logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಿನಲ್ಲಿ ಲೋಕಾಯುಕ್ತ ನಕಲಿ ಇನ್ಸ್‌ಪೆಕ್ಟರ್‌ ಬಂಧನ: ಆಂಧ್ರದಲ್ಲೂ ಈತನ ವಂಚನೆ ಪ್ರಕರಣ ಬಯಲು

Bangalore Crime: ಬೆಂಗಳೂರಿನಲ್ಲಿ ಲೋಕಾಯುಕ್ತ ನಕಲಿ ಇನ್ಸ್‌ಪೆಕ್ಟರ್‌ ಬಂಧನ: ಆಂಧ್ರದಲ್ಲೂ ಈತನ ವಂಚನೆ ಪ್ರಕರಣ ಬಯಲು

HT Kannada Desk HT Kannada

Jan 02, 2024 07:36 PM IST

google News

ಬೆಂಗಳೂರಿನ ಮೂರು ಅಪರಾಧ ಪ್ರಕರಣಗಳಲ್ಲಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    • Bangalore crime News ಬೆಂಗಳೂರು ಮಾತ್ರವಲ್ಲದೇ ಆಂಧ್ರಪ್ರದೇಶದಲ್ಲೂ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಂಗಳೂರಿನ ಮೂರು ಅಪರಾಧ ಪ್ರಕರಣಗಳಲ್ಲಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮೂರು ಅಪರಾಧ ಪ್ರಕರಣಗಳಲ್ಲಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಲೋಕಾಯುಕ್ತ ಅಧಿಕಾರಿ ಎಂದು ಕರೆ ಮಾಡಿ ಲೋಕಾಯುಕ್ತದಲ್ಲಿ ನಿಮ್ಮ ವಿರುದ್ದ ಪ್ರಕರಣ ದಾಖಲಾಗಿದ್ದು, ಬಿ ರಿಪೋರ್ಟ್ ಸಲ್ಲಿಸಲು ಹಣ. ನೀಡುವಂತೆ ಬೆದರಿಕೆ ಒಡ್ಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಈತನು ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಎಂದು ಹೇಳಿ ಕೊಳ್ಳುತ್ತಿರುತ್ತಾನೆ. ಈ ರೀತಿ ನಂಬಿಸಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಪ್ರಯತ್ನ ನಡೆಸಿರುತ್ತಾನೆ ಎನ್ನುವುದು ಪೊಲೀಸರ ವಿವರಣೆ.

ಸರ್ಕಾರಿ ಅಧಿಕಾರಿಯೊಬ್ಬರಿಗೆ ಮೊಬೈಲ್‌ನಿಂದ ಕರೆ ಮಾಡಿ ತಾನು ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಚಂದ್ರಶೇಖರ್‌ ಎಂದು ತಿಳಿಸಿ, ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆ ಎಂದು ಹೇಳಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪಿಟಿಷನ್ ಇರುತ್ತದೆ. ಇದನ್ನು ವಿಚಾರಣೆ ಮಾಡದೆ ಮುಕ್ತಾಯಗೊಳಿಸಲು ಹಣ ನೀಡಬೇಕಾಗುತ್ತದೆ. ನೀವು ಹಣ ಕೊಟ್ಟರೆ ಟೆಕ್ನಿಕಲ್ ಟೀಂ ನಿಂದ ವಿಚಾರಣೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಲಾಗುವುದು ಎಂದು ತಿಳಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ.

ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಡೆಸಿದ ಸಿಸಿಬಿ ಪೊಲೀಸರು, ಈತನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಈತ ತಾನೇ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಚಂದ್ರಶೇಖರ್ ಹೆಸರಿನಲ್ಲಿ ಕರೆ ಮಾಡಿ, ಎಡಿಜಿಪಿ ಕೇಶವರಾವ್ ಅವರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈತ ಈ ಹಿಂದೆ ಆಂಧ್ರಪ್ರದೇಶ ದಲ್ಲಿಯೂ ಸಹ ಸರ್ಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಈತನ ವಿರುದ್ಧ ಬೆಂಗಳೂರಿನ ಸಿದ್ದಾಪುರ, ಹೈಗ್ರೌಂಡ್ ಪೊಲೀಸ್ ಠಾಣೆ ಮತ್ತು ಆಂಧ್ರದ ಅನಂತಪುರ ಜಿಲ್ಲೆಯ ಟೂ ಟೌನ್ ಹಾಗೂ ರಾಜ್‌ಮಂಡಿಯ ತ್ರಿಟೌನ್ ಪೊಲೀಸ್ ಠಾಣೆಗಳಲ್ಲಿ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ದ ಬೆಂಗಳೂರು ನಗರದಲ್ಲಿನ ಠಾಣೆಗಳಾದ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೂರ್ಯಸಿಟಿ, ಕೋಲಾರ ಟೌನ್ ಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿವೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಸಂಘಟಿತ ಅಪರಾಧ ದಳ (ಪೂರ್ವ) ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಭೇದಿಸಿದ್ದಾರೆ.

ಡ್ರಗ್‌ ಪೆಡ್ಲರ್‌ ಬಂಧನ

ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓರ್ವ ಡ್ರಗ್‌ ಪೆಡ್ಲರ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ ರೂ. 8,40,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು 2024ರ ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡ್ರಗ್ ಪೆಡ್ಲರ್‌ಗಳ ಮೇಲೆ ವಿಶೇಷವಾದ ಕಾರ್ಯಚರಣೆಯನ್ನು ನಡೆಸಿತ್ತು.

ಈ ಸಂಬಂಧ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ, ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಓರ್ವ ಡ್ರಗ್‌ಪೆಡ್ಲರ್‌ನನ್ನು ವಶಕ್ಕೆ ಪಡೆದು, ಆತನಿಂದ ನಿಷೇಧಿತ ಮಾದಕ ವಸ್ತುಗಳಾದ 25 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, 30ಎಕ್ಸ್‌ಟಿಸಿ ಪಿಲ್ಸ್‌ಗಳು ಮತ್ತು 1.54ಕೆಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಇತರೆ ವಸ್ತುಗಳನ್ನು

ವಶಪಡಿಸಿಕೊಳ್ಳಲಾಗಿದೆ.

ಈತ ಮೂಲತಃ ಬೆಂಗಳೂರಿನ ದೊಮ್ಮಲೂರು ನಿವಾಸಿಯಾಗಿದ್ದು ಪದವೀಧರ. ಈತ 2024ರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ನಿಷೇಧಿತ ಮಾದಕ ವಸ್ತುಗಳಾದ ಎಂ.ಡಿ.ಎಂ.ಎ ಕ್ರಿಸ್ಟೆಲ್, ಎಕ್ಸ್‌ಟಿಸಿ ಪಿಲ್ಸ್‌ಗಳು ಮತ್ತು ಗಾಂಜಾವನ್ನು ಸ್ಥಳೀಯ ಡ್ರಗ್‌ ಪೆಡ್ಲರ್‌ಗಳಿಂದ ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಬಯಲಾಗಿದೆ.

ಈತನ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಆರು ಮಂದಿ ಸೆರೆ

ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣಪಾಳ್ಯ ಹಿಂದೂ ರುದ್ರ ಭೂಮಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರು ಮಂದಿಯ ತಂಡದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 3 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರಲ್ಲಿ ಒಬ್ಬ ಆರೋಪಿಯ ವಿರುದ್ಧ 2018 ರಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಡಕಾಯತಿ ಪ್ರಕರಣ ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

( ವರದಿ: ಎಚ್. ಮಾರುತಿ ಬೆಂಗಳೂರು)

==========

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