logo
ಕನ್ನಡ ಸುದ್ದಿ  /  ಕರ್ನಾಟಕ  /  Bbmp Climate Fellowship: ಬೆಂಗಳೂರು ಹವಾಮಾನ ಕ್ರಿಯಾಯೋಜನೆ ತಯಾರಿಸುತ್ತೀರಾ, ಬಿಬಿಎಂಪಿ ನೀಡಲಿದೆ ಮಾಸಿಕ 60 ಸಾವಿರ ರೂ. ಫೆಲೋಶಿಪ್‌

BBMP Climate FellowShip: ಬೆಂಗಳೂರು ಹವಾಮಾನ ಕ್ರಿಯಾಯೋಜನೆ ತಯಾರಿಸುತ್ತೀರಾ, ಬಿಬಿಎಂಪಿ ನೀಡಲಿದೆ ಮಾಸಿಕ 60 ಸಾವಿರ ರೂ. ಫೆಲೋಶಿಪ್‌

Umesha Bhatta P H HT Kannada

Jul 15, 2024 04:40 PM IST

google News

ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿ ಬಿಬಿಎಂಪಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ

  • Bangalore News ಬೆಂಗಳೂರು ನಗರದ ಪರಿಸರ ರಕ್ಷಿಸುವ ಕಾಳಜಿ, ಆಸಕ್ತಿ ಇದ್ದವರಿಗೆ ಬಿಬಿಎಂಪಿ ವಿಶೇಷ ಫೆಲೋಶಿಪ್‌ (BBMP Climate FellowShip) ಅನ್ನು ಪ್ರಕಟಿಸಿದೆ.

ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿ ಬಿಬಿಎಂಪಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ
ಹವಾಮಾನ ವೈಪರಿತ್ಯಕ್ಕೆ ಸಂಬಂಧಿಸಿ ಬಿಬಿಎಂಪಿ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಿದೆ

ಬೆಂಗಳೂರು: ಮಿತಿ ಮೀರಿದ ಹವಾಮಾನ ವೈಪರಿತ್ಯಗಳ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅದರಲ್ಲೂ ನಮ್ಮ ಬದುಕಿನಲ್ಲಿ ಆಗುತ್ತಿರುವ ಸಣ್ಣ ಸಣ್ಣ ಬದಲಾವಣೆಗಳ ಹಿಂದೆ ಹವಾಮಾನದಲ್ಲಿ ಆಗುತ್ತಿರುವ ವೈಪರಿತ್ಯದ ಅಂಶಗಳೂ ಇವೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲೂ ಅದನ್ನು ಕಾಣುತ್ತಿದ್ದೇವೆ. ಇದೇ ಕಾರಣದಿಂದ ಹವಾಮಾನ ವೈಪರಿತ್ಯದಿಂದ ಆಗುತ್ತಿರುವ ಪರಿಣಾಮ, ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ( bbmp) ಬೆಂಗಳೂರು ಹವಾಮಾನ ಕ್ರಿಯಾಯೋಜನೆಗೆ (BBMP Climate FellowShip) ಮುಂದಾಗಿದೆ. ಇದಕ್ಕಾಗಿ ಆಸಕ್ತರಿಗೆ ಮಾಸಿಕವಾಗಿ 60 ಸಾವಿರ ರೂ. ವರೆಗೂ ಫೆಲೋಶಿಪ್‌ ನೀಡುವ ಯೋಜನೆ ರೂಪಿಸಿದೆ.

ಬಿಬಿಎಂಪಿಯ ಹವಾಮಾನ ಕ್ರಿಯಾಕೋಶ( BBMP Climate action Cell) ಹವಾಮಾನ ಬದಲಾವಣೆ ಹಾಗೂ ನಾಗರೀಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ಆಲೋಚನೆ, ಕೌಶಲ್ಯ ಹಾಗೂ ನಾವಿನ್ಯತೆಗಳಿಂದ ಕೂಡಿದ ಸಲಹೆಗಳನ್ನು ಪಡೆಯಲು ಮುಂದಾಗಿದೆ. ಬೆಂಗಳೂರು ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಬಿಎಂಪಿಯ ಹವಾಮಾನ ಕ್ರಿಯಾಕೋಶಕ್ಕೆ ಸಹಾಯ ಮಾಡಲು ಹಾಗೂ ಹವಾಮಾನ ಕೋಶದ ಕಾರ್ಯನಿರ್ವಹಣೆಯನ್ನು ಸಬಲಗೊಳಿಸಿ ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಬೇಕಿದೆ. ಇದಕ್ಕಾಗಿಯೇ ಆಸಕ್ತ ಯುವ ವೃತ್ತಿಪರರಿಂದ ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್‌ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಏನಿದರ ವಿಶೇಷ?

