logo
ಕನ್ನಡ ಸುದ್ದಿ  /  ಕರ್ನಾಟಕ  /  Bharat Rice: ಗೋಧಿ,ಕಾಳುಗಳ ನಂತರ ಬಂತು ಕೇಂದ್ರ ಸರ್ಕಾರದ ಭಾರತ್‌ ಬ್ರಾಂಡ್‌ ಅಕ್ಕಿ, ನೀವು ಹೇಗೆ ಖರೀದಿಸಬಹುದು

Bharat Rice: ಗೋಧಿ,ಕಾಳುಗಳ ನಂತರ ಬಂತು ಕೇಂದ್ರ ಸರ್ಕಾರದ ಭಾರತ್‌ ಬ್ರಾಂಡ್‌ ಅಕ್ಕಿ, ನೀವು ಹೇಗೆ ಖರೀದಿಸಬಹುದು

Umesha Bhatta P H HT Kannada

Feb 06, 2024 05:01 PM IST

google News

ಭಾರತ್‌ ಬ್ರಾಂಡ್‌ ನಡಿ ಕಡಿಮೆ ಬೆಲೆಗೆ ಅಕ್ಕಿ ಮಾರುಕಟ್ಟೆಗೆ ಬಂದಿದೆ.

    • ಅಕ್ಕಿ ದರ ಏರಿಕೆಯಾಗಿರುವುದರಿಂದ ದರ ತಗ್ಗಿಸುವ ಭಾಗವಾಗಿ ಕೇಂದ್ರ ಸರ್ಕಾರ ಭಾರತ ಬ್ರಾಂಡ್‌  ಹೆಸರಿನಡಿ ಅಕ್ಕಿ ಮಾರಾಟ ಶುರು ಮಾಡಿದೆ. 
ಭಾರತ್‌ ಬ್ರಾಂಡ್‌ ನಡಿ ಕಡಿಮೆ ಬೆಲೆಗೆ ಅಕ್ಕಿ ಮಾರುಕಟ್ಟೆಗೆ ಬಂದಿದೆ.
ಭಾರತ್‌ ಬ್ರಾಂಡ್‌ ನಡಿ ಕಡಿಮೆ ಬೆಲೆಗೆ ಅಕ್ಕಿ ಮಾರುಕಟ್ಟೆಗೆ ಬಂದಿದೆ.

ಬೆಂಗಳೂರು: ಆಹಾರ ವಸ್ತುಗಳು ಬೆಲೆ ಏರಿಕೆ ಬಿಸಿಯಿಂದ ಸಾಮಾನ್ಯ ಜನ ತತ್ತರಿಸಿದಾಗ ಕೇಂದ್ರ ಆಹಾರ ಇಲಾಖೆಯು ಗೋಧಿ, ಕಾಳುಗಳು, ಗೋಧಿಹಿಟ್ಟು, ತರಕಾರಿಗಳನ್ನು ಕಡಿಮೆ ಬೆಲೆಗೆ ಒದಗಿಸಿತ್ತು. ಹಲವು ರಾಜ್ಯಗಳು ಇಂತಹ ಚಟುವಟಿಕೆಗಳನ್ನು ರೂಪಿಸವೆ. ಈಗ ಅಕ್ಕಿ ದರ ಗಗನಮುಖಿಯಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಭಾರತ್‌ ಬ್ರಾಂಡ್‌ ಅಕ್ಕಿ ಮಾರುಕಟ್ಟೆಗೆ ಬಂದಿದೆ. ಮಂಗಳವಾರ ಸಂಜೆಯಿಂದ ದೇಶದ ಪ್ರಮುಖ ನಗರಗಳಲ್ಲಿ ಕೆಜಿಗೆ 29 ರೂ. ನೀಡಿ ಭಾರತ್‌ ಬ್ರಾಂಡ್‌ ಅಕ್ಕಿ ಖರೀದಿಸಬಹುದು. ದೆಹಲಿ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಮಾರಾಟ ಶುರುವಾಗಿದೆ.

ಭಾರತ್‌ ಬ್ರಾಂಡ್‌ ಅಕ್ಕಿಯನ್ನು ಯಾರು ಬೇಕಾದರೂ ಖರೀದಿಸಬಹುದು. ಇದಕ್ಕೆ ಯಾವುದೇ ಮಿತಿಯಾಗಲಿ, ನಿಯಂತ್ರಣವಾಗಲಿ ಇಲ್ಲ. ಬೇಕು ಎನ್ನುವ ಬೇಡಿಕೆ ಬಂದರೆ ಮನೆಗೆ ಅಕ್ಕಿಯನ್ನು ತಲುಪಿಸುವ ವ್ಯವಸ್ಥೆಯೂ ಆಗಲಿದೆ. ಮೊದಲ ಹಂತದಲ್ಲಿ 5 ಲಕ್ಷ ಟನ್‍ನಷ್ಟು ಅಕ್ಕಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಅಗತ್ಯ ಹಾಗೂ ಬೇಡಿಕೆ ನೋಡಿಕೊಂಡು ಇನ್ನಷ್ಟು ಅಕ್ಕಿಯನ್ನು ಕೇಂದ್ರ ಆಹಾರ ಇಲಾಖೆಯು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ಬಿಡುಗಡೆ ಮಾಡಲಿದೆ ಎನ್ನುವುದು ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ನೀಡುವ ವಿವರಣೆ.

