Analysis: ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ
ಕನ್ನಡ ಸುದ್ದಿ  /  ಕರ್ನಾಟಕ  /  Analysis: ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ

Analysis: ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ

ಮುಡಾ, ವಾಲ್ಮೀಕಿ ಹಗರಣ: ದಶಕಗಳ ಕಾಲ ರಾಜಕೀಯ ಪಟ್ಟುಗಳನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ಅವರು ಇದೀಗ ಸೋತಿದ್ದಾದರೂ ಏಕೆ? ಈ ಎಲ್ಲ ಬೆಳವಣಿಗೆಗಳ ಹಿಂದೆ ಯಾರಿದ್ದಾರೆ ಎನ್ನುವುದು ಅವರ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ಚರ್ಚೆಯ ವಿಷಯವೂ ಆಗಿದೆ. (ವಿಶ್ಲೇಷಣೆ: ಮಾರುತಿ ಎಚ್.)

ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ
ಸಿಎಂ ಸಿದ್ದರಾಮಯ್ಯಗೆ ಸಂಧ್ಯಾಕಾಲದಲ್ಲಿ ಹಗರಣಗಳ ಮುಜುಗರ; ಕ್ಲೀನ್ ಇಮೇಜ್‌ಗೆ ಮುಡಾ, ವಾಲ್ಮೀಕಿ ಹಗರಣಗಳ ಧಕ್ಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಇಂತಹ ಮುಜುಗರ ಅನುಭವಿಸುತ್ತೇನೆ ಎಂದು ಊಹಿಸಿರಲಿಕ್ಕಿಲ್ಲ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಹೆಚ್ಚೆಂದರೆ ಒಂದು ವರ್ಷ ಮಾತ್ರ ಬಾಕಿ ಇರುವಾಗ ಕೆಲವು ನಿವೇಶನಗಳನ್ನು ಪಡೆದುಕೊಂಡಿರುವ ಕೆಸರು ಮೈಗಂಟಿಕೊಂಡಿದೆ. ತಮ್ಮ 4 ದಶಕಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಇಂತಹ ಮುಜುಗರ ಅನುಭವಿಸುತ್ತಿದ್ದಾರೆ.

ಮೈಸೂರಿನ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣಗಳಲ್ಲಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾಪವಾಗುತ್ತಿದೆ. ಅದರಲ್ಲೂ ಮುಡಾ ಹಗರಣದಲ್ಲಿ ಅವರ ಪತ್ನಿಯೇ ಭಾಗಿಯಾಗಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳ ಭ್ರಷ್ಟಾಚಾರ ಕಾರಣ ಎಂದು ಅವರತ್ತ ಬೊಟ್ಟು ತೋರಿಸುತ್ತಿದ್ದರೂ ನಾಲ್ಕು ಬೆರಳುಗಳು ಸಿದ್ದರಾಮಯ್ಯ ಅವರತ್ತಲೇ ತಿರುಗಿವೆ. ಮಿಸ್ಟರ್ ಕ್ಲೀನ್‌ ಎಂಬ ಅವರ ನಾಲ್ಕು ದಶಕಗಳ ಶುಭ್ರ ಖಾದಿ ವಸ್ತ್ರಕ್ಕೆ ಇದೀಗ ಹಗರಣದ ಕೆಸರು ಮೆತ್ತಿಕೊಂಡಿದೆ.

ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಜಾತ್ಯತೀತವಾದ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಒಂದು ಇಮೇಜ್‌ ಬೆಳೆಸಿಕೊಂಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಅಹಿಂದ ಮತ್ತು ಮೌಲ್ಯಗಳ ಪಾಲನೆಗೆ ಬೀದರ್‌ನಿಂದ ಚಾಮರಾಜನಗರದವರೆಗೆ ಹೆಸರಾಗಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳು ನೇರವಾಗಿ ಅವರ ಕುಟುಂಬವನ್ನೇ ಎಳೆದು ತಂದಿವೆ. ಇದೇ ಮೊದಲ ಬಾರಿಗೆ ತಮ್ಮ ಕುಟುಂಬವನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿ ಅವರಿಗೆ ಎದುರಾಗಿದೆ. ಇದರಿಂದ ಅವರು ಮುಜುಗರಕ್ಕೀಡಾಗಿರುವುದು ಎದ್ದು ಕಾಣುತ್ತಿದೆ.

ಕುಟುಂಬ ಸಮರ್ಥಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

ಪ್ರತಿದಿನವೂ ಸಿದ್ದರಾಮಯ್ಯ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವುದನ್ನು ನೋಡಿದರೆ ಆರೋಪಗಳ ಗಾಂಭೀರ್ಯ ಅರ್ಥವಾದೀತು. ಇತ್ತೀಚೆಗಷ್ಟೇ ಮುಗಿದ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳೊಂದಿಗೆ ನೇರವಾಗಿ ಘರ್ಷಣೆಗಿಳಿದ ಪ್ರಸಂಗವೂ ನಡೆಯಿತು. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಕ್ಕೆ ವಿಧಾನ ಮಂಡಲ ಅಧಿವೇಶನಕ್ಕೆ ಬದಲಾಗಿ ಸುದ್ದಿಗೋಷ್ಠಿಯನ್ನು ಅವಲಂಬಿಸಿ ಸುದ್ದಿ ರೂಪದಲ್ಲಿ ಪುಟಗಟ್ಟಲೆ ಜಾಹೀರಾತು ನೀಡಬೇಕಾಗಿ ಬಂತು.

ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸಮರ್ಥಿಸಿಕೊಳ್ಳಲು ನಾಲ್ಕು ದಶಕಗಳ ಅನುಭವವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಭಾಸವಾಗುತ್ತದೆ. ಮೈಸೂರಿನ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರ ಹೆಸರು ನೇರವಾಗಿ ಕೇಳಿ ಬಂದಿದೆ. ಈ ಮೊದಲು ಎಂದಿಗೂ ಇವರ ಹೆಸರು ಬಹಿರಂಗಗೊಂಡಿರಲಿಲ್ಲ. ಈ ಎರಡೂ ಹಗರಣಗಳು ಸರ್ಕಾರ ಮತ್ತು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಘನತೆಗೆ ಕುಂದುಂಟು ಮಾಡಿರುವುದರಲ್ಲಿ ಸಂಶಯವಿಲ್ಲ.

ಈ ಹಗರಣಗಳಿಂದ ಮುಕ್ತರಾಗಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಗೆ ಅವಕಾಶವಿಲ್ಲದಂತೆ ