Minister Halappa Achar: 'ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯ ಸೇರಿ ಬೇಡಿಕೆಗಳನ್ನು ಈಡೇರಿಸಲು ಕ್ರಮ'
Feb 02, 2023 08:17 PM IST
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಮುಖರೊಂದಿಗೆ ಸಚಿವ ಹಾಲಪ್ಪ ಆಚಾರ್ ಸಭೆ
- ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಹಂತ ಹಂತವಾಗಿ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಹಂತ ಹಂತವಾಗಿ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಸಭೆಯ ನಂತರ ಮಾಹಿತಿ ನೀಡಿದ ಸಚಿವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯ ಕಲ್ಪಿಸಲು ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಬೇಕೆಂಬ ಬೇಡಿಕೆ ಕುರಿತಂತೆಯೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುವ ಜೊತೆಗೆ ಅಂಗನವಾಡಿ ಕಾರ್ಯಕರ್ತರಿಗೆ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅಂಗನವಾಡಿ ನೌಕರರ ಹೋರಾಟ ಅಂತ್ಯ
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಜನವರಿ 23 ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಗರದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾಸಿದ್ದು ಈ ಹಿನ್ನಲೆಯಲ್ಲಿ ಹೋರಾಟ ಹಿಂಪಡೆಯಲಾಗಿದೆ.
ಅಂಗನವಾಡಿಗಳನ್ನು ಅನ್ನದ ಜೊತೆಗೆ ಅಕ್ಷರದ ಕೇಂದ್ರವಾಗಿಸಲು, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣಕ್ಕೆ ನಿರ್ದಿಷ್ಟ ಸಮಯ ಮೀಸಲಿರಿಸಲು, ಶಿಕ್ಷಕಿ ಪದನಾಮ ನೀಡಲು, ಅಂಗನವಾಡಿಗೆ ಬರುವ ಮಕ್ಕಳಿಗೆ ಸಮವಸ್ತ್ರ, ಶೂ ನೀಡಲು ಹಾಗೂ ಅಂಗನವಾಡಿಯಲ್ಲಿ ಓದಿರುವ ಬಗ್ಗೆ ದೃಢೀಕರಣ ಪತ್ರ ನೀಡಲು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೇವಾ ನಿಯಮಾವಳಿ ರೂಪಿಸಲು, ಮಿನಿ ಅಂಗನವಾಡಿ ಹಾಗೂ ಸಹಾಯಕಿಯರಿಗೆ ಪದೋನ್ನತಿಗೆ ಇರುವ ಆದೇಶ ಮಾರ್ಪಡಿಸಲು, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು, ಅಂಗನವಾಡಿಗೆ ಸ್ವಂತ ಕಟ್ಟಡ ಕಟ್ಟಲು 30 ಲಕ್ಷ ರೂ ಮೀಸಲಿರಿಸಲು ಹಾಗೂ ಮೂಲಸೌಕರ್ಯ ಬಲವರ್ಧನೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸದ ಒತ್ತಡ ಕಡಿಮೆ ಮಾಡಲು ಇತ್ಯಾದಿ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಈ ಹೋರಾಟ ಕಳೆದ ಹತ್ತು ದಿನಗಳಿಂದ ನಡೆಯುತ್ತಿತ್ತು. ಕೊರೆಯುವ ಚಳಿಯಲ್ಲಿಯೇ ಮಹಿಳೆಯರು ನಡೆಸಿದ ಈ ಐತಿಹಾಸಿಕ ಹೋರಾಟ ನಾಡಿನ ಎಲ್ಲರ ಗಮನ ಸೆಳೆದು ಸರ್ಕಾರ ಉತ್ತಮವಾಗಿ ಸ್ಪಂದಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಐ.ಟಿ.ಯು ಅಧ್ಯೆಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ.
ನಮ್ಮ ಹೋರಾಟಕ್ಕೆ ಸ್ಪಂದಿಸಿ ನಾಲೈದು ಬಾರಿ ಸರ್ಕಾರದೊಂದಿಗೆ ಮಾತುಕತೆಗಳು ನಡೆದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಗಳು ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆಗೆ ನಿರ್ಧಿಷ್ಟ ವಿಷಯಗಳ ಕುರಿತು ಚರ್ಚೆಗಳು ನಡೆದವು ಎಂದು ಹೇಳಿದ್ದಾರೆ.
