logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಒಳಚರಂಡಿ ಕೊಳವೆಯನ್ನು ಕಾವೇರಿ ಪೈಪ್ ಲೈನ್ ಗೆ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕ; ನೀರು ಹರಿದ ರಭಸಕ್ಕೆ ಏನೆಲ್ಲಾ ಅನಾಹುತ ಆದವು

ಬೆಂಗಳೂರಲ್ಲಿ ಒಳಚರಂಡಿ ಕೊಳವೆಯನ್ನು ಕಾವೇರಿ ಪೈಪ್ ಲೈನ್ ಗೆ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕ; ನೀರು ಹರಿದ ರಭಸಕ್ಕೆ ಏನೆಲ್ಲಾ ಅನಾಹುತ ಆದವು

Umesha Bhatta P H HT Kannada

Nov 14, 2024 05:31 PM IST

google News

ಬೆಂಗಳೂರಿನ ಥಣಿಸಂದ್ರದಲ್ಲಿ ಪೈಪ್‌ಲೈನ್‌ ಜೋಡಿಸುವಾಗ ಆಗಿರುವ ಅವ್ಯವಸ್ಥೆ ಹೇಗಿದೆ ನೋಡಿ

    • ಬೆಂಗಳೂರಿನಲ್ಲಿ ಪೈಪ್‌ಲೈನ್‌ ಅಳವಡಿಕೆಗೆ ಇನ್ನಿಲ್ಲದ ಕಸರತ್ತು ಮಾಡಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುವುದು ಆಗಾಗ ನಡೆಯುತ್ತಲೇ ಇರುತ್ತದೆ. ಥಣೀ ಸಂದ್ರದಲ್ಲೂ ಇಂತಹುದೇ ಘಟನೆ ನಡೆದು ಅವ್ಯವಸ್ಥೆಯಾಗಿದೆ.
    • ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರಿನ ಥಣಿಸಂದ್ರದಲ್ಲಿ ಪೈಪ್‌ಲೈನ್‌ ಜೋಡಿಸುವಾಗ ಆಗಿರುವ ಅವ್ಯವಸ್ಥೆ ಹೇಗಿದೆ ನೋಡಿ
ಬೆಂಗಳೂರಿನ ಥಣಿಸಂದ್ರದಲ್ಲಿ ಪೈಪ್‌ಲೈನ್‌ ಜೋಡಿಸುವಾಗ ಆಗಿರುವ ಅವ್ಯವಸ್ಥೆ ಹೇಗಿದೆ ನೋಡಿ

ಬೆಂಗಳೂರು: ಬೆಂಗಳೂರಿನ ಥಣಿಸಂದ್ರ ಸಮೀಪದ ಹೆಗಡೆ ನಗರದ ಬಿಡಿಎಸ್ ಲೇ ಔಟ್ ನಲ್ಲಿ ನೀರು ಸರಬರಾಜು ಪೈಪ್ ಸ್ಫೋಟಗೊಂಡು ಖಾಸಗಿ ಕಚೇರಿಗೆ ಅಪಾರ ಹಾನಿಯಾಗಿದೆ. ಪೈಪ್ ಒಡೆದು ನೀರು ಹರಿಯುವ ರಭಸಕ್ಕೆ ಕಚೇರಿಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಅಲ್ಲೆಯೇ ನಿಲ್ಲಿಸಲಾಗಿದ್ದ ಕಾರಿನ ಗಾಜೂ ಒಡೆದಿದೆ. ಈ ರಾದ್ಧಾಂತ ಇಲ್ಲಿಗೆ ನಿಂತಿಲ್ಲ. ಇಡೀ ಬಡಾವಣೆ ಜಲಾವೃತವಾಗಿದೆ. ಜಲ ಮಂಡಳಿ ನಾಲ್ಕೈದು ಗಂಟೆಗಳ ನಂತರ ರಿಪೇರಿ ಕೆಲಸ ಮಾಡಿದೆ. ಥಣಿಸಂದ್ರ ಸಮೀಪದ ಹೆಗಡೆ ನಗರದ ರಾಯಲ್ ಬ್ಲಿಸ್ ಅಪಾರ್ಟ್ ಮೆಂಟ್ ನ ಮಾಲೀಕ ಒಳಚರಂಡಿ ಕೊಳವೆಯನ್ನು ಅಕ್ರಮವಾಗಿ ಕಾವೇರಿ 5ನೇ ಹಂತದ ಪೈಪ್ ಲೈನ್ ಗೆ ಸಂಪರ್ಕ ನೀಡಿದ್ದರಿಂದ ಈ ಅನಾಹುತ ಸಂಭವಿಸಿದೆ. ಈ ನಿಟ್ಟಿನಲ್ಲಿ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಲ ಮಂಡಳಿ ನಿರ್ಧರಿಸಿದೆ.

