ಏನ್ ಗುರೂ! ಬೆಂಗ್ಳೂರಲ್ಲಿ ಈ ರಸ್ತೆ ಗುಂಡಿ ಕಾಟ ನಮಗ್ ಮಾತ್ರಾನಾ.. ಬಿಬಿಎಂಪಿಯೋರಿಗೆ ಏನ್ ಅನ್ಸೋದೇ ಇಲ್ವ
“ಏನ್ ಗುರೂ! ಮಳೆ ಸುರೀತಾನೇ ಇದೆ. ಬಹುತೇಕ ರಸ್ತೆಗಳು ಹಳ್ಳಗಳಾಗಿ ಬಿಟ್ಟಿವೆ. ಬೆಂಗ್ಳೂರಲ್ಲಿ ಈ ರಸ್ತೆ ಗುಂಡಿ ಕಾಟ ಮುಗಿಯೋದೇ ಇಲ್ವ. ಇದು ನಮಗ್ ಮಾತ್ರಾನಾ.. ಬಿಬಿಎಂಪಿಯೋರಿಗೆ ಏನ್ ಅನ್ಸೋದೇ ಇಲ್ವ..” - ಬೆಂಗಳೂರಲ್ಲಿ ವಾಹನ ಸವಾರರ ಸಂಚಾರ ಸಂಕಷ್ಟದ ಹತಾಶೆ, ಅಸಮಾಧಾನ, ಆಕ್ರೋಶದ ನುಡಿಗಳಿವು. ರಸ್ತೆಗುಂಡಿ ಸಮಸ್ಯೆಯೇ ದೊಡ್ಡ ಸವಾಲಾಗಿರುವುದರ ಸಂಕೇತ ಇದು.
ಬೆಂಗಳೂರು: ವಾಯುಭಾರ ಕುಸಿತದ ಕಾರಣ ಬೆಂಗಳೂರಲ್ಲೂ ಮಳೆ ಸುರಿಯುತ್ತಲೇ ಇದೆ. ಮೂರ್ನಾಲ್ಕು ದಿನಗಳ ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆ ಸಂಚಾರ ಬಹಳ ಕಷ್ಟವಾಗಿದೆ. ರಸ್ತೆಗುಂಡಿಗಳ ಕಾಟವಂತೂ ವಾಹನ ಸವಾರರನ್ನು ಹೈರಾಣಾಗಿಸಿದ್ದು, ಬೆಂಗಳೂರಿಗರ ಪಾಲಿಗೆ ರಸ್ತೆಗುಂಡಿಗಳೇ ದುಸ್ವಪ್ನವಾಗಿ ಕಾಡತೊಡಗಿದೆ. ಸಣ್ಣ ಮಳೆ ನಿರಂತರ ಸುರಿದರೂ ಸಾಕು ರಸ್ತೆಗಳಲ್ಲಿ ನೀರು ನಿಂತು ಸಂಚಾರವೇ ಕಷ್ಟವಾಗುವ ಪರಿಸ್ಥಿತಿಯಲ್ಲಿದೆ ಐಟಿಬಿಟಿ ನಗರ ಎಂದು ಖ್ಯಾತಿ ಪಡೆದಿರುವ ಕರ್ನಾಟಕದ ರಾಜಧಾನಿ ಬೆಂಗಳೂರು. ನೀರು ನಿಂತು ಹಳ್ಳಗಳಂತಾಗಿರುವ ರಸ್ತೆಯಲ್ಲಿ ರಸ್ತೆ ಎಲ್ಲಿದೆ ಎಂದು ಪರದಾಡಿಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿ ಮುಚ್ಚಬೇಕು ಎಂದು ಕೋರ್ಟ್ ನಿರ್ದೇಶನ ಕೊಟ್ಟರೂ ಪಾಲಿಕೆಯಿಂದ ಅದರ ಪಾಲನೆಯಾಗಿಲ್ಲ ಎಂಬುದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿಗೆ ಅಂಟಿದ ಶಾಪದಂತಿದೆ ರಸ್ತೆ ಗುಂಡಿ
ಮಳೆ ಬಂದಾಗ ಮತ್ತು ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ಬಿಬಿಎಂಪಿ, ರಸ್ತೆ ಗುಂಡಿ ಮುಚ್ಚುವುದಾಗಿ ಭರವಸೆ ನೀಡುತ್ತದೆ. ಗುಂಡಿ ಮುಕ್ತ ರಸ್ತೆಗಳನ್ನು ಸಂಚಾರಕ್ಕೆ ಒದಗಿಸುವುದಾಗಿ ಘೋಷಿಸಿತ್ತು. ಇವೆಲ್ಲವೂ ಘೋಷಣೆಗೆ ಮಾತ್ರ ಸೀಮಿತ. ಮಳೆ ಕಡಿಮೆಯಾದ ಕೂಡಲೇ ರಸ್ತೆ ಗುಂಡಿಗಳೂ ಬಾಯ್ದೆರೆದಂತೆ ಹಾಗೆಯೇ ಬಾಕಿ ಉಳಿಯುವುದು ವಾಸ್ತವ. ಮುನ್ನಂದಾಜು, ದೂರದೃಷ್ಟಿಗಳಲ್ಲಿದ ರಸ್ತೆ ಯೋಜನೆಗಳ ಜೊತೆಗೆ ಕಳಪೆ ಕಾಮಗಾರಿ ನಡೆಯುತ್ತಲೇ ಇರುತ್ತದೆ. ಇವುಗಳ ಬಗ್ಗೆ ಬಿಬಿಎಂಪಿ ಗಮನಹರಿಸುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಮಾಡಿದ್ದಕ್ಕಿಂತ ಹೆಚ್ಚು ಹಣವನ್ನು ರಸ್ತೆ ಗುಂಡಿ ಮುಚ್ಚಲು ಬಳಸುವಂತೆ ಕಾಣುತ್ತಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಅದರಲ್ಲೂ ಕಳಪೆ ನಿರ್ವಹಣೆ. ಹೀಗಾಗಿ ಅದು ಕೆಲವೇ ದಿನಗಳಲ್ಲಿ ಮತ್ತೆ ಹಳೆಯ ರೂಪಕ್ಕೇ ಬಂದು ನಿಲ್ಲುತ್ತದೆ ಎಂಬುದು ವಾಹನ ಸವಾರರ ಅಳಲು.
