logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಿನಲ್ಲಿ 25 ಅಡಿ ಭುವನೇಶ್ವರಿ ಕಂಚಿನ ಪ್ರತಿಮೆ; ಕರ್ನಾಟಕ ಸುವರ್ಣ ಮಹೋತ್ಸವ ನೆನಪಿಗೆ ನಿರ್ಮಾಣ

Bengaluru News: ಬೆಂಗಳೂರಿನಲ್ಲಿ 25 ಅಡಿ ಭುವನೇಶ್ವರಿ ಕಂಚಿನ ಪ್ರತಿಮೆ; ಕರ್ನಾಟಕ ಸುವರ್ಣ ಮಹೋತ್ಸವ ನೆನಪಿಗೆ ನಿರ್ಮಾಣ

HT Kannada Desk HT Kannada

Sep 08, 2023 08:00 AM IST

google News

ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ನಿರ್ಮಿಸಲು ಅನುಮತಿ ನೀಡಲಾಗಿದೆ.

    • Bhuvaneshwari Statue in Bengaluru ಕರ್ನಾಟಕದ ಸುವರ್ಣ ಮಹೋತ್ಸವದ ನೆನಪಿಗೆ ಭುವನೇಶ್ವರಿ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಲು ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ನಿರ್ಮಿಸಲು ಅನುಮತಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ನಿರ್ಮಿಸಲು ಅನುಮತಿ ನೀಡಲಾಗಿದೆ.

ಬೆಂಗಳೂರು:ಇನ್ನು ಕೆಲವೇ ದಿನಗಳಲ್ಲಿ ನಾಡದೇವಿ ಭುವನೇಶ್ವರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೂ ನಿತ್ಯ ಅರ್ಚನೆ ನೆರವೇರಲಿದೆ.

ಕರ್ನಾಟಕ ಸುವರ್ಣ ಮಹೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸಿದೆ.

ಕನ್ನಡಾಂಬೆಯ ಪ್ರತಿಮೆ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನ ಯೋಜನೆ ರೂಪಿಸಿದ್ದು, ಹದಿನಾಲ್ಲು ತಿಂಗಳಲ್ಲಿ ಪ್ರತಿಮೆಗೆ ಅಂತಿಮ ಸ್ಪರ್ಶ ದೊರಕಲಿದೆ.

ಭುವನೇಶ್ವರಿ ತಾಯಿಯ ಕಂಚಿನ ಪ್ರತಿಮೆ ಸ್ಥಾಪಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಈಗಾಗಲೇ ತಿಂಗಳಲ್ಲಿ ಎರಡು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರತಿ ನಿರ್ಮಾಣ ಸಂಬಂಧ ತುರ್ತು ಕ್ರಮವಹಿಸುವಂತೆ ಸೂಚಿಸಿದ್ದಾರೆ.

ಎಲ್ಲಿ ಬರಲಿದೆ ಪ್ರತಿಮೆ

ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ಆವರಣದಲ್ಲಿ ಸುಮಾರು 25 ಅಡಿ ಎತ್ತರದ ಕನ್ನಡಾಂಬೆಯ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಆ ಸ್ಥಳದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ನಿಟ್ಟಿನಲ್ಲಿ ಉದ್ಯಾನವನ ನಿರ್ಮಾಣ ಹಾಗೂ ವಿಗ್ರಹದೊಂದಿಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ, ಗತಕಾಲದ ಹೆಮ್ಮೆಯ ವಿಷಯಗಳನ್ನು ಪ್ರತಿಬಿಂಬಿಸುವ ಚಿತ್ರಣ ಇಲ್ಲಿರಲಿದ್ದು, ಅವು ಜನರಿಗೆ ಮಾಹಿತಿ ನೀಡಲಿವೆ.

ಶಿಲ್ಪಿಗಳ ಜತೆ ಸಭೆ

ಈ ಸಂಬಂಧ ವಿಕಾಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿಗಳ ಜತೆ ಸಚಿವರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಒಂದು ವರ್ಷದಲ್ಲಿ ಪ್ರತಿಮೆ ಕಾರ್ಯ ಪೂರ್ಣಗೊಂಡು ಮುಂದಿನ 2024ರ ನವೆಂಬರ್ 1ಕ್ಕೆ ಅನಾವರಣಗೊಳ್ಳಬೇಕು. ಮೊದಲಿಗೆ ಎರಡು ಅಡಿಯ ಕನ್ನಡಾಂಬೆಯ ಮಾದರಿ ಪ್ರತಿಮೆಯನ್ನು ನಿರ್ಮಿಸಿ ಕೊಡಬೇಕು. ನಂತರ ತ್ರಿಡಿ ಮಾದರಿಯ ಕನ್ನಡಾಂಬೆಯ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ತುರ್ತು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮಶೇಖರ್‌ ಚಿತ್ರ

ಕಲಾವಿದ ಕೆ.ಸೋಮಶೇಖರ್ ಸಿದ್ಧಪಡಿಸಿರುವ ನಾಡದೇವಿಯ ಚಿತ್ರವನ್ನು ಅಧಿಕೃತಗೊಳಿಸುವಂತೆ ಲಲಿತಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದೇ ಮಾದರಿಯ ನಾಡದೇವಿಯ ಸುಮಾರು 25 ಅಡಿಯ ಪ್ರತಿಮೆ ತಲೆ ಎತ್ತಲಿದೆ.

ಸಿಎಂರಿಂದ ಚಾಲನೆ

ಕಂಚಿನ ಬೃಹತ್ ವಿಗ್ರಹ ನಿರ್ಮಾಣ ಕಾಮಗಾರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ನವೆಂಬರ್ 1ಕ್ಕೆ ಪ್ರತಿಮೆ ಅನಾವರಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.

( ವರದಿ: ಎಚ್‌.ಮಾರುತಿ,ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