logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Rains: ಬೆಂಗಳೂರು ಮಳೆಗೆ ಜನ ಹೈರಾಣ; ನುಗ್ಗಿದ ನೀರು ತೆರವಿಗೆ ಹರಸಾಹಸ, ಸಂಚಾರ ದಟ್ಟಣೆಯೂ ಉಂಟು

Bangalore Rains: ಬೆಂಗಳೂರು ಮಳೆಗೆ ಜನ ಹೈರಾಣ; ನುಗ್ಗಿದ ನೀರು ತೆರವಿಗೆ ಹರಸಾಹಸ, ಸಂಚಾರ ದಟ್ಟಣೆಯೂ ಉಂಟು

Umesha Bhatta P H HT Kannada

Oct 17, 2024 01:22 PM IST

google News

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಮನೆಗೆ ನುಗ್ಗಿದ ನೀರು.

    • ಬೆಂಗಳೂರಿನಲ್ಲಿ ನಿರಂತರ ಮಳೆ, ನಿಂತ ನೀರು, ಸಂಚಾರ ದಟ್ಟಣೆಯನ್ನು ತೆರವುಗೊಳಿಸಲು ಸಿಬ್ಬಂದಿಯನ್ನು ತುದಿಗಾಲಲ್ಲಿ ನಿಲ್ಲಿಸಿದೆ. ನಿರಂತರ ಮಳೆಯಿಂದಾಗಿ ಬೆಂಗಳೂರು ತೀವ್ರ ಪ್ರವಾಹವನ್ನು ಎದುರಿಸುತ್ತಿದೆ. ದಟ್ಟಣೆ ಮತ್ತು ನಿಂತ ನೀರನ್ನು ನಿರ್ವಹಿಸಲು ನಾಗರೀಕ ಮತ್ತು ಸಂಚಾರ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಮನೆಗೆ ನುಗ್ಗಿದ ನೀರು.
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಮನೆಗೆ ನುಗ್ಗಿದ ನೀರು.

ಬೆಂಗಳೂರು: ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನ ಸುರಿದ ಭಾರೀ ಮಳೆಯಿಂದ ಹಲವಾರು ಕಡೆಗಳಲ್ಲಿ ನೀರು ನುಗ್ಗಿದೆ. ತಗ್ಗು ಪ್ರದೇಶಗಳೂ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿಯೇ ನೀರು ನುಗ್ಗಿದೆ. ಕೆಲವು ಕಡೆಗಳಲ್ಲಿ ಇನ್ನೂ ನೀರು ನಿಂತಿದ್ದು ಅದನ್ನು ಹೊರಗೆ ಹಾಕುವುದೇ ಸವಾಲಾಗಿದೆ. ಮನೆಗಳ ಮಾಲೀಕರ ಜತೆಗೆ ಬಿಬಿಎಂಪಿ ಸಹಿತ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯೂ ಇದಕ್ಕೆ ಸಾಥ್‌ ನೀಡಿದ್ದಾರೆ. ಇದರೊಟ್ಟಿಗೆ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿಯೇ ಮಳೆಯಿಂದ ಸಂಚಾರವೂ ವ್ಯತ್ಯಯವಾಗಿದ್ದು, ಇದನ್ನು ಸರಿಪಡಿಸಲು ಬೆಂಗಳೂರು ಸಂಚಾರ ಪೊಲೀಸರು ಹರ ಸಾಹಸ ಪಡುತ್ತಲೇ ಇದ್ದಾರೆ. ಇನ್ನೂ ಎರಡು ಮೂರು ದಿನ ಸಾಧಾರಣ ಮಳೆಯ ವಾತಾವರಣ ಬೆಂಗಳೂರಿನಲ್ಲಿ ಇದೆ. ಒಮ್ಮೆ ಜೋರು ಮಳೆ ಸುರಿದರೂ ಏನಾಗಬಹುದು ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ನಗರದ ಮಳೆ ಭಾದಿತ ಪ್ರದೇಶಗಳಿಂದ ನಿಂತಿರುವ ನೀರು ಮತ್ತು ವಾಹನ ದಟ್ಟಣೆಯನ್ನು ತೆರವುಗೊಳಿಸಲು ನಾಗರಿಕ ಸಂಸ್ಥೆ ಮತ್ತು ಸಂಚಾರ ಸಿಬ್ಬಂದಿ ತುದಿಗಾಲಲ್ಲಿ ನಿಂತು ಕಾರ್ಯನಿರತರಾಗಿದ್ದಾರೆ. ಬಿಬಿಎಂಪಿ ಆರಂಭಿಸಿರುವ ಸಹಾಯವಾಣಿಗೆ ಕರೆ ಈಗಲೂ ಬರಯತ್ತಲೇ ಇವೆ.