ವೈಟ್ ಟಾಪಿಂಗ್ ಮಾಡಿದ ರಸ್ತೆಗಳು ಬಿಟ್ಟರೆ ಉಳಿದ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚು. ಸಬ್ ಆರ್ಟಿರಿಯಲ್ ರಸ್ತೆಗಳಲ್ಲೂ ಗುಂಡಿಗಳಾಗಿವೆ.. ವಸತಿ ಪ್ರದೇಶ, ವಾರ್ಡ್ ರಸ್ತೆಗಳಲ್ಲಿ ಸಂಚಾರ ಅಧ್ವಾನವೇ ಸರಿ. ಕಳೆದ ತಿಂಗಳು ಬೆಂಗಳೂರಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಬಿಬಿಎಂಪಿ, ರಸ್ತೆ ಗುಂಡಿ ಮುಚ್ಚಲು ಮುಂದಾಗಿತ್ತು. ಬೆಂಗಳೂರು ನಗರದ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಪಾಲಿಕೆಯ ವಲಯಗಳಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಸ್ತೆಗುಂಡಿ ಮುಚ್ಚಲು ಪ್ರಯತ್ನಿಸಿದ್ದರು. ಕೇವಲ 15 ದಿನಗಳ ಅವಧಿಯಲ್ಲಿ 14,000 ಗುಂಡಿಗಳು ಹಾಗೂ 8 ಸಾವಿರ ಸಂಖ್ಯೆಯಷ್ಟು ರಸ್ತೆಗಳಿಗೆ ಮೇಲ್ಪದರ ಹಾಕಿದ್ದರು. ಬಹುತೇಕ ಗುಂಡಿಮುಕ್ತ ರಸ್ತೆಗಳಂತೆ ಗೋಚಿಸಿದರೂ, ಈಗ ತಿಂಗಳು ಮುಗಿಯುವ ಮೊದಲೇ ಅದೇ ಗುಂಡಿಗಳು ಬಾಯ್ದೆರೆದುಕೊಂಡಿವೆ.
ಬೆಂಗಳೂರು ರಸ್ತೆ ಸಂಪರ್ಕ ಜಾಲ 13,874 ಕಿ.ಮೀ
ಬಿಬಿಎಂಪಿ ವಲಯವಾರು ರಸ್ತೆಜಾಲದ ವಿವರ
ವಲಯ | ರಸ್ತೆ ಉದ್ದ (ಕಿ.ಮೀ) | ರಸ್ತೆ ಸಂಖ್ಯೆ |
---|---|---|
ಪೂರ್ವ | 1694.93 | 13908 |
ಮಹದೇವಪುರ | 1896.84 | 13759 |
ಪಶ್ಚಿಮ | 1424.24 | 10004 |
ದಕ್ಷಿಣ | 1523.70 | 10768 |
ಬೊಮ್ಮನಹಳ್ಳಿ | 1775.67 | 12154 |
ಆರ್‌ಆರ್ ನಗರ | 2072.69 | 11096 |
ದಾಸರಹಳ್ಳಿ | 607.53 | 4432 |
ಯಲಹಂಕ | 1528.38 | 9055 |
ರಸ್ತೆ ಮೂಲಸೌಕರ್ಯ ವಿಭಾಗ | 1344.84 | 470 |
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಇನ್ನೂ ರಸ್ತೆ ಸಂಪರ್ಕ ಸರಿಯಾಗಿ ಆಗಿಲ್ಲ. ಕಚ್ಚಾ ರಸ್ತೆಯೇ ಇದ್ದು, ವಾಹನ ಸಂಚಾರ ಕಷ್ಟದಲ್ಲೇ ಸಾಗಿದೆ.
ಮೇಲ್ಸೇತುವೆ, ಕೆಳಸೇತುವೆಗಳ ಸಮಸ್ಯೆ
ಬೆಂಗಳೂರಲ್ಲಿ ಮೇಲ್ಸೇತುವೆಗಳಲ್ಲಿ ನೀರು ತುಂಬಿ ಜಲಪಾತದಂತೆ ನೀರು ಕೆಳಕ್ಕೆ ಬಿದ್ದರೆ, ಕೆಳ ಸೇತುವೆಗಳಲ್ಲಿ ನೀರು ತುಂಬಿ ವಾಹನ ಸಂಚಾರವೇ ಇಲ್ಲದಂತಾಗುತ್ತದೆ. ಇಂತಹ ಸನ್ನಿವೇಶ ಎದುರಾದಾಗ ಬೆಂಗಳೂರು ಸಂಚಾರ ಪೊಲೀಸರು ಸೋಷಿಯಲ್ ಮೀಡಿಯಾಗಳಲ್ಲಿ ವಾಹನ ಸವಾರರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿರುತ್ತಾರೆ. ಇದು ಬಿಟ್ಟು ಬಿಬಿಎಂಪಿ ಕಡೆಯಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಇದುವರೆಗೂ ಸಾಧ್ಯವಾಗಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.