logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಕಟ್ಟಡ ಕುಸಿತ ದುರಂತ; ಬಿಬಿಪಿಎಂ ಎಂಜಿನಿಯರ್‌ ವಿರುದ್ದವೂ ಕ್ರಮದ ತೂಗುಗತ್ತಿ,ಎಇಇ ಸಸ್ಪೆಂಡ್‌

Bangalore News: ಬೆಂಗಳೂರು ಕಟ್ಟಡ ಕುಸಿತ ದುರಂತ; ಬಿಬಿಪಿಎಂ ಎಂಜಿನಿಯರ್‌ ವಿರುದ್ದವೂ ಕ್ರಮದ ತೂಗುಗತ್ತಿ,ಎಇಇ ಸಸ್ಪೆಂಡ್‌

Umesha Bhatta P H HT Kannada

Oct 24, 2024 12:14 PM IST

google News

ಬೆಂಗಳೂರು ಕಟ್ಟಡ ಕುಸಿತದಿಂದ ಗಾಯಗೊಂಡಿರುವ ಕುಟುಂಬದವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು.

    • ಬೆಂಗಳೂರಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ ಬಿಬಿಎಂಪಿ ನೊಟೀಸ್‌ ನೀಡಿ ಕೂಡಲೇ ನಿಲ್ಲಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ
ಬೆಂಗಳೂರು ಕಟ್ಟಡ ಕುಸಿತದಿಂದ ಗಾಯಗೊಂಡಿರುವ ಕುಟುಂಬದವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು.
ಬೆಂಗಳೂರು ಕಟ್ಟಡ ಕುಸಿತದಿಂದ ಗಾಯಗೊಂಡಿರುವ ಕುಟುಂಬದವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು.

ಬೆಂಗಳೂರು: ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡ ಕುಸಿದು ಎಂದು ಮಂದಿ ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಲಯದ ಎಂಜಿನಿಯರ್‌ಗಳ ವಿರುದ್ದ ಕ್ರಮ ಆಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಕಟ್ಟಡ ನಿರ್ಮಾಣದ ವಿಚಾರ ಗೊತ್ತಿದ್ದರೂ ಸೂಕ್ತ ಮಾಹಿತಿ ಪಡೆಯದ, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದವೂ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಣ್ಣೂರು ವಲಯದ ಬಾಬುಸಾ ಪಾಳ್ಯದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಹಿನ್ನೆಲೆಯಲ್ಲಿ ಕೆಲವು ಅಮಾನತು ಕೂಡ ಆಗಬಹುದು.

ಎರಡು ದಿನದ ಹಿಂದೆ ಮಳೆ ಅನಾಹುತದಿಂದ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಗುರುವಾರ ಸ್ಥಳ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಬಾಬುಸಾ ಪಾಳ್ಯ ದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಹಿನ್ನೆಲೆ, ಅನಧಿಕೃತ ಕಟ್ಟಡ ನಿರ್ಮಾಣ ಹಿಂದಿನ ಕಾರಣ, ಇದಕ್ಕೆ ಸಹಕರಿಸಿದವರು, ಬಿಬಿಎಂಪಿ ಕೈಗೊಂಡ ಕ್ರಮಗಳು, ಅಧಿಕಾರಿಗಳ ಪಾತ್ರವೂ ಸೇರಿದಂತೆ ಹಲವಾರು ಮಾಹಿತಿಗಳನ್ನು ಸಿದ್ದರಾಮಯ್ಯ ಅವರು ಪಡೆದುಕೊಂಡರು.

ಗಾಯಗೊಂಡವರು ಹಾಗೂ ಜೀವ ಕಳೆದುಕೊಂಡವರ ಕುಟುಂಬದವರು ಸಿದ್ದರಾಮಯ್ಯ ಅವರ ಅಹವಾಲು ಆಲಿಸುವಾಗ ಕಣ್ಣೀರು ಹಾಕಿದರು. ನಮ್ಮ ನೆರವಿಗೆ ಬರಬೇಕು. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರೆ ಈ ರೀತಿ ಆಗಿದೆ. ಕುಟುಂಬದ ಆಧಾರ ಸ್ಥಂಭವೇ ಕುಸಿದು ಹೋಗಿದೆ ಎಂದು ಅಲವತ್ತುಕೊಂಡರು.

