logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಸಿಸಿಬಿ ಕಾರ್ಯಾಚರಣೆ

Bangalore crime: ಬೆಂಗಳೂರಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಸಿಸಿಬಿ ಕಾರ್ಯಾಚರಣೆ

HT Kannada Desk HT Kannada

Dec 23, 2023 07:17 AM IST

google News

ಬೆಂಗಳೂರಿನಲ್ಲಿ ಮೀಟರ್‌ ಬಡ್ಡಿ ದಂಧೆಕೋರರ ಮೇಲೆ ಸಿಸಿಬಿ ತಂಡ ಸಹಕಾರ ಇಲಾಖೆ ಸಹಯೋಗದೊಂದಿಗೆ ದಾಳಿ ಮಾಡಿದೆ.

    • Bangalore Crime news ಬೆಂಗಳೂರಿನಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ದಂಧೆಕೋರರ ವಿರುದ್ದ ಸಿಸಿಬಿ( Bangalore CCB Police) ಪೊಲೀಸರು ಸಹಕಾರ ಇಲಾಖೆ( Co operative department) ಸಹಯೋಗದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮೀಟರ್‌ ಬಡ್ಡಿ ದಂಧೆಕೋರರ ಮೇಲೆ ಸಿಸಿಬಿ ತಂಡ ಸಹಕಾರ ಇಲಾಖೆ ಸಹಯೋಗದೊಂದಿಗೆ ದಾಳಿ ಮಾಡಿದೆ.
ಬೆಂಗಳೂರಿನಲ್ಲಿ ಮೀಟರ್‌ ಬಡ್ಡಿ ದಂಧೆಕೋರರ ಮೇಲೆ ಸಿಸಿಬಿ ತಂಡ ಸಹಕಾರ ಇಲಾಖೆ ಸಹಯೋಗದೊಂದಿಗೆ ದಾಳಿ ಮಾಡಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಮೀಟರ್‌ ಬಡ್ಡಿ ದಂಧೆಕೋರರ ಮೇಲೆ ಪೊಲೀಸ್‌ ಹಾಗೂ ಸಹಕಾರ ಇಲಾಖೆಯ ಜಂಟಿ ದಾಳಿ ನಡೆದಿದೆ.

ಪರವಾನಗಿ ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಅಧಿಕ ಬಡ್ಡಿಗೆ ಸಾಲ ನೀಡಿ ಹೆಚ್ಚಿನ ಬಡ್ಡಿಯನ್ನು (ಮೀಟರ್ ಬಡ್ಡಿ) ವಸೂಲಿ ಮಾಡುತ್ತಿದ್ದ ದಂಧೆಕೋರರ ಕಛೇರಿ ಹಾಗೂ ಮನೆಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳ, ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿ ನಿಬಂಧಕ ಅಧಿಕಾರಿಗಳ ತಂಡ ಜಂಟಿಯಾಗಿ ದಾಳಿ ನಡೆಸಿದೆ.

ದಾಳಿ ಸಂದರ್ಭದಲ್ಲಿ 2.24,000 ನಗದು, ವಿವಿಧ ದಾಖಲಾತಿಗಳು, 22 ಆಸ್ತಿಪತ್ರಗಳು, 78 ಆನ್ ಡಿಮಾಂಡ್ ಪ್ರಾಮಿಸರಿ ನೋಟ್, 120 ಅಮಾಯಕರ

ಸಹಿ ಇರುವ ವಿವಿಧ ಬ್ಯಾಂಕ್‌ಗಳ ಖಾಲಿ ಚೆಕ್‌ಗಳು ಮತ್ತು 44 ಸಹಿ ಮಾಡಿದ ಖಾಲಿ ಪೇಪರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಇನ್ನೂ ಹೆಚ್ಚಿನ ಆಸ್ತಿ ವಿವರಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಾರ್ವಜನಿಕರಿಗೆ ಹಿಂಸೆ ನೀಡಿ ಅಧಿಕ ಬಡ್ಡಿ ವಸೂಲಿ ಮಾಡಿರುವ ಬಗ್ಗೆ ತನಿಖೆ ಮುಂದುವರೆದಿದೆ.

ಬೆಂಗಳೂರಿನ ಹಲವು ಕಡೆ ಮೀಟರ್‌ ಬಡ್ಡಿ ದಂಧೆ ಮಾಡುವ ಕುರಿತು ದೂರುಗಳು ಬರುತ್ತಿದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, ಇದು ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಕೋರರ ಸೆರೆ

ಪೊಲೀಸರೆಂದು ಹೇಳಿಕೊಂಡು ಮನೆಯೊಳಗೆ ನುಗ್ಗಿ ಲಾಂಗ್ ಮತ್ತು ಮಚ್ಚುಗಳಿಂದ ಬೆದರಿಸಿ ದರೋಡೆ ನಡೆಸಿದ್ದ ಕಳ್ಳರ ತಂಡವನ್ನು ಬಂಧಿಸುವಲ್ಲಿ ಪೀಣ್ಯ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇವರಿಂದ ಕಳವು ಮಾಡಿದ್ದ ರೂ. 45.52 ಲಕ್ಷ ಬೆಲೆ ಬಾಳುವ 273 ಗ್ರಾಂ ಚಿನ್ನಾಭರಣಗಳು , 23,37,300 ಲಕ್ಷ ನಗದು ಹಣ, 370 ಗ್ರಾಂ ಬೆಳ್ಳಿ ಆಭರಣಗಳು, 2 ಮೊಬೈಲ್ ಫೋನ್‌ ವಶಪಡಿಸಿ ಕೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಫೋನ್, 3 ಲಾಂಗ್, ತಲಾ ಒಂದು ಡ್ರಾಗರ್, ರಾಡ್, 1 ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ಎಂ.ಟಿ. ಲೇಔಟ್‌ ನಿವಾಸಿ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿಯ ಮಾಲೀಕ ಮನೋಹರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು.

