IAS Postings: ಉಮಾ ಮಹಾದೇವನ್ ಅಭಿವೃದ್ದಿ ಆಯುಕ್ತೆ, ಡಿಎಸ್ ರಮೇಶ್ ಮೈಸೂರು ಪ್ರಾದೇಶಿಕ ಆಯುಕ್ತ
Aug 01, 2024 07:25 AM IST
ಉಮಾಮಹದೇವನ್ ಹಾಗೂ ಡಿಎಸ್ ರಮೇಶ್ ಅವರಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ.
- IAS Transfers ಕರ್ನಾಟಕ ಸರ್ಕಾರವು ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಹಲವು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಲವರಿಗೆ ಹೊಸ ಹುದ್ದೆಮ ಇನ್ನು ಕೆಲ ಹಿರಿಯ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹುದ್ದೆಗಳನ್ನು ನೀಡಿದೆ. ಬುಧವಾರದಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಲವು ಅಧಿಕಾರಿಗಳು ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಖಾಲಿ ಇರುವ ಹುದ್ದೆಗಳ ಜತೆಗೆ ಪ್ರಮುಖ ಇಲಾಖೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮುಖ್ಯವಾಗಿ ಅಭಿವೃದ್ದಿ ಆಯುಕ್ತರ ಹುದ್ದೆ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಐದು ವರ್ಷಗಳಿಂದ ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿ ಉಮಾ ಮಹಾದೇವನ್ ಅವರನ್ನು ಅಭಿವೃದ್ಧಿ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇದರೊಟ್ಟಿಗೆ ಅಲ್ಲದೇ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ (ಹೆಚ್ಚುವರಿ ಪ್ರಭಾರ) ಜವಾಬ್ದಾರಿಯನ್ನು ಉಮಾ ಮಹಾದೇವನ್ ಅವರಿಗೆ ವಹಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಗೆ, ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ವಹಿಸಲಾಗಿದೆ.
ಪಂಚಾಯತ್ ರಾಜ್ ಆಯುಕ್ತೆ ಅರುಂಧತಿ ಚಂದ್ರಶೇಖರ್ ಅವರಿಗೆ ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕಿಯ (ಹೆಚ್ಚುವರಿ ಪ್ರಭಾರ) ಹೊಣೆ ನೀಡಲಾಗಿದೆ.
ಅದೇ ರೀತಿ ಮೈಸೂರು ಪ್ರಾದೇಶಿಕ ಆಯುಕ್ತರಾಗಿದ್ದ ಡಾ.ಜಿ.ಸಿ.ಪ್ರಕಾಶ್ ಅವರು ನಿವೃತ್ತರಾಗಿದ್ದರಿಂದ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಹಾಗೂ ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್‌ಗೆ ಮೈಸೂರು ಪ್ರಾದೇಶಿಕ ಆಯುಕ್ತರ ಹೆಚ್ಚುವರಿ ಪ್ರಭಾರ ವಹಿಸಿ ಆದೇಶ ಹೊರಡಿಸಲಾಗಿದೆ.
ಈ ನಡುವೆ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ರಜನೀಶ್ ಗೋಯೆಲ್ ಅವರು ಶಾಲಿನಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಶಾಲಿನಿ ಅವರು ಮುಂದಿನ ಎರಡೂವರೆ ವರ್ಷ ಅಧಿಕಾರದಲ್ಲಿ ಇರುವರು.