Vijayapura News: ವಿಜಯಪುರ ವಿಮಾನ ನಿಲ್ದಾಣ ಏಪ್ರಿಲ್‌ನಲ್ಲಿ ಉದ್ಘಾಟನೆ ಸಾಧ್ಯತೆ: ನೈಟ್ ಲ್ಯಾಂಡಿಂಗ್ ಗೆ ಸಚಿವ ಎಂ.ಬಿ.ಪಾಟೀಲ್ ಸೂಚನೆ
Jul 30, 2023 12:03 PM IST
ವಿಜಯಪುರ ವಿಮಾನನಿಲ್ದಾಣ ಕಾಮಗಾರಿಯನ್ನು ಸಚಿವ ಎಂ.ಬಿ.ಪಾಟೀಲ್ ಪರಿಶೀಲಿಸಿದರು.
- ಮೂರ್ನಾಲ್ಕು ವರ್ಷದಿಂದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ( Vijaypura Airport) ಪ್ರಗತಿಯಲ್ಲಿದೆ. ಬಹುತೇಕ ಕಾಮಗಾರಿ ಮುಗಿದಿದ್ದು, ಆರೇಳು ತಿಂಗಳಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾತ್ರಿ ವಿಮಾನ ಇಳಿಯುವ ವ್ಯವಸ್ಥೆಯನ್ನೂ ಕಲ್ಪಿಸುವಂತೆ ಸಚಿವ ಎಂ.ಬಿ.ಪಾಟೀಲ್( MB Patil) ಸೂಚನೆ ನೀಡಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಸ್ಥಿತಿಗತಿ ವಿವರ ಇಲ್ಲಿದೆ.
ವಿಜಯಪುರ: ವಿಜಯಪುರ ಜಿಲ್ಲೆಯ ಬುರಾಣಪುರ-ಮದಭಾವಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಈ ವಿಮಾನ ನಿಲ್ದಾಣದಲ್ಲಿಯೂ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಮಾನ ನಿಲ್ದಾಣದ ಅನುಷ್ಠಾನ ಇಲಾಖೆಯಾಗಿರುವ ಮೂಲ ಸೌಕರ್ಯ ಇಲಾಖೆಯ ಸಚಿವ ಸ್ಥಾನವೂ ಸಹ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಬಳಿಯೇ ಇರುವುದರಿಂದ ತವರಿನಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ `ನೈಟ್ ಲ್ಯಾಂಡಿಂಗ್' ಸೌಲಭ್ಯ ವಿಸ್ತರಣೆಗೆ ಅಸ್ತು ಎಂದಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿ ಪರಿವೀಕ್ಷಣೆ ಸಂದರ್ಭದಲ್ಲಿ ನೈಟ್ ಲ್ಯಾಂಡಿಂಗ್ಗೂ ಪೂರಕವಾಗುವಂತೆ ಕಾಮಗಾರಿ ಹಾಗೂ ಉಪಕರಣಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ಏಪ್ರಿಲ್ ತಿಂಗಳಲ್ಲಿ ಈ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಶರವೇಗ ನೀಡಲಾಗಿದೆ.
ಅಗ್ನಿಶಾಮಕ ದಳ ಹಾಗೂ ಪೂರಕವಾದ ಉಪಕರಣಗಳು ಅಳವಡಿಸಬೇಕು, ಪರಿಸರ ಇಲಾಖೆ ನಿರಾಪೇಕ್ಷಣಾ ಪತ್ರ ದೊರಕಬೇಕು, ಈ ಎಲ್ಲ ರೀತಿಯ ಅನೇಕ ತನ್ನದೇ ಆದ ಪ್ರಕ್ರಿಯೆಗಳಿವೆ, ಹೀಗಾಗಿ ಈ ಎಲ್ಲ ಪ್ರಕ್ರಿಯೆಗಳು ಸಂಪೂರ್ಣವಾಗಿ ಪೂರ್ಣಗೊಳ್ಳಲು ಎಪ್ರಿಲ್ ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ, ಆದರೆ ಈ ಎಲ್ಲ ಕಾಮಗಾರಿ ಹಾಗೂ ಪ್ರಕ್ರಿಯೆಗಳಿಗೆ ಶರವೇಗ ನೀಡಿ ಆದಷ್ಟು ಫೆಬ್ರವರಿ ತಿಂಗಳವರೆಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡುವಂತೆ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ವಿವರಿಸಿದರು.
