ಇಂಜಿನಿಯರಿಂಗ್ ಪದವಿಗೆ ಕನ್ನಡ ಮಾಧ್ಯಮಕ್ಕೆ ಓರ್ವ ವಿದ್ಯಾರ್ಥಿ ದಾಖಲು; ಹಾಗಾದರೆ, ಕನ್ನಡ ಮಾಧ್ಯಮಕ್ಕೆ ನಿರಾಸಕ್ತಿ ಏಕೆ?
Oct 21, 2024 09:58 AM IST
ಇಂಜಿನಿಯರಿಂಗ್ ಪದವಿಗೆ ಕನ್ನಡ ಮಾಧ್ಯಮಕ್ಕೆ ಓರ್ವ ವಿದ್ಯಾರ್ಥಿ ದಾಖಲು
- Kannada Medium Engineering: ಇಂಜಿನಿಯರಿಂಗ್ ಪದವಿಗೆ ಕನ್ನಡ ಮಾಧ್ಯಮಕ್ಕೆ ಓರ್ವ ವಿದ್ಯಾರ್ಥಿ ದಾಖಲಾಗಿದ್ದು, ಕಳೆದ 4 ವರ್ಷಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಕನ್ನಡ ಮಾಧ್ಯಮಕ್ಕೆ ನಿರಾಸಕ್ತಿ ಏಕೆ? ಉತ್ತರ ಇಲ್ಲಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಕರ್ನಾಟಕ ಸರ್ಕಾರ 2021-22 ರಲ್ಲಿ ಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಆರಂಭಿಸಿತ್ತು. ಆದರೆ, ಅಂತಹ ಗಮನಾರ್ಹ ಪ್ರತಿಕ್ರಿಯೆಯೇನೂ ವ್ಯಕ್ತವಾಗಿರಲಿಲ್ಲ. ಈ ವರ್ಷ ವಿದ್ಯಾರ್ಥಿಗಳ ಪ್ರತಿಕ್ರಿಯೆ ಬಹುತೇಕ ಶೂನ್ಯವಾಗಿದೆ. ಇಡೀ ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳ ಪ್ರಕಾರ ಟಿಎಸ್ ಸಾಗರ್ ಎಂಬ ವಿದ್ಯಾರ್ಥಿ ಮೈಸೂರಿನ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಇವರು ಮೆಕ್ಯಾನಿಕಲ್ ವಿಭಾಗವನ್ನುಆಯ್ಕೆ ಮಾಡಿಕೊಂಡಿದ್ದಾರೆ. ಇವರು ಕನ್ನಡ ಮಾಧ್ಯಮದಲ್ಲೇ ಮುಂದುವರೆಯುತ್ತಾರೆಯೇ ಇಲ್ಲವೇ ಎನ್ನುವುದು ಖಚಿತವಾಗಿಲ್ಲ.
2021-22ರಲ್ಲಿ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿತ್ತು. ಇದರ ಅಂಗವಾಗಿ ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕನ್ನಡ ಮಾಧ್ಯಮವನ್ನು ರಾಜ್ಯದ 5 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಆರಂಭಿಸಿತ್ತು. ಅಂದಿನಿಂದಲೂ ಕೆಲವು ವಿದ್ಯಾರ್ಥಿಗಳು ಕನ್ನಡ ಮಾಧ್ಯಮಕ್ಕೆ ಅರ್ಜಿಯನ್ನು ಸಲ್ಲಿಸುತ್ತಾರೆಯಾದರೂ ಕೊನೆಗೆ ಇಂಗ್ಲೀಷ್ ಮಾಧ್ಯಮಕ್ಕೆ ವರ್ಗಾವಣೆ ಬಯಸುತ್ತಾರೆ. ಮೊದಲ ಬಾರಿಗೆ ಈ ವಿದ್ಯಾರ್ಥಿ ಕಾಲೇಜಿನಲ್ಲಿ ಕನ್ನಡ ಮಾಧ್ಯಮಕ್ಕೆ ಹಾಜರಾಗಿದ್ದಾರೆ. 2024-25ರ ಶೈಕ್ಷಣಿಕ ವರ್ಷಕ್ಕೆ ಇಬ್ಬರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಶಿಕ್ಷಣಕ್ಕೆ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರಲ್ಲಿ ಒಬ್ಬ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಎಸ್ಜೆಸಿ ಕಾಲೇಜಿನಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆಯಾದರೂ ಇನ್ನೂ ಶುಲ್ಕವನ್ನು ಪಾವತಿಸಿಲ್ಲ ಮತ್ತು ತರಗತಿಗಳಿಗೆ ಹಾಜರಾಗಿಲ್ಲ.
