Bangalore News: ಹೆಬ್ಬಾಳ ಮೇಲ್ಸೇತುವೆ ಮೇಲೆ 4 ತಿಂಗಳು ಸಂಚಾರ ಕಷ್ಟ, ಮಾರ್ಗ ಬದಲಿಸಲು ಸೂಚನೆ
Mar 28, 2024 09:19 PM IST
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ
- ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಕಾರಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಲಿದೆ. ನಾಲ್ಕು ತಿಂಗಳು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನಲ್ಲಿ ಅತಿ ಮುಖ್ಯ ರಸ್ತೆಗಳಲ್ಲಿ ಒಂದಾಗಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದ್ದು ಈಗಾಗಲೇ ಬಿಡಿಎ ಕಾಮಗಾರಿಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ ಕೆಲ ದಿನಗಳ ಕಾಲ ವಾಹನ ದಟ್ಟಣೆ ಹೆಚ್ಚಾಗಲಿದೆ. ಈ ಭಾಗದಲ್ಲಿ ಮುಂದಿನ ನಾಲ್ಕು ತಿಂಗಳು ಅಂದರೆ ಜುಲೈ ವರೆಗೆ ಸಂಚಾರ ದಟ್ಟಣೆ ಉಂಟಾಗುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಸಂಚಾರ ವಿಭಾಗವು ಸೂಚನೆ ನೀಡಿದೆ.
ಮಾರ್ಗ ಬದಲಾವಣೆ ಹೀಗಿದೆ
ಈ ವಾಹನ ದಟ್ಟಣೆಯನ್ನು ತಪ್ಪಿಸಲು ಸಂಚಾರ ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಈ ಹೊಸ ಪರ್ಯಾಯ ಮಾರ್ಗಗಳನ್ನೇ ಬಳಸುವಂತೆ ಸೂಚನೆ ನೀಡಿದೆ.
ಕೆ.ಆರ್.ಪುರಂ ಲೂಪ್ ಮುಖ್ಯ ಟ್ರ್ಯಾಕ್ ಬಳಿ ಸೇರುವ ಎರಡು ಸ್ಪ್ಯಾನ್‌ಗಳನ್ನು ತೆಗೆದು ಹಾಕಿ ಹೊಸ ಸ್ಪ್ಯಾನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಇದರಿಂದ ಕೆಆರ್ ಪುರಂ ಲೂಪ್‌ನಲ್ಲಿ ಮುಂದಿನ ನಾಲ್ಕು ತಿಂಗಳವರೆಗೆ ಬೆಂಗಳೂರಿನ ಕಡೆಗೆ ಸಂಚರಿಸುವವರಿಗೆ ಅಡಚಣೆ ಉಂಟಾಗುವ ಎಲ್ಲ ಸಾಧ್ಯತೆಗಳಿವೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮಂದಗತಿಯಲ್ಲಿ ಸಾಗುವುದು ನಿಶ್ಚಿತ. ಕೆ.ಆರ್. ಪುರಂ ಕಡೆಯಿಂದ ಬೆಂಗಳೂರಿನತ್ತ ಸಾಗುವ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ತಿಳಿಸಿದ್ದಾರೆ.
ಐಒಸಿ– ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ, ನಾಗವಾರ–ಟ್ಯಾನರಿ ರಸ್ತೆ ಮಾರ್ಗವಾಗಿ ಬೆಂಗಳೂರು ಕಡೆಗೆ ಪ್ರಯಾಣ ಮಾಡಬಹುದು.
ಹೆಗಡೆನಗರ ಥಣಿಸಂದ್ರ ಮಾರ್ಗದಲ್ಲಿ ಆಗಮಿಸುವ ವಾಹನಗಳು ಜಿಕೆವಿಕೆ ರಸ್ತೆಯ ಮೂಲಕ ಬೆಂಗಳೂರಿಗೆ ಅಗಮಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಏನಿದು ಯೋಜನೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಆಗಮಿಸುವ ವಾಹನ ದಟ್ಟಣೆ ತಪ್ಪಿಸಲು ಹಾಗೂ ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಎರಡು ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲು ಬಿಡಿಎ ಚಿಂತನೆ ನಡೆಸಿತ್ತು.
ನಂತರ ತಜ್ಞರ ಜೊತೆಗೆ ಚರ್ಚಿಸಿ ಹೆಬ್ಬಾಳ ಮೇಲ್ಸೇತುವೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಆ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಈ ಕಾಮಗಾರಿಗೆ ಕಾಲ ಕೂಡಿ ಬಂದಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)
ವಿಭಾಗ