ಒಂದು ವರ್ಷದ ಅವಧಿಯಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಶೇ 14.5 ಮತ್ತು ಸಗಟು ಮಾರುಕಟ್ಟೆಯಲ್ಲಿ ಶೇ 15.5ರಷ್ಟು ಅಕ್ಕಿ ದರ ಏರಿಕೆಯಾಗಿದೆ. ಬೆಲೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ದಾಸ್ತಾನು ಮಾಡಿರುವ ಅಕ್ಕಿ ಮತ್ತು ಭತ್ತದ ಪ್ರಮಾಣವನ್ನು ವರ್ತಕರು, ಗಿರಣಿ ಮಾಲೀಕರು ಬಹಿರಂಗಪಡಿಸಬೇಕು ಎನ್ನುವ ಸೂಚನೆಯನ್ನು ನೀಡಿದೆ. ಇದರ ಭಾಗವಾಗಿಯೇ ಆಹಾರ ನಿಗಮ ಸೇರಿ ಇತರೆ ಸಹಕಾರಿ ಸಂಸ್ಥೆಗಳ ಮೂಲಕವೂ ಕೇಂದ್ರ ಸರ್ಕಾರ ಅಕ್ಕಿ ಮಾರಾಟ ಬಲಪಡಿಸಿ ಸುಲಭವಾಗಿ ಬಡ ಹಾಗೂ ಮಧ್ಯಮವರ್ಗದವರಿಗೆ ಅಕ್ಕಿ ಸಿಗುವಂತೆ ನೋಡಿಕೊಳ್ಳುತ್ತಿದೆ.

ಭಾರತದಲ್ಲಿ ಅಕ್ಕಿ, ಗೋಧಿ ಸಹಿತ ಹಲವು ಆಹಾರ ಪದಾರ್ಥಗಳ ದರಗಳು ಏರಿಕೆಯಾಗಿದ್ದರಿಂದ ಕೇಂದ್ರ ಸರಕಾರ ಅವುಗಳ ರಫ್ತನ್ನು ನಿಷೇಧಿಸಿತ್ತು.ವಿಶೇಷವಾಗಿ ಅಕ್ಕಿ ರಫ್ತು ಆದೇಶ ಇನ್ನೂ ಜಾರಿಯಲ್ಲಿದೆ. ದರ ಇಳಿಕೆಯಾಗುವವರೆಗೂ ರಫ್ತು ಆದೇಶ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೂ ಬೆಲೆ ಏರಿಕೆ ಮಾತ್ರ ತಗ್ಗಿಲ್ಲ. ಇದರ ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗಿದೆ.

ಅಕ್ಕಿ ಖರೀದಿ ಹೇಗೆ

  • ಮುಕ್ತ ಮಾರುಕಟ್ಟೆಯಲ್ಲಿನ ಖರೀದಿ ವ್ಯವಸ್ಥೆಯಿದು. ಯಾವುದೇ ನಿರ್ಬಂಧಗಳಿಲ್ಲ.
  • ಭಾರತ್‌ ಬ್ರಾಂಡ್‌ನ ಅಕ್ಕಿಯಿದು. ಉತ್ತಮ ದರ್ಜೆಯ ಅಕ್ಕಿ.
  • 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್ ಗಳಲ್ಲಿ ದೊರೆಯಲಿದೆ.
  • ಪ್ರತಿ ಕೆ.ಜಿ ಅಕ್ಕಿಗೆ 29 ದರ ನಿಗದಿಪಡಿಸಲಾಗಿದೆ.
  • ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳಲ್ಲಿ ಮಾರಾಟಕ್ಕೇ ಅವಕಾಶ ಕಲ್ಪಿಸಲಾಗಿದೆ.
  • ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ (ನಾಫೆಡ್​​) 7 ಸಂಚಾರಿ ವಾಹನಗಳಲ್ಲಿ ಭಾರತ್​ ಅಕ್ಕಿ ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿರಿ: Rashmika Mandanna: ಅನಿಮಲ್‌ ಬಳಿಕ ಪ್ರತಿ ಸಿನಿಮಾಕ್ಕೆ 4.5 ಕೋಟಿ ರೂ ಸಂಭಾವನೆ; ವದಂತಿಗಳಿಗೆ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ

  • ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಇ – ಕಾಮರ್ಸ್ ತಾಣಗಳ ಮೂಲಕವೂ ಅಕ್ಕಿಯನ್ನು ಖರೀದಿ ಮಾಡಲು ಅವಕಾಶವಿದೆ.
  • ಬೆಂಗಳೂರಿನಲ್ಲಿ ಭಾರತೀಯ ಆಹಾರ ನಿಗಮದ ಮುಖ್ಯ ಗೋದಾಮು ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಸ್ಥಳಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ತಲುಪಿಸಲಾಗುತ್ತದೆ.
  • ಯಶವಂತಪುರ ಅಕ್ಕಪಕ್ಕದ ಬಡಾವಣೆಗಳಿಗೂ ಮೊದಲ ಹಂತದಲ್ಲಿ ಮನೆ ಮನೆಗಳಿಗೆ ವಿತರಿಸುವ ಚಟುವಟಿಕೆಯು ಶುರುವಾಗಲಿದೆ
  • ನಂತರದ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು, ಗ್ರಾಮ ಮಟ್ಟದಲ್ಲೂ ಸಹಕಾರ ಸಂಘಗಳ ಮೂಲಕ ಭಾರತ್‌ ಬ್ರಾಂಡ್‌ ಅಕ್ಕಿ ಮಾರಾಟಕ್ಕೆ ವ್ಯವಸ್ಥೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