ಕನ್ನಡ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿ ಸಾಗರ್ ಶುಲ್ಕ ಪಾವತಿಸಿ ತರಗತಿಗಳಿಗೆ ಹಾಜರಾಗುತ್ತಾರೆ ಎಂಬ ವಿಶ್ವಾಸವಿದೆ. ಏಕೆಂದರೆ ಅವರ ಶೇಕಡವಾರು ಫಲಿತಾಂಶಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ವಿಭಾಗಕ್ಕೆ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರವೇಶ ಸಿಗುವುದಿಲ್ಲ. ಕನ್ನಡ ಮಾಧ್ಯಮದಲ್ಲೇ ಅವರು ಶಿಕ್ಷಣ ಪಡೆಯಬೇಕಿದೆ ಎಂದು ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ನರೇಶ್ ಕುಮಾರ್ ಹೇಳುತ್ತಾರೆ. ಈ ವಿದ್ಯಾರ್ಥಿಗೆ ನಿಜಕ್ಕೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಆಸಕ್ತಿ ಇದೆಯೇ ಎಂದು ಕಾದು ನೋಡಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಬಿಇ. ರಂಗಸ್ವಾಮಿ ತಿಳಿಸಿದ್ದಾರೆ. ಇಂಗ್ಲೀಷ್ ಮಾಧ್ಯಮದ 13 ಸಾವಿರ ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿವೆ.
ಕನ್ನಡ ಮಾಧ್ಯಮಕ್ಕೆ ನಿರಾಸಕ್ತಿ ಏಕೆ?
ಹಾಗಾದರೆ, ಇಂಜಿನಿಯರಿಂಗ್ ಪದವಿಗೆ ಕನ್ನಡ ಮಾಧ್ಯಮವನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂಬ ಕುತೂಹಲ ಮೂಡಬಹುದು. ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿತು ಇಂಜಿನಿಯರಿಂಗ್ ಪದವಿಗೆ ಏಕಾಏಕಿ ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕನ್ನಡ ಮಾಧ್ಯಮವನ್ನು ಜಾರಿಗೊಳಿಸಿದಾಗ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ವಿದ್ಯಾರ್ಥಿಗಳು ಮುಂದೆ ಬರಬಹುದು ಎಂದು ವಿಟಿಯು ನಿವೃತ್ತ ಪ್ರಾಂಶುಪಾಲ ಕರಿಸಿದ್ದಪ್ಪ ಅಭಿಪ್ರಾಯಪಡುತ್ತಾರೆ.
ವಿದ್ಯಾರ್ಥಿಗಳ ನಿರಾಸಕ್ತಿಗೆ ಕಾರಣವೂ ಇದೆ. ವಿದ್ಯಾರ್ಥಿ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಪಡೆಯುತ್ತಾನೆ. ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರೆ ಉದ್ಯೋಗ ಸಿಗುವುದು ಕಷ್ಟ. ನೆರೆ ರಾಜ್ಯ, ವಿದೇಶ ಮತ್ತು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಸಿಗುವುದೇ ಎಂಬ ಪ್ರಶ್ನೆ ಮೂಡುತ್ತದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದು ಇನ್ನಷ್ಟು ಕಷ್ಟ. ಭಾರತದಲ್ಲಿ ಮಾತ್ರ ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದು ಕಷ್ಟ. ಆದರೆ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಕಲಿಕಾ ಸಾಮಗ್ರಿ ವಿಫುಲವಾಗಿ ಲಭ್ಯವಿದ್ದು, ಆ ರಾಷ್ಟ್ರಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಸುಲಭವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ.