Karnataka Budget 2024: ಗೃಹಲಕ್ಷ್ಮಿಗೆ ಭಾರೀ ಸ್ಪಂದನೆ, 11 ಸಾವಿರ ಕೋಟಿ ಬಿಡುಗಡೆ; ಪ್ರಸಕ್ತ ಸಾಲಲ್ಲಿ 26 ಸಾವಿರ ಕೋಟಿ ವೆಚ್ಚ ನಿರೀಕ್ಷೆ
Feb 14, 2024 08:30 AM IST
ಬಜೆಟ್‌ನಲ್ಲಿ ಗೃಹ ಲಕ್ಷ್ಮಿ ಖರ್ಚಿನ ಗಾತ್ರವೂ ಏರಿಕೆಯಾಗುವ ನಿರೀಕ್ಷೆಯಿದೆ.
- Gruhalakshmi ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಆರಂಭಿಸಿದ ಗೃಹಲಕ್ಷ್ಮಿ ಯೋಜನೆಗೂ ಕರ್ನಾಟಕದಲ್ಲೂ ಭಾರೀ ಬೇಡಿಕೆ. ಈ ಬಾರಿ ಹೆಚ್ಚಿನ ವೆಚ್ಚದ ಅಂದಾಜನ್ನು ಮಾಡಲಾಗಿದೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರದೇಶ ಕಾಂಗ್ರೆಸ್ ಈ ಭರವಸೆಯನ್ನು ನೀಡಿತ್ತು. ಈ ಯೋಜನೆಗೆ ಇದುವರೆಗೂ 1.17 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಯೋಜನೆಗೆ ಮಹಿಳೆಯರ ಪ್ರತಿಕ್ರಿಯೆ ಉತ್ತಮವಾಗಿದ್ದು ಪ್ರತಿ ತಿಂಗಳೂ ನೋಂದಣಿಹೆಚ್ಚುತ್ತಲೇ ಇದೆ. ಮುಂಬರುವ ದಿನಗಳಲ್ಲಿ 1.25-1.30 ಕೋಟಿವರೆಗೂ ನೋಂದಣಿಯಾಗಬಹುದು ಎಂದು ಇಲಾಖೆ ಅಂದಾಜು ಮಾಡಿದೆ.
ಒಂದು ವೇಳೆ ನೋಂದಣಿ ಹೆಚ್ಚಾದರೆ ಸರ್ಕಾರದ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ. ಈ ಪ್ರಮಾಣದ ನೋಂದಣಿಯನ್ನು ನೋಡಿದರೆ ಇದೊಂದೇ ಯೋಜನೆಗೆ ಸರ್ಕಾರದ ಮೇಲೆ 26,000 ಕೋಟಿ ರೂಪಾಯಿಗಳ ಹೊರೆ ಬೀಳಲಿದೆ ಎಂದು ಅಂದಾಜು ಮಾಡಲಾಗಿದೆ.
ಏರಿದ ಗೃಹಲಕ್ಷ್ಮಿ ಗಾತ್ರ
2023-24 ನೇ ಸಾಲಿನಲ್ಲಿ ಈ ಯೋಜನೆಗೆ 17,500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಜನವರಿ ಮಾಸಾಂತ್ಯಕ್ಕೆ 11,037 ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ.
150 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಯಾವುದೇ ಯೋಜನೆಯನ್ನು ಶೇ. ನೂರರಷ್ಟು ಸಮರ್ಪಕವಾಗಿ ಜಾರಿಗೊಳಿಸಲು ಅಸಾಧ್ಯ. ಸಣ್ಣಪುಟ್ಟ ಲೋಪದೋಷಗಳು ಇಣುಕುತ್ತಲೇ ಇರುತ್ತವೆ.
ಈ ಯೋಜನೆ ದುರುಪಯೋಗವಾಗುತ್ತಿಲ್ಲ ಎಂದು ಹೇಳಲು ಬರುವುದಿಲ್ಲ. ಅರ್ಹರೂ ಈ ಯೋಜನೆಯ ಫಲಾನುಭವಿಗಳಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಂದು ಮಹಿಳೆಯರಿಗೆ ನೀಡುತ್ತಿರುವ ಈ ಸಹಾಯ ನಿರರ್ಥಕ ಎಂದು ಹೇಳುವಂತಿಲ್ಲ.
ಉದ್ಯೋಗಸ್ಥ ಮಹಿಳೆಯರು
ರಾಷ್ಟ್ರ ಮಟ್ಟದಲ್ಲಿ ನಡೆದ ಸಮೀಕ್ಷೆಯೊಂದು ದೇಶದ ಶೇ.57.3 ರಷ್ಟು ಪುರುಷರು ಉದ್ಯೋಗದಲ್ಲಿ ನಿರತರಾಗಿದ್ದರೆ ಶೇ.18.04ರಷ್ಟು ಮಹಿಳೆಯರು ಉದ್ಯೋಗಿಗಳಾಗಿದ್ದಾರೆ. ಉಳಿದಶೇ.81.2ರಷ್ಟು ಮಹಿಳೆಯರು ಗೃಹಕೃತ್ಯಗಳಲ್ಲಿ ನಿರತರಾಗಿದ್ದು, ಈ ಕೆಲಸಕ್ಕೆ ಇವರು ಯಾವುದೇ ವೇತನ ಪಡೆಯುತ್ತಿಲ್ಲ. ಈ ಮೂಲಕವಾದರೂ ಅವರ ಕೆಲಸಕ್ಕೆ ಗೌರವ ಸಂದಾಯವಾಗುತ್ತಿದೆ ಎಂದು ಮಹಿಳಾ ಪರ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.
