logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ 2024:ಯಾವುದೇ ಹೊಸ ವಿಶ್ವವಿದ್ಯಾನಿಲಯ ಮುಚ್ಚಲ್ಲ, ಬೆಳಗಾವಿ ವಿಟಿಯುಗೆ 500 ಕೋಟಿ ರೂ. ಬಂಪರ್‌

ಕರ್ನಾಟಕ ಬಜೆಟ್‌ 2024:ಯಾವುದೇ ಹೊಸ ವಿಶ್ವವಿದ್ಯಾನಿಲಯ ಮುಚ್ಚಲ್ಲ, ಬೆಳಗಾವಿ ವಿಟಿಯುಗೆ 500 ಕೋಟಿ ರೂ. ಬಂಪರ್‌

Umesha Bhatta P H HT Kannada

Feb 16, 2024 05:09 PM IST

google News

ಬಜೆಟ್‌ ಕುರಿತು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿದರು.

    • Higer Education ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಹೊಸ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಪ್ರಸ್ತಾವವಿಲ್ಲ. ಬದಲಿಗೆ ಘಟಕ ಕಾಲೇಜು ಸ್ಥಾಪನೆಗೆ ಒತ್ತು ನೀಡುವ ಬಗ್ಗೆ ಕರ್ನಾಟಕ ಬಜೆಟ್‌ 2024ರಲ್ಲಿ ತಿಳಿಸಲಾಗಿದೆ.
ಬಜೆಟ್‌ ಕುರಿತು  ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿದರು.
ಬಜೆಟ್‌ ಕುರಿತು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿದರು.

ಬೆಂಗಳೂರು: ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಡೆ ಕ್ಷಣದಲ್ಲಿ ರೂಪಿಸಿದ್ದ ಕೊಪ್ಪಳ. ಕೊಡಗು, ಹಾಸನ, ಬಾಗಲಕೋಟೆ, ಚಾಮರಾಜನಗರ ಸಹಿತ ಹೊಸ ವಿಶ್ವವಿದ್ಯಾನಿಲಯಗಳು ಸ್ಥಗಿತಗೊಳ್ಳುವುದಿಲ್ಲ. ಏಕೆಂದರೆ ಕರ್ನಾಟಕ ಬಜೆಟ್‌ 2024 ನಲ್ಲಿ ಇಂತಹ ಯಾವುದೇ ಪ್ರಸ್ತಾವನೆಗಳೂ ಇಲ್ಲ. ಈಗಾಗಲೇ ಹೊಸ ಶಿಕ್ಷಣ ನೀತಿ ಬದಲಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪ್ರಯತ್ನಗಳು ನಡೆದಿರುವಾಗ ಹೊಸ ವಿಶ್ವವಿದ್ಯಾನಿಲಯಗಳೂ ರದ್ದಾಗಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ,ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಮೂಲಕ ವಿವಿ ಬಲಪಡಿಸುವ ಸೂಚನೆಯನ್ನು ಸರ್ಕಾರ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಭಾರೀ ಕೊಡುಗೆಯೇನೂ ಸಿಕ್ಕಿಲ್ಲ. ಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು (UVCE) 500 ಕೋಟಿ ರೂ. ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಅನುದಾನ ಒದಗಿಸಲಾಗುವುದು. ಜೊತೆಗೆ ಸಿ.ಎಸ್.ಆರ್.‌ ನಿಧಿ ಮತ್ತು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ನೀಡುವ ದೇಣಿಗೆ ಮೂಲಕ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿರುವುದು ವಿಶೇಷ. ಇದರಿಂದ ಬೆಳಗಾವಿ ವಿಟಿಯು ಇನ್ನಷ್ಟು ಪ್ರಗತಿ ಕಾಣಲು ನೆರವಾಗಲಿದೆ.

ಶಿಕ್ಷಣ ನೀತಿ

ಕಳೆದ ಆಯವ್ಯಯದಲ್ಲಿ ಘೋಷಿಸಿರುವಂತೆ, ರಾಜ್ಯದ ಅಸ್ಮಿತೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ, ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡನ್ನು ಸಿದ್ಧಪಡಿಸಲು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಲಾಗಿದೆ. ಆಯೋಗವು ಶೀಘ್ರದಲ್ಲಿಯೇ ವರದಿಯನ್ನು ಸಲ್ಲಿಸಲಿದ್ದು, ಅದರಂತೆ ಪರಿಶೀಲಿಸಿ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪಾಲಿಟೆಕ್ನಿಕ್‌ಗೆ ಬಲ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಆದ್ಯತೆ ನೀಡುತ್ತಾ ಬಂದಿದೆ. ಹಿಂದಿನ ಅಧಿಕಾರಾವಧಿಯಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುವ ಮಹತ್ತರ ತೀರ್ಮಾನವನ್ನು ಕೈಗೊಂಡಿತ್ತು. ಇದೀಗ ಇನ್ನೊಂದು ಹೆಜ್ಜೆ ಮುಂದಿಡುತ್ತಾ ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಗಳ ಉನ್ನತೀಕರಣಕ್ಕಾಗಿ ಒಟ್ಟು 30 ಕೋಟಿ ರೂ. ಅನುದಾನ ಒದಗಿಸಲಾಗುವುದು. 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳಿಗೆ 250 ಕೋಟಿ ರೂ. ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಕಾಮಗಾರಿಗಳಿಗೆ 120 ಕೋಟಿ ರೂ. ಅನುದಾನ ಒದಗಿಸಲಾಗುವುದು. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಅಗತ್ಯತೆಗನುಗುಣವಾಗಿ ತುಂಬಲಾಗುವುದು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಪಸ್‌ ನಿಧಿ

ಹಳೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಲು ಬೇರು-ಚಿಗುರು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ಪಡೆದುಕೊಳ್ಳಲು ಅಗತ್ಯವಾದ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಲು 10 ಕೋಟಿ ರೂ.ಗಳ ಕಾರ್ಪಸ್‌ ನಿಧಿ ಸ್ಥಾಪಿಸಲಾಗುವುದು. ವಿಷಯ ತಜ್ಞರು, ನಾಗರಿಕ ಸೇವಾ ಅಧಿಕಾರಿಗಳು ಮತ್ತು ಉದ್ಯಮಿಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರೇರಣಾ ಎಂಬ ಕಾರ್ಯಕ್ರಮದಡಿ ಮಾರ್ಗದರ್ಶನವನ್ನು (Mentorship) ನೀಡಲಾಗುವುದು ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