ಭರದಿಂದ ಸಾಗಿದೆ ಕಾಮಗಾರಿ
ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ರನ್ವೇ ಸ್ಟ್ರಿಪ್ ವರ್ಕ್ ಪೂರ್ಣಗೊಂಡಿದ್ದು, ಡಿಬಿಎಂ, ಐಸೋಲೇಷನ್ ಬೇ ಕಾಮಗಾರಿ, ಟ್ಯಾಕ್ಸಿ ವೇ, ಅಪ್ರೋಚ್ ರೋಡ್, ಮೂರು ಹಂತದ ಇಂಟರ್ನಲ್ ರೋಡ್ ಸಹ ಪೂರ್ಣಗೊಂಡಿದೆ ಎಂದು ವಿವರಣೆ ನೀಡಿದರು.
ಟರ್ಮಿನಲ್ ಕಟ್ಟಡ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಗ್ಲಾಸ್ ಅಳವಡಿಕೆ ಮೊದಲಾದ ಅಂತಿಮ ಹಂತದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಉಪಕರಣ ಅಳವಡಿಕೆಯ ಮಹತ್ವದ ಕಾರ್ಯ ಬಾಕಿ ಇರುವುದರಿಂದ ಈ ಕಾರ್ಯ ಪೂರ್ಣಗೊಂಡರೆ ಸರ್ಕಾರ ಗುರಿ ಹಾಕಿಕೊಂಡಿರುವ ಏಪ್ರಿಲ್‌ನಲ್ಲಿ ಈ ಕಾಮಗಾರಿ ಪೂರ್ಣಗೊಂಡು ವಿಮಾನಗಳು ಹಾರುವ ಸಾಧ್ಯತೆ ಇದೆ.
ಎಷ್ಟು ಹಣ ಖರ್ಚಾಗಿದೆ
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಏರ್ಬಸ್-320 ವಿಮಾನಗಳ ಹಾರಾಟಕ್ಕಾಗಿ ಅವಕಾಶ ಕಲ್ಪಿಸಲಾಗಿದ್ದು, 347.92 ಕೋಟಿ ರೂ.ಗಳ ಯೋಜನೆಯಾಗಿದ್ದು, ಕಾಮಗಾರಿಯನ್ನು ಎರಡು ಹಂತಗಳಲ್ಲಿ ವಿಂಗಡಿಸಲಾಗಿದೆ, ಮೊದಲನೇಯ ಹಂತದ ಕಾಮಗಾರಿಗೆ 222.92 ಕೋಟಿ ರೂ. ಹಾಗೂ ಎರಡನೇಯ ಹಂತದ ಕಾಮಗಾರಿ 125 ಕೋಟಿ ರೂ. ನಿಗದಿಗೊಳಿಸಲಾಗಿದೆ, ಮೊದಲನೇಯ ಹಂತದಲ್ಲಿ ರನ್ ವೇ, ಟ್ಯಾಕ್ಸಿ ವೇ, ಐಸೋಲೇಷನ್ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಮೊದಲನೇಯ ಹಂತದ ಕಾಮಗಾರಿಯನ್ನು ಮೆ.ಎಸ್.ಎಸ್. ಆಲೂರ ಕನ್ಸಟ್ರಕ್ಷನ್ ಲಿ. ಅವರು ವಹಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶೇ.88.81 ಗುರಿ ಸಾಧನೆ
ಜುಲೈ ಮಾಸಾಂತ್ಯದಲ್ಲಿ ಮೊದಲನೇಯ ಹಂತದ ಕಾಮಗಾರಿಯಡಿಯಲ್ಲಿ ಭೌತಿಕ ಪ್ರಗತಿ ಶೇ 88.81ರಷ್ಟು ಸಾಧಿಸಲಾಗಿದೆ, ನಿಗದಿತ ಗುರಿ ಶೇ 77.31 ಗುರಿ ಮೀರಿ ಕಾಮಗಾರಿ ಕೈಗೊಳ್ಳಲಾಗಿದೆ, ಅದೇ ತೆರನಾಗಿ ಆರ್ಥಿಕ ಪ್ರಗತಿಯು ಸಹ ಶೇ 77.31ರ ಗುರಿ ಮೀರಿ ಶೇ 83.31 ರಷ್ಟು ತಲುಪಿದೆ ಎಂದು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿ ಸಚಿವರ ಮುಂದೆ ವಿವರಿಸಿದರು.