ಮಹಿಳೆಯರಿಗೆ ನೀಡುವ ಈ ಹಣ ಸಾಸುವೆ ಡಬ್ಬಿ ಸೇರುವುದಿಲ್ಲ. ಆಯಾ ತಿಂಗಳ ಹಣ ವೆಚ್ಚ ವಾಗುತ್ತಲೇ ಇರುತ್ತದೆ. ಶಾಲಾ ಶುಲ್ಕ, ದಿನಸಿ, ಆಸ್ಪತ್ರೆ ವೆಚ್ಚ ಹೀಗೆ ಯಾವುದೋ ಒಂದು ರೂಪದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸೇರುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಾಭ ಇಲ್ಲದಿಲ್ಲ. ಇದಕ್ಕೂ ಮುಖ್ಯವಾಗಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ ಎನ್ನುವುದು ಬಹು ಮುಖ್ಯವಾದ ಅಂಶ.
ಆಗಸ್ಟ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಿದ್ದರು. ಜಾರಿಗೊಂಡ ನಂತರ ಶೇ.88ರಷ್ಟು ಗೃಹಿಣಿಯರು ಮೊದಲ ತಿಂಗಳ ಹಣವನ್ನು ಪಡೆದುಕೊಂಡಿದ್ದರು.
ಆರಂಭದಲ್ಲಿ ಎದುರಾಗಿದ್ದ ತೊಡಕು
ಆರಂಭದಲ್ಲಿ ಈ ಯೋಜನೆಗೆ ಕೆಲವು ತೊಡಕುಗಳು ಎದುರಾಗಿದ್ದವು. ಹೆಸರು ನೊಂದಾಯಿಸಿದ್ದರೂ ಹಣ ಬಂದಿಲ್ಲ ಎಂದು ಅನೇಕ ಜಿಲ್ಲೆಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದೂ ಉಂಟು. ಆಧಾರ್ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಹೆಸರು ಹೊಂದಾಣಿಕೆ ಆಗುತ್ತಿಲ್ಲ. ಆಧಾರ್ ಲಿಂಕ್ ವಿಫಲವಾಗಿರುತ್ತದೆ ಇಲ್ಲವೇ ತಪ್ಪು ವಿಳಾಸ ನೀಡಿರುತ್ತಾರೆ. ಆದ್ದರಿಂದ ಹಣ ಬಿಡುಗಡೆ ವಿಳಂಬವಾಗಿರುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದರು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳದಿರುವುದು, ಒಂದಕ್ಕಿಂತ ಹೆಚ್ಚು ಖಾತೆ ಹೊಂದಿ ಪರಿಶೀಲನೆ ಮಾಡದಿರುವುದು ಆಧಾರ್ ಜೋಡಣೆ ಆಗಿರುವುದೊಂದು ಖಾತೆ, ನೋಂದಣಿ ವೇಳೆ ನೀಡಿರುವುದು ಬೇರೊಂದು ಖಾತೆ, ಬ್ಯಾಂಕ್ ಖಾತೆಗೆ ಇ–ಕೆವೈಸಿ ಮಾಡಿಸದಿರುವುದು, ಪಡಿತರ ಚೀಟಿಯಲ್ಲಿ ಯಜಮಾನಿಯರ ಹೆಸರು ಎಲ್ಲರಿಗಿಂತ ಮೊದಲು ಇಲ್ಲದಿರುವುದು, ನೋಂದಣಿ ವೇಳೆ ನೀಡಿದ ಹೆಸರಿಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರಿಗೂ ಹೊಂದಾಣಿಕೆ ಆಗದಿರುವುದು-ಈ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ರೂ. 2 ಸಾವಿರದಿಂದ ಯಜಮಾನಿಯರು ವಂಚಿತರಾಗಿದ್ದರು.
ಆದರೆ ಈಗ ಅಂತಹ ದೂರುಗಳು ಕೇಳಿ ಬರುತ್ತಿಲ್ಲ. ಸರ್ಕಾರದ ಐದು ಗ್ಯಾರಂಟಿಗಳಿಂದ 2024-25 ನೇ ಸಾಲಿನಿಂದ ಅಂದಾಜು 60 ಸಾವಿರ ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಅಂದರೆ ಈ ವರ್ಷದ ಬಜೆಟ್ ನ ಆರನೇ ಒಂದು ಭಾಗದಷ್ಟು ಮೊತ್ತ ಉಚಿತ ಭಾಗ್ಯಗಳಿಗೆ ತಗುಲುತ್ತದೆ. ಪ್ರಸಕ್ತ ಸಾಲಿನ ಬಜೆಟ್ 3.80ಲಕ್ಷ ಕೋಟಿಗಳಷ್ಟಿದ್ದು, 2 ಲಕ್ಷ ಕೋಟಿ ರೂಪಾಯಿ ವರೆಗೆ ಸಂಬಳ, ಪಿಂಚಣಿ ಮತ್ತಿತರ ವೆಚ್ಚಗಳಿಗೆ ಹೋಗುತ್ತದೆ. ಉಳಿದ ಒಂದು ಲಕ್ಷ ಕೋಟಿ ರೂಪಾಯಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ ಎನ್ನುವುದು ತಜ್ಞರ ನುಡಿ.
(ವರದಿ: ಎಚ್. ಮಾರುತಿ, ಬೆಂಗಳೂರು)