Bangalore Billionaires: ಶ್ರೀಮಂತರ ನಗರ ಪಟ್ಟಿಯಿಂದ ಹಿಂದೆ ಬಿದ್ದ ಬೆಂಗಳೂರು; ಅಭಿವೃದ್ದಿ ಸ್ಥಗಿತದ ಫಲ ಎಂದು ಕಾಲೆಳೆದ ಉದ್ಯಮಿ
Aug 30, 2024 11:26 AM IST
ಶ್ರೀಮಂತರ ಪಟ್ಟಿಯಲ್ಲಿ ಹಿಂದೆ ಬಿದ್ದ ಭಾರತ. ಕುಟುಕಿದ ಉದ್ಯಮಿ ಮೋಹನ್ ದಾಸ್ ಪೈ.
Bangalore News ಭಾರತದ ಶ್ರೀಮಂತರ ಪಟ್ಟಿಯಲ್ಲಿ(2024 Hurun India Rich List) ಬೆಂಗಳೂರು( Bangalore) ಹಿಂದೆ ಬಿದ್ದಿದೆ. ಇದನ್ನು ಅಭಿವೃದ್ದಿ ಸ್ಥಗಿತದ ಫಲ ಎಂದು ಉದ್ಯಮಿ ಮೋಹನ್ ದಾಸ್ ಪೈ( Mohan Das Pai) ಎಕ್ಸ್ ಮೂಲಕ ಕರ್ನಾಟಕ ಸರ್ಕಾರವನ್ನು ಕುಟುಕಿದ್ದಾರೆ.
ಬೆಂಗಳೂರು: 2024 ರ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ(2024 Hurun India Rich List) ಪ್ರಕಾರ ಚೀನಾದ ರಾಜಧಾನಿ ಬೀಜಿಂಗ್‌ಗಿಂತ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಭಾರತದ ಆರ್ಥಿಕ ರಾಜಧಾನಿ ಮುಂಬೈ "ಏಷ್ಯಾದ ಬಿಲಿಯನೇರ್ ರಾಜಧಾನಿ" ಆಗಿ ಹೊರಹೊಮ್ಮಿದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಮಾತ್ರ ಹಿಂದೆ ಬಿದ್ದಿದೆ. ಹೈದ್ರಾಬಾದ್ ಮಹಾನಗರ ಬೆಂಗಳೂರನ್ನು ಹಿಂದಿಕ್ಕಿ ಹೆಚ್ಚು ಬಿಲೆನಿಯರ್‌ಗಳನ್ನು ಹೊಂದಿರುವವರ ನಗರಗಳ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಜಾಗತಿಕ, ಏಷಿಯಾ ಹಾಗೂ ಭಾರತದ ಮಟ್ಟದಲ್ಲಿ ಬೆಂಗಳೂರಿನ ಸ್ಥಿತಿಗತಿಗಳನ್ನು ಉಲ್ಲೇಖಿಸಿ ಉದ್ಯಮಿ ಮೋಹನ್ ದಾಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ದಿ ಎನ್ನುವುದು ಸ್ಥಗಿತವಾಗಿದೆ. ಇದರಿಂದ ಬೆಂಗಳೂರು ಹಿಂದಿನ ಸ್ಥಾನವನ್ನು ಬಿಲೇನಿಯರ್‌ಗಳ ಪಟ್ಟಿಯಲ್ಲಿ ಕಳೆದುಕೊಂಡಿರಬಹುದು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರನ್ನು ಟ್ಯಾಗ್ ಮಾಡಿ ಪೈ ಉಲ್ಲೇಖ ಮಾಡಿದ್ದಾರೆ.
17 ಹೊಸ ಬಿಲಿಯನೇರ್‌ಗಳ ಸೃಷ್ಟಿಯು ಹೈದರಾಬಾದ್‌ನಲ್ಲಿ ಒಟ್ಟು ಸಂಖ್ಯೆಯನ್ನು 104 ಕ್ಕೆ ಹೆಚ್ಚು ಮಾಡಕೊಂಡಿದೆ. ಇದರಿಂದ ಭಾರತದಲ್ಲಿ ಹೆಚ್ಚು ಬಿಲೇನಿಯರ್‌ಗಳಿರುವ ಮೂರನೇ ನಗರಿ ಎನ್ನಿಸಿಕೊಂಡಿದೆ. ಆದರೆ 100 ಶ್ರೀಮಂತ ವ್ಯಕ್ತಿಗಳೊಂದಿಗೆ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಹೈದ್ರಾಬಾದ್ ಈಗ ಬೆಂಗಳೂರಿಗಿಂತ ಹೆಚ್ಚು ಬಿಲೇನಿಯರ್‌ಗಳನ್ನು ಒಳಗೊಂಡ ನಗರಿ ಎನ್ನುವ ಹಿರಿಮೆ ಪಡೆದುಕೊಂಡಿದೆ.
