ಕರ್ನಾಟಕ ಬಜೆಟ್ 2024: ಬಜೆಟ್‌ನಲ್ಲಿ ಬಸವಣ್ಣ ಚಿಂತನೆ, ಯೋಜನೆಗೆ ಬಲ, ಬಾಗೇವಾಡಿಯಲ್ಲಿ ಅಭಿವೃದ್ದಿ ಪ್ರಾಧಿಕಾರ ರಚನೆ
Feb 16, 2024 01:24 PM IST
ಬಸವಣ್ಣನವರ ಯೋಜನೆಗಳಿಗೆ ಸಿದ್ದರಾಮಯ್ಯ ಹೆಚ್ಚಿನ ಒತ್ತು ನೀಡಿದ್ದಾರೆ.
- ಬಸವಣ್ಣನವರ ಆಶಯದಂತೆಯೇ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ಪದೇ ಪದೇ ನೆನಪಿಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ನಲ್ಲಿ ಬಸವಣ್ಣರ ಯೋಜನೆಗಳಿಗೆ ಬಲ ತುಂಬಿದ್ದಾರೆ.
ಬೆಂಗಳೂರು: ಕರ್ನಾಟಕದ ವಚನ ಕ್ರಾಂತಿಯೊಂದಿಗೆ ಸಾಮಾಜಿಕ ಕ್ರಾಂತಿಯನ್ನೂ ಹುಟ್ಟು ಹಾಕಿದ ಬಸವಣ್ಣನ ವಿಚಾರ ಹಾಗೂ ಯೋಜನೆಗಳಿಗೆ ಕರ್ನಾಟಕ ಬಜೆಟ್ 2024 ಮತ್ತಷ್ಟು ಬಲ ತುಂಬುವ ಕೆಲಸವನ್ನು ಮಾಡಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರು. ಎಲ್ಲಾ ಸರ್ಕಾರ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಕಡ್ಡಾಯಗೊಳಿಸಲಾಗಿದೆ. ಈಗ ಇನ್ನಷ್ಟು ನಿಗದಿತ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
ತಮ್ಮ ಸರ್ಕಾರ ಬಸವಣ್ಣನ ಚಿಂತನೆಗಳ ಮೇಲೆಯೇ ನಡೆಯುತ್ತಿದೆ ಎನ್ನುವುದನ್ನು ಸಿದ್ದರಾಮಯ್ಯ ಹೇಳುತ್ತಲೇ ಬರುತ್ತಿದ್ಧಾರೆ. ಮೊದಲ ಬಾರಿ ಸಿಎಂ ಆದಾಗ ಬಸವಜಯಂತಿ ದಿನವೇ ಪ್ರಮಾಣ ವಚನ ಸ್ವೀಕರಿಸಿದ್ದರು. ಆನಂತರ ಬಸವಣ್ಣನ ವಿಚಾರವನ್ನು ಹೇಳುತ್ತಲೇ ಬಂದಿದ್ದಾರೆ.
ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿ ಬಸವಣ್ಣನವರ ಜನ್ಮಭೂಮಿ ಹಾಗೂ ಕಾಯಕ ಭೂಮಿಗೆ ಒತ್ತು ನೀಡಿದ್ದಾರೆ.
ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಸರ್ವ ಧರ್ಮ ಸಂಸತ್ತನ್ನು ಬಸವ ಜಯಂತಿಯಂದು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಇವರು ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕ - ದಾಸೋಹದ ತತ್ವವನ್ನು ಪ್ರಸಾರ ಮಾಡಿದರು. ಈ ಹಿನ್ನೆಲೆಯಲ್ಲಿ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಪ್ರಕಟಿಸಿದಾರೆ.
12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಬೇಧ ಹಾಗೂ ವರ್ಣಬೇಧ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಪ್ರಜಾಪ್ರಭುತ್ವಕ್ಕೆ ಅನುಭವ ಮಂಟಪ ಸ್ಥಾಪನೆ ಮೂಲಕ ಬುನಾದಿಯನ್ನು ಶ್ರೀ ಬಸವೇಶ್ವರರು ಹಾಕಿರುವುದು ಕನ್ನಡಿಗರು ಮತ್ತು ಭಾರತೀಯರ ಹೆಮ್ಮೆಯಾಗಿದೆ. ಇಂತಹ ಅಪೂರ್ವ ವ್ಯಕ್ತಿತ್ವದ ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರದಲ್ಲಿ ವಿಶ್ವಗುರು ಬಸವಣ್ಣ - ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲಾಗುವುದು ಎಂದು ತಿಳಿಸಿದರು.
ತಮ್ಮ ಭಾಷಣದಲ್ಲಿ ಬಸವಣ್ಣನವರ ವಚನವಾದ
ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
- ಸಾಂಸ್ಕೃತಿಕ ನಾಯಕ ಬಸವಣ್ಣ ಕೂಡ ಉಲ್ಲೇಖಿಸಿದರು ಸಿದ್ದರಾಮಯ್ಯ.