ಬೆಂಗಳೂರಿನಲ್ಲಿ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೋಮವಾರ, ಮಂಗಳವಾರ ಎಡೆಬಿಡದೆ ಸುರಿದದ್ದು ಹಾಗೂ ಬುಧವಾರದ ಮಳೆಯಿಂದಾಗಿ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಬೊಮ್ಮನಹಳ್ಳಿ ವಲಯದ ಹರಳೂರು ಬಳಿಯ ಸಿಲ್ವರ್ ಕೌಂಟಿ ರಸ್ತೆಯಲ್ಲಿಯೂ ನೀರು ನಿಂತಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಸಮುಚ್ಚಯದ ನಿವಾಸಿಗಳನ್ನು ರಕ್ಷಿಸಲು ಬಿಬಿಎಂಪಿ ಎರಡು ಟ್ರಾಕ್ಟರುಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವಾದ ಬುಧವಾರದ ಮಳೆ ಆಟವನ್ನು ರದ್ದುಪಡಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದ ಮೈದಾನದಲ್ಲೂ ನೀರು ಹೊರ ಹಾಕುವ ಕೆಲಸ ನಡೆದಿತ್ತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ನಗರದ ಜಲಾವೃತ ಪ್ರದೇಶಗಳನ್ನು ತೆರವುಗೊಳಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ತನ್ನ ಎಂಟು ವಲಯಗಳಲ್ಲಿ 24×7 ವಿಶೇಷ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ ಮತ್ತು ಮಳೆ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡಲು ಸಹಾಯವಾಣಿ ಸಂಖ್ಯೆಯನ್ನು (1533) ಪ್ರಾರಂಭಿಸಿದೆ. ಬೆಂಗಳೂರು ನಗರ ಜಿಲ್ಲೆಯ ಶಾಲೆಗಳು ಬುಧವಾರ ಮುಚ್ಚಲ್ಪಟ್ಟಿದ್ದು, ಅನೇಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿವೆ. ಗುರುವಾರವೂ ಮನೆಯಿಂದಲೇ ಕೆಲಸ ಮಾಡುವುದು ಮುಂದುವರಿದಿದೆ. ಗುರುವಾರ ವಾಲ್ಮೀಕಿ ಜಯಂತಿ ಕಾರಣಕ್ಕೆ ರಜೆ ಇರುವುದರಿಂದ ಶಾಲೆ ಇರಲಿಲ್ಲ.

ಹಲವಾರು ಪ್ರಮುಖ ಟೆಕ್ ಕಂಪನಿಗಳನ್ನು ಹೊಂದಿರುವ ಮಾನ್ಯತಾ ಟೆಕ್ ಪಾರ್ಕ್ ಒಳಗೆ ರಸ್ತೆಗಳು ಜಲಾವೃತವಾಗಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆನ್‌ ಲೈನ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವೊಂದರಲ್ಲಿ, ಟೆಕ್ ಪಾರ್ಕ್ ಆವರಣದಿಂದ ಜಲಪಾತದಂತೆ ಗೋಡೆಯಿಂದ ಕೆಳಗೆ ಹರಿಯುವ ನೀರಿನ ಕ್ಯಾಸ್ಕೇಡ್ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯಿತು. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸರಾಸರಿ ಮಳೆ 66.1 ಮಿ.ಮೀ. ನೇರಳೆ ಮಾರ್ಗದಲ್ಲಿ ಮರ ಅಡ್ಡಿಯಾದ ಕಾರಣ ಬೆಂಗಳೂರು ಮೆಟ್ರೋ ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿದ್ದು. ಈಗ ಸಹಜ ಸ್ಥಿತಿಯಲ್ಲಿದೆ.

ಚೆನ್ನೈ ಬೇಸಿನ್ ಬ್ರಿಡ್ಜ್ ಜಂಕ್ಷನ್ (ಚೆನ್ನೈ) ಮತ್ತು ವ್ಯಾಸರ್ಪಾಡಿ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 114 ರಲ್ಲಿ ಹಳಿಗಳ ಮೇಲೆ ನೀರು ನಿಂತಿರುವ ಕಾರಣ ನೈಋತ್ಯ ರೈಲ್ವೆ ಬುಧವಾರ ಹಲವಾರು ರೈಲುಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಬೆಂಗಳೂರು ರೈಲುಗಳೂ ಸೇರಿವೆ.

ಅಕ್ಟೋಬರ್ 18 ರವರೆಗೆ ಬೆಂಗಳೂರು ಮತ್ತು ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳವರೆಗೆ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