logo
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ನಾಳೆ ಮಹತ್ವದ ಆದೇಶ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ನಾಳೆ ಮಹತ್ವದ ಆದೇಶ

Jayaraj HT Kannada

Oct 29, 2024 04:39 PM IST

google News

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ನಾಳೆ ಮಹತ್ವದ ಆದೇಶ

    • ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ ತೂಗುದೀಪ ಜಾಮೀನು ಆದೇಶ ನಾಳೆ ಹೊರಬೀಳಲಿದೆ. ನಟನಿಗೆ 3 ತಿಂಗಳ ಮಧ್ಯಂತರ ಜಾಮೀನು ನೀಡಿ ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ದಾಸನಿಗೆ ನಾಳೆ ನಿರ್ಣಾಯಕ ದಿನವಾಗಿದೆ. (ವರದಿ: ಎಚ್. ಮಾರುತಿ)
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ನಾಳೆ ಮಹತ್ವದ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ನಾಳೆ ಮಹತ್ವದ ಆದೇಶ (HT_PRINT)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ 2 ಆಗಿರುವ ಚಿತ್ರನಟ ದರ್ಶನ್‌ ತೂಗುದೀಪ ಅವರ ಜಾಮೀನು ಆದೇಶ ನಾಳೆ ಹೊರಬೀಳಲಿದೆ. ಇಂದು ಮಧ್ಯಾಹ್ನ, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಅದೇಶವನ್ನು ನಾಳೆಗೆ (ಅಕ್ಟೋಬರ್‌ 30ರ ಬುಧವಾರ) ಕಾಯ್ದಿರಿಸಿದೆ. ಇಂದು ದರ್ಶನ್ ಅವರಿಗೆ ಕನಿಷ್ಠ 3 ತಿಂಗಳ ಮಧ್ಯಂತರ ಜಾಮೀನು ನೀಡಿ ಎಂದು ಅವರ ಪರ ವಕೀಲರು ಮನವಿ ಮಾಡಿಕೊಂಡರು. ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ನಾಳೆ ಆದೇಶ ಹೊರಡಿಸಲಿದೆ.

ದರ್ಶನ್‌ ಪರ ವಕೀಲ ಖ್ಯಾತ ಕ್ರಿಮಿನಲ್‌ ವಕೀಲ ಸಿವಿ ನಾಗೇಶ್‌ ತಮ್ಮ ವಾದವನ್ನು ಮಂಡಿಸಿ ದರ್ಶನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು. ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಅವರ ಅನಾರೋಗ್ಯ ಕುರಿತು ಹೆಚ್ಚಿನ ಮಾಹಿತಿ ಲಭಿಸುತ್ತದೆ. ಚಿಕಿತ್ಸೆಗೆ ಎಷ್ಟು ದಿನ ಬೇಕೆಂದು ವೈದ್ಯರು ಮಾತ್ರ ಹೇಳಬಹುದು. ನಾವು ಕೇಳುತ್ತಿರುವುದು ಕೇವಲ ಮಧ್ಯಂತರ ಜಾಮೀನು ಮಾತ್ರ. ಬಳ್ಳಾರಿಯ ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ. ಇದನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದರು.

ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಿ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ವಕೀಲರು ದರ್ಶನ್ ಮೈಸೂರಿನ ನಿವಾಸಿಯಾಗಿದ್ದು, ಈ ಹಿಂದೆ ಅಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವುದರಿಂದ ಅವರು ಬೆಂಗಳೂರಿನಲ್ಲಿ ಇರುವುದಿಲ್ಲ. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕಾಲಕಾಲಕ್ಕೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಡಿಕೆ ಶಿವಕುಮಾರ್ ಪ್ರಕರಣ ಪ್ರಸ್ತಾಪ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕರಣವನ್ನು ಪ್ರಸ್ತಾಪಿಸಿದ ಸಿವಿ ನಾಗೇಶ್ ಅವರು, ಅನಾರೋಗ್ಯ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಬಿಪಿ, ಶುಗರ್, ಥೈರಾಯಿಡ್ ಸಮಸ್ಯೆಗಳಿಗೆ ಅವರು 3 ಬಾರಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವೆಲ್ಲ ಸಾಮಾನ್ಯವಾದ ಕಾಯಿಲೆಗಳಾಗಿದ್ದರೂ ಜಾಮೀನು ನೀಡಲಾಗಿತ್ತು. ಆದರೆ ದರ್ಶನ್ ದೊಡ್ಡ ಪ್ರಮಾಣದ ಸಮಸ್ಯೆ ಎದುರಿಸುತ್ತಿದ್ದಾರೆ. ದರ್ಶನ್ ಗೆ MRI ಸ್ಕ್ಯಾನ್ ಮಾಡಿಸಲಾಗಿದೆ. ಬೆನ್ನಿನ ನರದ L5, S1 ನಲ್ಲಿ ಸಮಸ್ಯೆ ಇದೆ. ದರ್ಶನ್ ಒಂದು ಕಾಲಿನ ಪಾದದಲ್ಲಿ ಸಮಸ್ಯೆ ಇದೆ ಎಂಬುದನ್ನೂ ತಿಳಿಸಿದರು.

ಇಂತಹುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ಪ್ರಾಸಿಕ್ಯೂಷನ್ ಹೇಳಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತಂಕ ಇದ್ದೇ ಇರುತ್ತದೆ. ಆದ್ದರಿಂದ ದರ್ಶನ್ ತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶವೂ ಇದೆ ಎಂದರು.

3 ತಿಂಗಳು ಮಧ್ಯಂತರ ಜಾಮೀನು ನೀಡುವಂತೆ ಮನವಿ

ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದಿರುವ ಹಲವು ತೀರ್ಪುಗಳಿವೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹೇಳಿದಾಗ ಎರಡನೇ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪಡೆಯಬಹುದಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಎರಡನೇ ಅಭಿಪ್ರಾಯ ಏಕೆ ಬೇಕು? ನರರೋಗ ತಜ್ಞರು ಆಪರೇಷನ್ ಮಾಡಿಸಬೇಕು ಎಂದು ಹೇಳಿದ್ದಾರೆ ಎಂದು ನಾಗೇಶ್‌ ಉತ್ತರಿಸಿದರು. ಅಲ್ಲದೆ ಕನಿಷ್ಠ 3 ತಿಂಗಳು ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು.

3 ತಿಂಗಳು ಜಾಮೀನು ಕೊಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಪರೀಕ್ಷಿಸಿ ಮೈಸೂರಲ್ಲಿ ಚಿಕಿತ್ಸೆ ಪಡೆಯಬಹುದಲ್ಲವೇ ಎಂದರು. ಆಗ ನಾಗೇಶ್ ಅವರು ಭದ್ರತೆಯ ಸಮಸ್ಯೆ ಉಂಟಾಗುತ್ತದೆ ಎಂದರು. ಆ ಸಮಸ್ಯೆಯನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ ಎಂದರು. ಅಂತಿಮವಾಗಿ ನಾಳೆ ಆದೇಶ ಹೊರಡಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಜೂನ್‌ 8ರಂದು ರೇಣುಕಾಸ್ವಾಮಿ ಹತ್ಯೆ ನಡೆದಿದ್ದು, ಜೂನ್‌ 11ರಂದು ನಟ ದರ್ಶನ್‌ ಬಂಧನವಾಗಿತ್ತು. ಕಳೆದ 130 ದಿನಗಳಿಂದ ನಟ ಜೈಲುವಾಸದಲ್ಲಿದ್ದಾರೆ. ಒಂದು ವೇಳೆ ಜಾಮೀನು ಅರ್ಜಿ ವಜಾಗೊಂಡರೆ ಹೈ ಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಯೂ ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