ನಂತರ ಘಟನಾ ಸ್ಥಳ ಪರಿಶೀಲನೆ ಬಳಿಕ‌ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಗತ್ಯ ಇರುವ ಎಲ್ಲಾ ಆಧುನಿಕ ವ್ಯವಸ್ಥೆ ಬಳಿಕ ಕಾರ್ಮಿಕರಿಗೆ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಎಂಜಿನಿಯರ್‌ ಸಸ್ಪೆಂಡ್‌

ಇದು ರೆವಿನ್ಯೂ ಬಡಾವಣೆಯಾಗಿದ್ದು, ಈ ಕಟ್ಟಡವನ್ನು ಅನಧಿಕೃತವಾಗಿ ಪರವಾನಗಿ ಪಡೆಯದೇ ನಿರ್ಮಿಸಲಾಗಿದೆ. ಅನಧಿಕೃತ ಕಾಮಗಾರಿ ಎಂದು ನೋಟೀಸು ನೀಡಲಾಗಿದ್ದರೂ, ನಿರ್ಮಾಣ ಮಾಡಿರುವುದರಿಂದ, ಸಂಬಂಧಪಟ್ಟ ಎಇಇ ಯನ್ನು ಅಮಾನತುಗೊಳಿಸಲಾಗಿದೆ ಈ ಪ್ರದೇಶದ ವ್ಯಾಪ್ತಿಗೆ ಬರುವ ವಿಭಾಗೀಯ ಅಧಿಕಾರಿಗೂ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರಿಗೂ ನೋಟೀಸು ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ನಿಯಮಬಾಹಿರವಾಗಿ, ಸೂಕ್ತ ಅನುಮತಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಬಿಬಿಎಂಪಿ ಯಾವುದೇ ಮುಲಾಜಿಲ್ಲದೇ ಕೈಗೊಳ್ಳಬೇಕು. ಇಂತಹ ದೂರುಗಳು ಕೇಳಿ ಬಂದಾಗ ಬಿಬಿಎಂಪಿಯ ವಿಭಾಗೀಯ ಅಧಿಕಾರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎನ್ನುವ ಸೂಚನೆಯನ್ನು ಸಿಎಂ ನೀಡಿದರು.

ಅನಧಿಕೃತ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ನಿರ್ಮಾಣ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಬಿಬಿಎಂಪಿ‌ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಸಿಎಂ ನಿರ್ದೆಶಿಸಿದರು.

ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಶಾಸಕ ಬೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌.ಉಮಾಶಂಕರ್‌, ಆಯುಕ್ತರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಾಯಗೊಂಡವರಿಗೆ ಚಿಕಿತ್ಸೆ ಜೊತೆಗೆ ಪರಿಹಾರದ ಚಿಂತನೆ

ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ 8 ಜನರು ಸಾವು ಸಂಭವಿಸಿದ್ದು, ಅವರ ಶವಗಳನ್ನು ಹೊರತೆಗೆಯಲಾಗಿದ್ದು, ಉಳಿದಂತೆ 8 ಜನರನ್ನು ರಕ್ಷಣೆ ಮಾಡಲಾಗಿದೆ. ಅವರಲ್ಲಿ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ರಕ್ಷಣೆ ಮಾಡಿರುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾವನ್ನಪ್ಪಿರುವ 8 ಜನರಿಗೆ ತಲಾ 2 ಲಕ್ಷ ಕಾರ್ಮಿಕ ಇಲಾಖೆಯಿಂದ , 3 ಲಕ್ಷ ಬಿಬಿಎಂಪಿಯಿಂದ , ಒಟ್ಟು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ.ಪ್ರಕರಣದಲ್ಲಿ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ ಭರಿಸುವ ಜೊತೆಗೆ ಪರಿಹಾರವನ್ನೂ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವುದು ಅವರ ವಿವರಣೆ.

