ಕಾಮಿಡಿ ಕಿಲಾಡಿ ಜಗಪ್ಪ- ಸುಶ್ಮಿತಾ ಡಿವೋರ್ಸ್; ಆಂಕರ್ ಅನುಶ್ರೀ ಶೋನಲ್ಲಿ ಹಾಸ್ಯನಟನ ಸ್ಪಷ್ಟನೆ
Nov 05, 2024 08:01 PM IST
ಕಾಮಿಡಿ ಕಿಲಾಡಿ ಜಗಪ್ಪ- ಸುಶ್ಮಿತಾ ಡಿವೋರ್ಸ್ ವದಂತಿಗೆ ಸ್ಪಷ್ಟನೆ ನೀಡಿದ ಜಗಪ್ಪ
- ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಖ್ಯಾತಿಯ ಜಗಪ್ಪ ಮತ್ತು ಸುಶ್ಮಿತಾ ದಂಪತಿ ಇನ್ನೇನು ಶೀಘ್ರದಲ್ಲಿ ಡಿವೋರ್ಸ್ ನೀಡಲಿದೆ ಎಂಬ ಸುದ್ದಿ, ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಆ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ ಜಗಪ್ಪ.
Majabharatha Jagappa: ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ ಜಗಪ್ಪ. ಮಜಾಭಾರತದಿಂದ ಶುರುವಾಗಿದ್ದ ಅವರ ಈ ಬಣ್ಣದ ನಂಟು, ಇದೀಗ ಅದಕ್ಕಿಂತ ಒಂದು ಕೈ ಮೇಲೆಯೇ ಸಾಗುತ್ತಿದೆ. ಎರಡು ಪ್ಯಾಂಟು, ಎರಡು ಟೀ ಶರ್ಟ್ ಜತೆಗೆ ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದಾಗ, ಏನೂ ಇಲ್ಲದೆ ನಿಂತಾಗ ಜತೆಯಾಗಿದ್ದೇ ಸುಶ್ಮಿತಾ. ಜಗಪ್ಪನ ಕೈ ಕೈ ಹಿಡಿದು ಇಡೀ ಬೆಂಗಳೂರು ತೋರಿಸಿದ್ದು, ಬಗೆಬಗೆ ಬಟ್ಟೆ ಕೊಡಿಸಿ ಬದುಕಿಗೂ ಸಂಗಾತಿಯಾಗಿ ಬಂದವರು ಸುಶ್ಮಿತಾ. ಆದರೆ, ಈಗ ಇದೇ ಜೋಡಿ ಡಿವೋರ್ಸ್ ಆಗುತ್ತಿದೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿಯೇ ಜಗಪ್ಪ ಮತ್ತು ಸುಶ್ಮಿತಾ ಜೋಡಿಯ ಅದ್ಧೂರಿ ವಿವಾಹ ನೆರವೇರಿತ್ತು. ಮಜಾಭಾರತ ಸೇರಿ ಹಲವು ರಿಯಾಲಿಟಿ ಶೋಗಳ ಆಪ್ತರು, ಸಿನಿಮಾ ಸೀರಿಯಲ್ ಕಲಾವಿದರು ನವ ಜೋಡಿಗೆ ಹಾರೈಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಈ ಖುಷಿಯ ನಡುವೆ ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್‌ನಲ್ಲಿ ಈ ಜೋಡಿ ವಿಚ್ಛೇದನ ಪಡೆಯಲಿದೆ, ಇಬ್ಬರ ನಡುವೆ ಮನಸ್ಥಾಪ ಉಂಟಾಗಿದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಜಗಪ್ಪ ಸ್ಪಷ್ಟನೆ ನೀಡಿದ್ದಾರೆ.
ಡಿವೋರ್ಸ್ ವದಂತಿ ಬಗ್ಗೆ ಜಗಪ್ಪ ಸ್ಪಷ್ಟನೆ..
"ಇತ್ತೀಚಿನ ಕೆಲ ದಿನಗಳ ಹಿಂದೆ ಜಗ್ಗಪ್ಪ ಮತ್ತು ಸುಶ್ಮಿತಾ ಡಿವೋರ್ಸ್ ಆಗ್ತಿದ್ದಾರೆ ಅನ್ನೋ ಟಾಕ್ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಗಾಸಿಪ್ ಮಾಡಿದ್ರಕ್ಕ. ಮದುವೆ ಆದಮೇಲೆ ನಾವು ತುಂಬಾ ಚೆನ್ನಾಗಿ ಇದ್ದೀವಿ ಅಕ್ಕ. ನಾವೆಲ್ಲ ಬ್ಯಾಚುಲರ್ ಆಗಿದ್ದಾಗ ಎಷ್ಟೊತ್ತಿಗೆ ತಿಂದ್ವಿ. ಹುಷಾರಿಲ್ಲ ಅಂದರೂ ನಾವೇ ಎದ್ದು ಬಿಸಿ ನೀರು ಕಾಯಿಸಿಕೊಳ್ಳಬೇಕು. ಬ್ಯಾಚುಲರ್ ಜೀವನ ತುಂಬ ಕಷ್ಟ ಇದೆ. ಅವಳು ಅವಳ ಮನೆಯಲ್ಲೇ ಕೆಲಸ ಮಾಡಿಲ್ಲ. ಈಗ ನಮ್ಮ ಮನೆಯಲ್ಲಿ ಬೆಳಗ್ಗೆ 4 ಗಂಟೆಗೆ ಏದ್ದೇಳ್ತಾಳೆ. ನಮಗೆಲ್ಲ ತಿಂಡಿ ರೆಡಿಮಾಡಿಟ್ಟು. ಅವಳ ಶೂಟಿಂಗ್ ಇದ್ದರೆ, 6 ಗಂಟೆಗೆ ಪಿಕ್‌ಅಪ್ ಇರುತ್ತೆ ಹೋಗ್ತಾಳೆ. ಮತ್ತೆ ಮನೆಗೆ ಬಂದು ಎಲ್ಲಾ ಕೆಲಸ ಮಾಡುತ್ತಾಳೆ. ನಾವಿಬ್ಬರು ತುಂಬಾ ಚೆನ್ನಾಗಿದ್ದೇವೆ. ತುಂಬಾ ಅನ್ಯೋನ್ಯವಾಗಿದ್ದೇವೆ" ಎಂದಿದ್ದಾರೆ.