ಕ್ರಿಮಿನಲ್‌ ಮೊಕದ್ದಮೆ

ಒಳಚರಂಡಿ ಸಂಪರ್ಕವನ್ನು ಕಾವೇರಿ ನೀರು ಪೂರೈಕೆಯ ಕೊಳವೆಗೆ ಸಂಪರ್ಕ ಕಲ್ಪಿಸಿದ್ದರಿಂದ, ನೀರು ಸರಬರಾಜು ಕೊಳವೆಗೆ ಹಾನಿಯುಂಟಾಗಿದೆ.ಇದರಿಂದ ಅಕ್ಕಪಕ್ಕದ ಮನೆಯವರಿಗೆ ನಷ್ಟ ಉಂಟಾಗಿದೆ. ಈ ಲೋಪವನ್ನ ಗಂಭೀರವಾಗಿ ಪರಿಗಣಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ಅವರು ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜೊತೆಗೆ, ಜಲಮಂಡಳಿ ಹಾಗೂ ಅಕ್ಕಪಕ್ಕದ ಜನರಿಗೆ ಆಗಿರುವ ಆರ್ಥಿಕ ನಷ್ಟವನ್ನು ಕಟ್ಟಡ ಮಾಲೀಕರೆ ತುಂಬಿಸಿಕೊಡಬೇಕು ಎಂದೂ ಸೂಚನೆ ನೀಡಿದ್ದಾರೆ.

ಥಣಿ ಸಂದ್ರದ ಹೆಗಡೆ ನಗರ

ಹೆಗಡೆ ನಗರದಲ್ಲಿ ಕಾವೇರಿ ನೀರು ಪೂರೈಸುವ ಕೊಳವೆಯಿಂದ ರಭಸವಾಗಿ ನೀರು ಹೊರಗೆ ಹರಿದು, ನೆರೆಹೊರೆಯ ಮನೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ಜಲಮಂಡಳಿಗೆ ಸ್ಥಳೀಯರು ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಜಲಮಂಡಳಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆಗ, ರಾಯಲ್ ಬ್ಲಿಸ್ ಅಪಾರ್ಟ್‌ಮೆಂಟ್‌ ಕಟ್ಟಡದ ಮಾಲೀಕರು, ತಮ್ಮ ಕಟ್ಟಡದ ಒಳಚರಂಡಿ ಸಂಪರ್ಕವನ್ನು ಕಾವೇರಿ ನೀರು ಪೂರೈಸುವ ಕೊಳವೆಗೆ ನೀಡಿ, ಅದರ ಮೇಲೆ ಕಾಂಕ್ರೀಟ್

ಹಾಕಿದ್ದರು ಹೊಸದಾಗಿ ಅಳವಡಿಸಿದ್ದ ಕಾವೇರಿ ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಇನ್ನೂ ಕಾವೇರಿ ನೀರನ್ನು ಹರಿಸಿರಲಿಲ್ಲ. ಮಂಗಳವಾರ ರಾತ್ರಿ ಕೊಳವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದಾಗ ನೀರಿನ ಒತ್ತಡ ತಡೆಯದೇ ನೀರು ರಭಸವಾಗಿ ಹರಿದಿತ್ತು. ಇದರಿಂದ ನೀರು ಸರಬರಾಜು ಕೊಳವೆಯ ಜೊತೆಗೆ ಅಕ್ಕಪಕ್ಕದ ಮನೆಗಳ ಸಂಪರ್ಕಕ್ಕೂ ಹಾನಿಯಾಗಿತ್ತು. ಜಲಮಂಡಳಿ ಸಿಬ್ಬಂದಿ, ಕೊಳವೆ ಮಾರ್ಗವನ್ನು ಶುದ್ದೀಕರಿಸಿ, ಸೋಂಕು ರಹಿತಗೊಳಿಸಿ ಸರಿಪಡಿಸಿದ್ದಾರೆ.

ಅನಧಿಕೃತ ಮಾರ್ಗ ಪತ್ತೆಗೆ ಕ್ರಮ

ನಗರದಲ್ಲಿ ಅನಧಿಕೃತವಾಗಿ ಒಳ ಚರಂಡಿ ಸಂಪರ್ಕ ಮಾರ್ಗಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅನಧಿಕೃತ ಸಂಪರ್ಕ ಪಡೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜಿನ ಅಕ್ರಮ ಸಂಪರ್ಕಗಳಿಗೇನೂ ಕೊರತೆ ಇಲ್ಲ. ಸಾವಿರಾರು ಸಂಖ್ಯೆಯಲ್ಲಿವೆ. ಮನೆ, ಹೋಟೆಲ್, ಅಪಾರ್ಟ್ ಮೆಂಟ್, ವಾಣಿಜ್ಯ ಕಟ್ಟಡಗಳು ಅಕ್ರಮವಾಗಿ ಕಾವೇರಿ ನೀರಿನ ಸಂಪರ್ಕ ಪಡೆದಿವೆ. ಪತ್ತೆ ಹಚ್ಚುವುದು ಸುಲಭದ ಕೆಲಸ ಅಲ್ಲ. ಜಲಮಂಡಳಿ, ಬಿಬಿಎಂಪಿ ಜಂಟಿ ಕಾರ್ಯಾಚರಣೆ ನಡೆಸಿದರೆ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಇದರಿಂದ ಜಲ ಮಂಡಳಿಗೆ ನೀರು ಉಳಿತಾಯವಾಗುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ ಎನ್ನುವ ಸಲಹೆ ಕೇಳಿ ಬಂದಿದೆ

(ವರದಿ: ಎಚ್‌.ಮಾರುತಿ, ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