ಬಿಬಿಎಂಪಿಯ ಹವಾಮಾನ ಕ್ರಿಯಾಕೋಶವು ತನ್ನ ಕಾರ್ಯನಿರ್ವಹಣೆಗೆ ಸಹಾಯ ಮಾಡಲು 8 ಸಂಖ್ಯೆಯ ಫೆಲೋಶಿಪ್‌ಗಳನ್ನು ನೀಡಲಿದೆ. ಇದಕ್ಕಾಗಿ 12 ತಿಂಗಳ ಕಾಲಾವಧಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಫೆಲೋಗಳಿಗೆ ವಹಿಸಲಾಗುವ ನಿರ್ದಿಷ್ಟ ಜವಾಬ್ದಾರಿಗಳಿಗೆ ಅನುಗುಣವಾಗಿ ಮಾಸಿಕವಾಗಿ 40 ರಿಂದ 60 ಸಾವಿರ ರೂ. ಸಂಭಾವನೆಯನ್ನು ನೀಡಲಾಗುವುದು. ಫೆಲೋಗಳಿಗೆ ಹವಾಮಾನ ಕ್ರಿಯಾಕೋಶದ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ವೆಬ್‌ಪೋರ್ಟಲ್‌ https://apps.bbmpgov.in/bcap ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ ಹಾಗೂ ಇತರೆ ಮಾರ್ಗಸೂಚಿಗಳ ಮಾಹಿತಿಗೆ ವೆಬ್‌ಪೋರ್ಟಲ್‌ಗೆ ಭೇಟಿ ನೀಡಬಹುದಾಗಿ. ಫೆಲೋಶಿಪ್‌ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು 2024ರ ಆಗಸ್ಟ್‌ 6 ಕೊನೆಯ ದಿನವಾಗಿದೆ. ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣಕ್ಕಾಗಿ specialcommissionerfeccbbmp@gmail.com ವಿಳಾಸಕ್ಕೆ ಇ ಮೇಲ್‌ ಮಾಡುವಂತೆ ಬಿಬಿಎಂಪಿ ಅರಣ್ಯ,ಪರಿಸರ, ಹವಾಮಾನ ವೈಪರಿತ್ಯ ನಿರ್ವಹಣೆ ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ಮಹಾನಗರವು ಹವಾಮಾನ ವೈಪರಿತ್ಯದಿಂದ ಸಾಕಷ್ಟು ಬದಲಾವಣೆ ಆಗಿದೆ. ಇದರಲ್ಲಿ ನಗರದಲ್ಲಿ ಹಸುರೀಕರಣ, ಕೆರೆಗಳ ಪುನಶ್ಚೇತನ, ಇಂಗುಗುಂಡಿಗಳ ನಿರ್ಮಾಣ, ಅಂತರ್ಜಲ ವೃದ್ದಿ, ಪರಿಸರ ಮಾಲಿನ್ಯ, ರಸ್ತೆಗಳ ನಿರ್ಮಾಣ, ಇದರಿಂದ ಆಗುತ್ತಿರುವ ಪ್ರವಾಹದ ಸನ್ನಿವೇಶ, ವೈಪರಿತ್ಯದ ಆಗಿರುವ ಅನಾಹುತಗಳು, ಆಗಬಹುದಾದ ಪರಿಣಾಮಗಳು, ಇದಕ್ಕೆ ವಿಭಿನ್ನ ನಗರ, ಪ್ರದೇಶಗಳಲ್ಲಿ ಕೈಗೊಂಡ ಸಂಶೋಧನೆ, ಅದರ ಉಪಯೋಗಗಳನ್ನು ಒಳಗೊಂಡು ವಿವರವಾದ ಮಾಹಿತಿಯನ್ನು ನೀಡಬೇಕು. ಹವಾಮಾನ ವೈಪರಿತ್ಯದಿಂದ ಆಗಬಹುದಾಗ ವಿವಿಧ ವಲಯಗಳನ್ನು ಆಧರಿಸಿ ಪ್ರತ್ಯೇಕವಾಗಿ ಜವಾಬ್ದಾರಿಯನ್ನು ನೀಡಲಾಗುತ್ತದೆ. ಆ ವರದಿಗಳನ್ನು ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತದೆ. ಪರಿಸರ ಹಾಗೂ ಮನುಷ್ಯನ ನಂಟು ಗಟ್ಟಿಗೊಳಿಸುವುದು, ಅಭಿವೃದ್ದಿ ವೇಗದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದೊಂದು ಪ್ರಯತ್ನ. ಕೇಂದ್ರ ಸರ್ಕಾರವೂ ಕೂಡ ಇಂತಹ ವಿಷಯಗಳಿಗೆ ಒತ್ತು ನೀಡುತ್ತಿರುವುದರಿಂದ ಬಿಬಿಎಂಪಿ ಅರಣ್ಯ, ಪರಿಸರ, ಹವಾಮಾನ ವೈಪರಿತ್ಯ ವಿಭಾಗ ಈ ಕಾರ್ಯಯೋಜನೆ ರೂಪಿಸಿದೆ.ಕಾಲಮಿತಿಯೊಳಗೆ ಫೆಲೋಶಿಪ್‌ ಮೂಲಕ ಬರುವ ಸಲಹೆ, ವರದಿಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಆಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