ಅನಧಿಕೃತ ಕಾಮಗಾರಿ ಕೈಗೊಳ್ಳದಂತೆ ಮನವಿ

ಜನರು ಕಾನೂನಿನ ಪ್ರಕಾರ ಮನೆಗಳನ್ನು ನಿರ್ಮಿಸಬೇಕೇ ಹೊರತು ಕಾನೂನು ಬಾಹಿರವಾಗಿ ಮನೆಗಳನ್ನು ಕಟ್ಟಬಾರದೆಂದು ಜನರಲ್ಲಿ ಸಿಎಂ ಮನವಿ ಮಾಡಿದರು. ಕಾಮಗಾರಿ ನಿಲ್ಲಿಸುವಂತೆ ನೋಟೀಸು ನೀಡಿದ ನಂತರವೂ ಕಟ್ಟಡ ಮಾಲೀಕರು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸದ ಕಾರಣ , ಈ ದುರಾದೃಷ್ಟರ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಿರಲು , ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಮುಂಚಿತವಾಗಿ ಅನುಮತಿ ಪಡೆಯಬೇಕು ಮತ್ತು ಎಇಇ ನಿಂದ ಸೂಕ್ತ ಪರಿಶೀಲನೆಯಾಗಬೇಕು. ಇದರ ಜೊತೆಗೆ ಕಳಪೆ ಕಾಮಗಾರಿ ಮಾಡದೇ ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಈ ಕಟ್ಟಡ ಕುಸಿತ ಕಳಪೆ ಕಾಮಗಾರಿಯಿಂದಾಗಿದೆಯೇ ಹೊರತು ಮಳೆಯ ಕಾರಣದಿಂದಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ನಿರ್ಮಿಸಿದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಇನ್ನುಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ರಕ್ಷಣಾ ಕಾರ್ಯ ಪೂರ್ಣ

ಸರ್ಕಾರ ಮಳೆ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಪ್ರತಿಪಕ್ಷದವರ ಮಾತು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಟೀಕೆಗಳನ್ನು ಮಾಡುವುದು ಸುಲಭ. ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಸಂಭವಿಸಿದ್ದು , ಪ್ರತಿಪಕ್ಷದ ನಾಯಕನಾಗಿ ನಾನು ದೋಣಿಯಲ್ಲಿ ಕುಳಿತು ಸ್ಥಳ ವೀಕ್ಷಣೆ ಮಾಡಿದ್ದೆ ಎಂದು ಸಿಎಂ ಹೇಳಿದರು.

ನೂರಾರು ವರ್ಷಗಳಲ್ಲಿ ಯಲಹಂಕದಲ್ಲಿ ಒಂದೇ ದಿನ 170 ಮಿ.ಮೀ. ಮಳೆ ಬಿದ್ದಿದೆ. ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಸರ್ಕಾರಕ್ಕೆ ಇರಬೇಕಾಗುತ್ತದೆ. ಆ ಭಾಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ವರ್ಷ ಮಳೆ ಜಾಸ್ತಿ ಆಗಿದ್ದು, ಇನ್ನೂ ಹೆಚ್ಚು ಮೂಲಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ. ರಾಜಕಾಲುವೆಗಳಲ್ಲಿ ಒತ್ತುವರಿ ಕ್ಲಿಯರ್ ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಿಪತ್ತುನಿರ್ವಹಣೆಗಾಗಿ 3 ಸಾವಿರ ಕೋಟಿರೂ.ಗಳ ಸಾಲವನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನಧಿಕೃತ ಕಟ್ಟಡಗಳ ಸಮೀಕ್ಷೆ ನಡೆಸಲಾಗಿದ್ದರ ವಸ್ತುಸ್ಥಿತಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಸರ್ಕಾರವಿದ್ದರೂ , ಇಂತಹ ವಿಷಯಗಳು ಪ್ರಸ್ತುತವಾಗಿರುತ್ತವೆ. ಕೆಲವರು ಈ ಬಗ್ಗೆ ಕಾನೂನು ಮೊರೆ ಹೋಗಿದ್ದಾರೆ. ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