ಅಪ್ಪ ಅಮ್ಮನ ಪ್ರೀತಿಯನ್ನೇ ನಾನು ಕಂಡಿಲ್ಲ..
"ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ನಮ್ಮಿಬ್ಬರನ್ನು ದೂರ ಮಾಡಬೇಡಿ. ಬಹಳ ಖುಷಿಯಾಗಿದ್ದೇವೆ. ಐ ಲವ್ ಯೂ ಸುಶ್ಮಿತಾ ನನ್ನ ಎರಡನೇ ತಾಯಿ ನೀನು. ಅವಳು ಅಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ನಾನು ನನ್ನ ಅಜ್ಜಿ ಮನೆಯಲ್ಲಿ 5 ವರ್ಷ ಬೆಳೆದಿದ್ದು, ನನಗೆ ತಾಯಿ ಪ್ರೀತಿನೂ ಸರಿಯಾಗಿ ಸಿಗಲಿಲ್ಲ. ಏಳನೇ ಕ್ಲಾಸ್‌ಗೆ ಬಂದಾಗ ಹಾಸ್ಟೆಲ್‌ಗೆ ಹಾಕಿದ್ರು. ಜಾಸ್ತಿ ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ. ಅಪ್ಪನಿಗೆ ಕಾಲಿನ ಸಮಸ್ಯೆ ಆಯ್ತು. ಒಬ್ಬನೇ ಮಗ. ಆಮೇಲೆ ಕೆಲಸ ಅಂತಾ ಹೊರಗಡೆ ಬಂದೆ. ಈ ಜಂಜಾಟದಲ್ಲಿ ನಮಗೆ ತಾಯಿ ಪ್ರೀತಿ-ತಂದೆ ಪ್ರೀತಿ ನಮಗೆ ಸಿಕ್ಕೇ ಇಲ್ಲ. ಅದಾದ ಮೇಲೆ ಅತಿ ಹೆಚ್ಚು ಪ್ರೀತಿ ಕೊಟ್ಟಿದ್ದೇ ಸುಶ್ಮಿತಾ. ಯಾಕಂದ್ರೆ ಮಜಾಭಾರತ ಆರಂಭದಲ್ಲಿ ನಮ್ಮ ಹತ್ರ ದುಡ್ಡಿರಲಿಲ್ಲ"
ಎರಡನೇ ತಾಯಿಯಾಗಿ ಬಂದವಳು ಸುಶ್ಮಿತಾ
"ನನ್ನ ಹತ್ರ ಆಗ ಇದ್ದಿದ್ದೇ ಮೂರು ಟೀಶರ್ಟ್ ಎರಡು ಪ್ಯಾಂಟ್. ಸುಶ್ಮಿತಾನೇ ನನ್ನ ಕರೆದುಕೊಂಡು ಬಂದು ವಿಜಯನಗರದಲ್ಲಿ ಒಂದಷ್ಟು ಬಟ್ಟೆ ಕೊಡಿಸಿದ್ಲು. ನಮಗೆ ಬೆಂಗಳೂರು ಪರಿಚಯಿಸಿದ್ದೇ ಸುಶ್ಮಿತಾ. ಜೀವನ ತೋರಿಸಿದ್ದು ಸಹ ಅವರೇ. ಅವಳಿಲ್ಲ ಅಂದರೆ ನಾನು ಇಲ್ಲಿ ಇರುತ್ತಾನೇ ಇರಲಿಲ್ಲ. ಎರಡೇ ದಿನಕ್ಕೆ ವಾಪಸ್ ಹೋಗುತ್ತಿದೆ. ಇವತ್ತು ನನ್ನ ಜೊತೆಗಿದ್ದು, ನನಗೆ ಒಂದು ಜೀವನ ಕೊಟ್ಟು ನನ್ನ ಜೊತೆದೇ ಜೀವನ ಮಾಡುತ್ತಿದ್ದಾಳೆ. ಅದಕ್ಕೆ ಅವಳು ನನ್ನ ಎರಡನೇ ತಾಯಿ ಎಂದು ಜಗಪ್ಪ ಕೊಂಚ ಭಾವುಕರಾದರು.
ನಾವು ಚೆನ್ನಾಗಿದ್ದೇವೆ.. ಸುಳ್ಳು ಸುದ್ದಿ ಹಬ್ಬಿಸಬೇಡಿ.
"ದಯವಿಟ್ಟು ನಮ್ಮ ಜೀವನ ಚೆನ್ನಾಗಿದೆ. ನನ್ನ ಜೀವನದಲ್ಲಿ ಬಂದು, ಯೂಟ್ಯೂಬ್ ಅದೂ ಇದು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾವು ಬಹಳ ಖುಷಿಯಾಗಿದ್ದೀವಿ. ಈ ವಿಚಾರ ಮನೆಯಲ್ಲಿ ಗೊತ್ತಾಗಿ ಅವರೂ ಸಾಕಷ್ಟು ನೊಂದಿದ್ದರು. ಆಮೇಲೆ ಅವರಿಗೂ ತಿಳಿಸಿ ಹೇಳಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಜಗಪ್ಪ.