ಎರಡನೇಯ ಹಂತದ ಕಾಮಗಾರಿಯಲ್ಲಿ ಭೌತಿಕ ಪ್ರಗತಿ ಶೇ 73.30 ರಷ್ಟು ಸಾಧಿಸಲಾಗಿದ್ದರೆ, ಆರ್ಥಿಕ ಪ್ರಗತಿ ಶೇ 58 ಕ್ಕೆ ಸೀಮಿತಗೊಂಡಿದೆ, ಎರಡನೇಯ ಹಂತದ ಕಾಮಗಾರಿಯನ್ನು ಸಹ ಎರಡು ಪ್ಯಾಕೇಜ್ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 125 ಕೋಟಿ ರೂ.ಗಳಲ್ಲಿ ಪ್ರಥಮ ಪ್ಯಾಕೇಜ್ಗೆ ಸಿವಿಲ್ ಉಪಕಾಮಗಾರಿಗೆ 105.60 ಕೋಟಿ ರೂ. ಹಾಗೂ ಭದ್ರತಾ ಉಪಕರಣಗಳಿಗೆ 19.40 ಕೋಟಿ ರೂ. ನಿಗದಿಗೊಳಿಸಲಾಗಿದೆ. ಸಿವಿಲ್ ಉಪಕಾಮಗಾರಿ ಪೈಕಿ ಈಗಾಗಲೇ 86.20 ಕೋಟಿ ರೂ.ಗಳ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿಎಫ್ಆರ್ ಕಟ್ಟಡ, ಕಂಪೌಂಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಾಸಕ ವಿಠ್ಠಲ ಕಟಕದೊಂಡ, ಮೂಲಸೌಕರ್ಯ ಅಭಿವೃದ್ದಿ ನಿಗಮದ ಎಂಡಿ ಡಾ.ಎಂ.ಆರ್.ರವಿ, ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಎಚ್.ಡಿ.ಆನಂದಕುಮಾರ್ ಮತ್ತಿತರರು ಹಾಜರಿದ್ದರು.
ಸಮಿತಿಯಿಂದ ಮನವಿ
ಈ ವೇಳೆ ವಿಜಯಪುರ ವಿಮಾನ ನಿಲ್ದಾಣ ಹೋರಾಟ ಸಮಿತಿಯವರು ಅಧ್ಯಕ್ಷ ಡಾ.ಎಚ್.ಎಲ್.ಬಿದರಿ, ಸಂಚಾಲಕ ರಾಜು ಗಚ್ಚಿನಮಠ, ಸದಸ್ಯರಾದ ಡಾ.ಮಲ್ಲಮ್ಮ ಯಾಳವಾರ ಮತ್ತಿತರರ ನೇತೃತ್ವದಲ್ಲಿ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ಬೇಗನೇ ವಿಮಾನ ನಿಲ್ದಾಣ ಕಾಮಗಾರಿ ಮುಗಿಸಿ ಜನ ಸೇವೆಗೆ ಒದಗಿಸುವಂತೆ ಮನವಿ ಮಾಡಿದರು.