ಹೈದರಾಬಾದ್ ಗಮನಾರ್ಹವಾದ ಜಿಗಿತವನ್ನು ಕಂಡು ಶ್ರೀಮಂತ ನಿವಾಸಿಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಮೊದಲ ಬಾರಿಗೆ ಬೆಂಗಳೂರನ್ನು ಹಿಂದಿಕ್ಕಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಮುಂಬೈ ಮೊದಲನೇ ಸ್ಥಾನ, ದೆಹಲಿ ಎರಡನೇ ಸ್ಥಾನ ಪಡೆದಿದ್ದರೆ ಹೈದ್ರಾಬಾದ್ ಹಾಗೂ ಬೆಂಗಳೂರು ನಂತರದ ಸ್ಥಾನದಲ್ಲಿವೆ.
ಟಾಪ್ 10 ರಲ್ಲಿರುವ ಇತರ ನಗರಗಳಲ್ಲಿ ಚೆನ್ನೈ (82), ಕೋಲ್ಕತ್ತಾ (69), ಅಹಮದಾಬಾದ್ (67), ಪುಣೆ (53), ಸೂರತ್ (28) ಮತ್ತು ಗುರುಗ್ರಾಮ್ (23) ಸೇರಿವೆ.
ಮುಂಬೈ 58 ಬಿಲಿಯನೇರ್ ವ್ಯಕ್ತಿಗಳ ಹೆಚ್ಚಳವನ್ನು ಕಂಡಿದೆ. ವಿಶ್ವದ ಪಟ್ಟಿಯಲ್ಲಿ ಅದರ ಒಟ್ಟು ಸಂಖ್ಯೆಯನ್ನು 386 ಕ್ಕೆ ಏರಿಸಿಕೊಂಡಿದೆ.
ಮುಂಬೈ ಏಷ್ಯಾದ ಬಿಲಿಯನೇರ್ ರಾಜಧಾನಿಯಾಗಿದ್ದು, ಬೀಜಿಂಗ್ ಅನ್ನು ಹಿಂದಿಕ್ಕಿದೆ. ಮುಂಬೈ ಈಗ ಏಷಿಯಾದ ಟಾಪ್ ಒಂದರ ನಗರವೂ ಹೌದು. ವಿಶ್ವದ ಮೂರನೇ ಶ್ರೀಮಂತರ ನಗರ .ನ್ಯೂಯಾರ್ಕ್ (119) ಮತ್ತು ಲಂಡನ್ (97) ನಂತರ ಮೂರನೇ ಸ್ಥಾನದಲ್ಲಿದೆ. ಮುಂಬೈ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಿಲಿಯನೇರ್ ರಾಜಧಾನಿಯಾಗಿದ್ದು, ವರ್ಷದಲ್ಲಿ 26 ಬಿಲೇನಿಯರ್‌ಗಳು ಹೆಚ್ಚಾಗಿದ್ದಾರೆ ಎನ್ನುತ್ತದೆ ವರದಿ.
ಈ ನಡುವೆ ಬೆಂಗಳೂರಿನ ಉದ್ಯಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಬೆಂಗಳೂರಿನ ಈ ಸ್ಥಿತಿಗೆ ಆಡಳಿತ ದುಸ್ಥಿತಿಯೂ ಕಾರಣ ಎಂದು ಕುಟುಕಿದ್ದಾರೆ. ಬೆಂಗಳೂರು ಹಿಂದೆ ಬಿದ್ದಿದೆ. ಆ ಸ್ಥಾನವನ್ನು ಹೈದ್ರಾಬಾದ್ ಪಡೆದುಕೊಂಡಿದೆ. ಅದೂ ಮೊದಲ ಬಾರಿಗೆ ಹೈದ್ರಾಬಾದ್ ಅನ್ನು ಹಿಂದಿಕ್ಕಿದೆ. ಇದು ಯಾವುದೇ ಅಭಿವೃದ್ದಿ ಇಲ್ಲದ ಬರೀ ಡಾಂಬಿಕ ಯೋಜನೆಗಳ ನಗರವಾಗಿ ಬೆಂಗಳೂರು ಮಾರ್ಪಟ್ಟಿದೆ. ಆಡಳಿತದ ಹಿನ್ನಡೆ ಬೇಸರದಾಯಕ(Bengaluru has lost out to Hyderabad in the rich list for first time. Sign of times to come with no development but grandiose projects? Very depressing-lack of governance) ಎಂದು ಪೈ ಉಲ್ಲೇಖಿಸಿದ್ದಾರೆ.