಗಾಗಲೇ ಸಾಕಷ್ಟು ಮಂದಿ ಜತೆಗೆ ಮದುವೆ ಮಾಡಿಸಿದ್ದಾರೆ" ಎಂದೂ ಹೇಳಿದ್ದಾರೆ ಅನುಶ್ರೀ. ಹೌದು, ಆಂಕರ್ ಅನುಶ್ರೀ ಅವರಿಗೀಗ 30 ಪ್ಲಸ್ ವಯಸ್ಸು. ಹೀಗೆ 30 ದಾಟಿದ್ದೇ ತಡ, ಸಿಕ್ಕ ಸಿಕ್ಕವರೆಲ್ಲ ಮದುವೆ ಯಾವಾಗ ಎಂದೇ ಪ್ರಶ್ನೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿಯೇ ನನ್ನ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಹೀಗಿರುವಾಗ ಇವರೆಗೆಲ್ಲ ಅದೆಷ್ಟು ಕಾಳಜಿ ಎಂದೂ ಹೇಳಿಕೊಂಡಿದ್ದಾರೆ. ಈಗ ಜೀ ಕುಟುಂಬ ಕಾರ್ಯಕ್ರಮದಲ್ಲಿ ತಮ್ಮ ಮದುವೆ ಯಾವಾಗ ಎಂದು ಹೇಳಿ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ರಿವೀಲ್
ಜೀ ಕುಟುಂಬ ಅವಾರ್ಡ್ ಫಂಕ್ಷನ್‌ನಲ್ಲಿ ವೇದಿಕೆ ಮೇಲೆ ಅಕುಲ್ ಬಾಲಾಜಿ ಇದೇ ಮದುವೆ ವಿಚಾರಕ್ಕೆ ಅನುಶ್ರೀ ಜತೆ ಮಾತಿಗಿಳಿದಿದ್ದಾರೆ. ಹಿಂದಿನ ಎಲ್‌ಇಡಿ ಸ್ಕ್ರೀನ್ ಮೇಲೆ ಅನುಶ್ರೀ ಅವರ ಎಂಗೇಜ್‌ಮೆಂಟ್ ಫೋಟೋ ಬರುತ್ತೆ ನೋಡಿ ಎಂದಿದ್ದಾರೆ. ಎಲ್ಲರೂ ಅಷ್ಟೇ ಕೌತುಕದಿಂದ ಅತ್ತ ನೋಡಿದ್ದಾರೆ. ಅಲ್ಲಿ ಏನೂ ಕಾಣಿಸಿಲ್ಲ. ಅಷ್ಟೊತ್ತಿಗೆ, ನಿಮ್ಮ ಖಾಸಗಿತನಕ್ಕೆ ಗೌರವ ನೀಡಿ ಆ ಫೋಟೋವನ್ನು ನಾವಿಲ್ಲ ಹಾಕಲಿಲ್ಲ ಎಂದಿದ್ದಾರೆ. ಬಳಿಕ ಇದೇ ಮದುವೆ ವಿಚಾರದ ಬಗ್ಗೆಯೂ ಅನುಶ್ರೀ ತಮ್ಮ ನಿಲುವು ಏನೆಂದು ತಿಳಿಸಿದ್ದಾರೆ.
ಮುಂದಿನ ವರ್ಷವೇ ಮದುವೆ..
"ಮನೆಯವರಿಗಿಂತ ನನ್ನ ಮದುವೆ ಚಿಂತೆ ಯೂಟ್ಯೂಬ್‌ನವರಿಗೆ ಜಾಸ್ತಿ ಇರೋದು. ಪ್ರತಿ ವಾರ ಯಾರೆಲ್ಲ ಸಿಂಗಲ್ ಇರ್ತಾರೋ ಅವರ ಜತೆಗೆಲ್ಲ ನನ್ನ ಮದುವೆ ಮಾಡಿಸಿದ್ದಾರೆ. ಆದರೆ, ಮದುವೆ ವಿಚಾರದಲ್ಲಿ, ಎಲ್ಲ ಹುಡುಗಿರಿಗೆ ಇರೋ ಹಾಗೇ ನನಗೂ ಆಸೆಗಳಿವೆ. ನನಗೂ ಜೀವನದಲ್ಲಿ ಬಾಳ ಸಂಗಾತಿ ಬರಬೇಕು ಅನ್ನೋ ಆಸೆ ಇದೆ. ಆದರೆ, ಎಲ್ಲದಕ್ಕೂ ತನ್ನದೇ ಆದ ಟೈಮ್ ಇರುತ್ತದೆ. ಅದರದೇ ಆದ ಗಳಿಗೆ ಇರುತ್ತೆ. ಸರಿಯಾದ ಸಮಯದಲ್ಲಿ, ಸರಿಯಾದ ವ್ಯಕ್ತಿ ಬರಬೇಕಾಗುತ್ತೆ. ಫಾರ್ ದಿ ಫಸ್ಟ್ ಟೈಮ್ ನಾನು ಮದುವೆ ಆಗಲು ಮನಸು ಮಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮನಸು ಮಾಡಬೇಕಾಗುತ್ತೆ, ಈಗ ನಾನು ಮನಸು ಮಾಡಿದ್ದೇನೆ. ಮುಂದಿನ ವರ್ಷವೇ ನಾನು ಮದುವೆ ಆಗಲಿದ್ದೇನೆ. ಆ ಸರದಾರ ನನ್ನ ಬದುಕಲ್ಲಿ ಬರಲಿ, ಅವನನ್ನು ಪರಿಚಯಿಸಿಕೊಡುವಂತಹ ಅವಕಾಶ ಸಿಗಲಿ ಎಂದು ನಾನು ಕಾಯ್ತಿದ್ದೀನಿ" ಎಂದಿದ್ದಾರೆ.