ಲಿಖಿತ ಆದೇಶ:
ಆದರೆ ಬೇಡಿಕೆ ಈಡೇರಿಕೆಗೆ ಸ್ಪಷ್ಟತೆ ಬಾರದೇ ಇರುವುದರಿಂದ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಲಾಗಿತ್ತು. ಮೂಲಸೌಕರ್ಯಗಳ ಕೊರತೆಯ ಮಧ್ಯೆಯೂ ಹೋರಾಟ ತೀವ್ರತೆ ಪಡೆದಿತ್ತು. ಸಿಐಟಿಯುನ ಹೋರಾಟಕ್ಕೆ ಮಣಿದ ಇಲಾಖೆಯು ಶಾಲಾಪೂರ್ವ ಶಿಕ್ಷಣಕ್ಕಾಗಿ ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ನಿರ್ದಿಷ್ಟ ಸಮಯ ಮೀಸಲಿರಿಸಿದ ಸ್ಪಷ್ಟ ಆದೇಶವನ್ನು ಲಿಖಿತವಾಗಿ ನೀಡಿದೆ. ಮಿನಿ ಅಂಗನವಾಡಿ ಹಾಗೂ ಸಹಾಯಕಿಯರ ಪದೋನ್ನತಿಯ ಕುರಿತು ಲೋಪದೋಷಗಳಿರುವ ಆದೇಶ ವಾಪಸ್ ಪಡೆದು, ಮಾರ್ಪಡಿಸಿದ ತಿದ್ದುಪಡಿ ಆದೇಶವನ್ನು ಲಿಖಿತವಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಟ್ಟಡದ ವೆಚ್ಚ 12 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ:
ಕಟ್ಟಡದ ವೆಚ್ಚ 12 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಗೆ ಒಪ್ಪಿಗೆ ನೀಡಲಾಗಿದೆ. ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು, ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಸಮ್ಮತಿ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆಯ ವೇಳೆಯಲ್ಲಿ ಇನ್ನುಳಿದ ಬೇಡಿಕೆಗಳೊಂದಿಗೆ ರಾಜ್ಯದ ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ ಇತ್ಯಾದಿ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರಕಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಹಣಕಾಸು ಇಲಾಖೆ ಒಪ್ಪಿಗೆ:
ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಇಂದು ಸಲಹೆಯಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972 ರ ಪ್ರಕಾರ ಉಪಧನ (ಗ್ರಾಚ್ಯುಟಿ) ನೀಡುವ ಕುರಿತು ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಕಳೆದ ಹತ್ತು ದಿನಗಳಿಂದ ಹಮ್ಮಿಕೊಂಡಿರುವ ಶಾಂತಿಯುತ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಂದನೆ ಸಲ್ಲಿಕೆ:
ಹೋರಾಟದ ಸಂದರ್ಭದಲ್ಲಿ ಸಂಘಟನೆಯ ಬೇಡಿಕೆಗಳ ಈಡೇರಿಕೆಗೆ ಸಹಾಯ ಸಹಕಾರ ನೀಡಿದವರಿಗೆ, ಬೆಂಬಲಿಸಿದವರಿಗೆ, ಮಾರ್ಗದರ್ಶನ ಮಾಡಿದ ನಾಡಿನ ಗಣ್ಯರಿಗೆ ಹಿತೈಷಿಗಳಿಗೆ, ಹೋರಾಟವನ್ನು ಮಾಧ್ಯಮದ ಮೂಲಕ ಪ್ರಸಾರ ಮಾಡಿದವರಿಗೆ, ಸೂಕ್ತ ರಕ್ಷಣೆ ನೀಡಿದ ಆರಕ್ಷಕರಿಗೆ ಸಂಘಟನೆಯ ಪರವಾಗಿ ವಂದನೆಗಳನ್ನೂ ಸಲ್ಲಿಸುತ್ತೇನೆ ಎಂದು ವರಲಕ್ಷ್ಮಿ ಹೇಳಿದ್ದಾರೆ.