ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ; ಒಂದು ದಿನದ ವೇತನ ನೀಡಲಿದ್ದಾರೆ ಸರ್ಕಾರಿ ನೌಕರರು
ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲೇ ವಿಶಾಲ ಜಾಗ ಗುರುತಿಸಲಾಗಿದೆ.
ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯವು ಡಿಸೆಂಬರ್ 20, 21, 22 ರಂದು ಅಕ್ಕರೆಯ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಈಗಲೂ ಮೂರು ತಿಂಗಳಿನಿಂದಲೂ ಸಿದ್ದತೆಗಳು ನಡೆದಿವೆ. ಮಂಡ್ಯದಲ್ಲಿ ಎಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು. ಒಂದು ಲಕ್ಷಕ್ಕೂ ಅಧಿಕ ಕನ್ನಡ ಪ್ರೇಮಿಗಳು ಬಂದರೆ ಅವರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಸೂಕ್ತ ಸ್ಥಳಕ್ಕೆ ಹುಡುಕಾಟ ನಡೆದಿತ್ತು. ಈಗಲೂ ಬೆಂಗಳೂರು ಹಾಗೂ ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ವಿಶಾಲ ಜಾಗದಲ್ಲಿ ಸಮ್ಮೇಳನ ನಡೆಯಲಿದೆ. ಈ ಸ್ಥಳದಲ್ಲಿಯೇ ಸಮ್ಮೇಳನ ಆಯೋಜಿಸಲು ಅನುಮತಿ ನೀಡಿರುವುದರಿಂದ ವೇದಿಕೆ ಹಾಗೂ ಇತರೆ ಸಿದ್ದತೆಗಳು ಶುರುವಾಗಲಿವೆ.
ಮಂಡ್ಯದಲ್ಲಿ ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶಾಲ ಹಾಗೂ ಸುರಕ್ಷಿತ ಜಾಗದ ಹುಡುಕಾಟ ನಡೆದಿತ್ತು. ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ತಾಂತ್ರಿಕ ಸಮಿತಿ ನೀಡಿದ ವರದಿ ಅನ್ವಯ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದಾರಿಯ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೊಟೇಲ್ ಹಿಂಭಾಗದ ವಿಶಾಲ ಜಾಗದಲ್ಲಿ ಸಮ್ಮೇಳನ ಡಿಸೆಂಬರ್ ಮೂರನೇ ವಾರ ನಡೆಯಲಿದೆ.ಸಮ್ಮೇಳನಕ್ಕೆ ಬರುವವರಿಗೆ ಇದೇ ಸೂಕ್ತ ಜಾಗವೆಂದು ಅಂತಿಮಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಎರಡು ತಿಂಗಳಿನಿಂದಲೂ ನಾಲ್ಕೈದು ಸ್ಥಳಗಳಿಗೆ ಹುಡುಕಾಟ ನಡೆದಿತ್ತು. ನಗರದೊಳಗೆ ಸಮ್ಮೇಳನ ನಡೆಸಿದರೆ ವಿಶಾಲ ಜಾಗ ಸಿಗುವುದಿಲ್ಲ ಎಂದು ಹೊರ ವಲಯದಲ್ಲಿಯೇ ಅಂತಿಮಗೊಳಿಸಲಾಗಿದೆ. ಮೂರು ದಶಕದ ನಂತರ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದ್ದು. ಇನ್ನು ಸಮ್ಮೇಳಾಧ್ಯಕ್ಷರ ಆಯ್ಕೆ ಮಾತ್ರ ಬಾಕಿ ಉಳಿದಿದೆ.
ನೌಕರರ ವೇತನ ಒಂದು ದಿನ
ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಹಿನ್ನೆಲೆಯಲ್ಲಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮನವಿ ಮಾಡಿದರು.
ಒಂದು ದಿನದ ಸಂಬಳ ನೀಡುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಒತ್ತಾಯವಿಲ್ಲ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರೀತಿಪೂರ್ವಕವಾಗಿ ನೀಡುವಂತೆ ಕೋರಿದರು.
ಸರ್ಕಾರಿ ನೌಕರರುಗಳಲ್ಲದೆ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಹೋರಾಟ ಸಂಘಗಳು ಹಾಗೂ ಸಾರ್ವಜನಿಕರು ಮನಪೂರ್ವಕವಾಗಿ ತಮ್ಮ ಇಚ್ಛೆಯಿಂದ ಸಮ್ಮೇಳನಕ್ಕೆ ಸಹಾಯ ಮಾಡಬಹುದು. ಜಿಲ್ಲೆಯ ಕನ್ನಡಿಗರು ಸಮ್ಮೇಳನದಲ್ಲಿ ಒಬ್ಬ ಕನ್ನಡಿಗನಾಗಿ ಸೇವೆ ಮಾಡಬಹುದಾಗಿದ್ದು, ಈ ಬಗ್ಗೆ ಯಾವುದೇ ಒತ್ತಾಯವಿರುವುದಿಲ್ಲ ಎಂದರು.
ಸಮ್ಮೇಳನವು ಕೇವಲ ವೈಯಕ್ತಿಕ ಹಬ್ಬವಾಗಿರದೆ, ಕನ್ನಡದ ಐಕ್ಯತೆಯನ್ನು ಸಾರುವ, ಪ್ರತಿಬಿಂಬಿಸುವ ಪ್ರತಿಯೊಬ್ಬ ಕನ್ನಡಿಗರ ಮನೆಯ ಹಬ್ಬವಾಗಿದೆ. ಸಾರ್ವಜನಿಕರು, ಎಲ್ಲಾ ಸರ್ಕಾರಿ ನೌಕರರು ಕೂಡ ತಮ್ಮ ಮನೆಯ ಹಬ್ಬವೆಂದು ಭಾವಿಸಿ ಸಂಭ್ರಮ, ಸಡಗರದಿಂದ ಆಚರಿಸೋಣ ಎನ್ನುವುದು ಮಂಡ್ಯ ಡಿಸಿ ಮನವಿ.
ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರುಗಳಲ್ಲಿ ವಿವಿಧ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ 10 ಮಂದಿ ಕನ್ನಡಿಗರಿಗೆ ಸನ್ಮಾನ ಮಾಡುವ ಬಗ್ಗೆ ಹಾಗೂ ಸಮ್ಮೇಳನ ನಡೆಯುವ ದಿನಗಳಂದು ರಜೆ ನೀಡುವ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಿದ್ದತೆ ಜೋರು
ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಒಟ್ಟು 28 ಸಮಿತಿಗಳು ಈಗಾಗಲೇ ಸೂಕ್ಷ್ಮವಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. 30 ವರ್ಷಗಳ ನಂತರ ಜಿಲ್ಲೆಗೆ ಸಿಕ್ಕಿರುವ ಅವಕಾಶ ಇದಾಗಿದ್ದು, ಈ ಅದ್ಭುತ ಸಮ್ಮೇಳನಕ್ಕೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಸಹಕರಿಸಬೇಕು ಎಂದರು.