ದರೋಡೆ ನಡೆದಾಗ ಇವರು ಮನೆಯಲ್ಲಿರಲಿಲ್ಲ.ಇವರ ಪತ್ನಿ ಮತ್ತು ಪುತ್ರ ದೂರು ನೀಡಿದ್ದರು. ದೂರು ನೀಡಿದ 9 ದಿನಗಳಲ್ಲೇ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಡಿಸೆಂಬರ್ 4 ರಂದು ಮನೋಹರ್ ಪತ್ನಿ ಸುಜಾತ ಮತ್ತು ಪುತ್ರ ರೂಪೇಶ್ ಸುಮಾರು 6.30 ಕ್ಕೆ ಕಾರ್ಖಾನೆಯಿಂದ ಮನೆಗೆ ಹಿಂತಿರುಗುತ್ತಾರೆ. ರಾತ್ರಿ ಸುಮಾರು 7.30ರ ಸುಮಾರಿಗೆ ಮನೆಯ ಕಾಲಿಂಗ್ ಬೆಲ್ ಸದ್ದಾಗಿದೆ. ಬಾಗಿಲು ತೆರೆದು ನೋಡಿದಾಗ ಮನೆಯ ಬಾಗಿಲಿನಲ್ಲಿದ್ದ ಇಬ್ಬರು ವ್ಯಕ್ತಿಗಳು ತಾವು ಪೊಲೀಸರೆಂದು ಹೇಳಿಕೊಂಡು ಮನೆಯೊಳಗೆ ಪ್ರವೇಶಿಸಿದ್ದಾರೆ. ನಂತರ ಮನೆಯ ಹೊರಗೆ ಪ್ಯಾಸೇಜ್‌ನಲ್ಲಿದ್ದ ಇತರೆ 4-5 ವ್ಯಕ್ತಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿ ಕೈಗಳನ್ನು ಕಟ್ಟಿ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಮತ್ತು ಇವರ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆ.

ಮನೆಯಲ್ಲಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ವ್ಯಕ್ತಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಇನ್ನೊಬ್ಬ ಹೆಣ್ಣೂರು ಪೊಲೀಸ್ ಠಾಣೆಯ ರೌಡಿ ಶೀಟರ್‌ಗಳಾಗಿರುತ್ತಾರೆ. ಮತ್ತೊಬ್ಬ ಆರೋಪಿಯು ಲಾರಿ ಡ್ರೈವರ್ ಮತ್ತು ಹಣ ಕಲೆಕ್ಷನ್ ಮಾಡುವ ಕೆಲಸವನ್ನೂ ಮಾಡಿಕೊಂಡಿರುತ್ತಾನೆ.

ಈತ ಕಳೆದ ವರ್ಷ ಡಿಸೆಂಬರ್ ನಲ್ಲಿ ಇದೇ ಮನೆಯವರ ಸಂಸ್ಥೆಯಲ್ಲಿ ಕೆಲಸಕ್ಕಿದ್ದು, ನಂತರ ಕೆಲಸ ಬಿಟ್ಟಿರುತ್ತಾನೆ. ಈತ ದೂರುದಾರರ ಹಣಕಾಸಿನ ವ್ಯವಹಾರವನ್ನು ತಿಳಿದುಕೊಂಡಿರುತ್ತಾನೆ. ಈ ವಿಷಯವನ್ನು ತನ್ನ ಸಹಚರರಿಗೆ ವಿಷಯ ತಿಳಿಸಿ ದರೋಡೆ ಮಾಡುವ ಸಂಚು ರೂಪಿಸಿರುತ್ತಾರೆ.

ಅರಣ್ಯಾಧಿಕಾರಿ ಭಾಗಿ

ತಾನು ಪೊಲೀಸ್ ಎಂದು ಹೇಳಿಕೊಂಡ ವ್ಯಕ್ತಿಯು ಚಿಕ್ಕಮಗಳೂರಿನ ಚನ್ನಗಿರಿ ಅರಣ್ಯ ವಲಯದಲ್ಲಿನ ಉಪ ಅರಣ್ಯಾಧಿಕಾರಿಯಾಗಿದ್ದಾನೆ. ಈತ ಫಿರ್ಯಾದುದಾರರ ಮನೆಗೆ ಸಮವಸ್ತ್ರದಲ್ಲಿ ಹೋಗಿ ತಾನೊಬ್ಬ ಪೊಲೀಸ್ ಎಂದು ಪರಿಚಯ ಮಾಡಿಕೊಳ್ಳುವ ಸಮಯದಲ್ಲಿ ಉಳಿದ ವ್ಯಕ್ತಿಗಳು ಮನೆಯೊಳಗೆ ನುಗ್ಗಿ ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತ ಸೈದುಲ್ ಅಡಾವತ್ ಅವರ ಮಾರ್ಗದರ್ಶನದಲ್ಲಿ ಪೀಣ್ಯ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಸದಾನಂದ ಎ ತಿಪ್ಪಣ್ಣವರ್ ನೇತೃತ್ವದಲ್ಲಿ ಪೀಣ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಎಂ.ಎಸ್. ಮತ್ತು ಸಿಬ್ಬಂದಿ ಪ್ರಕರಣದವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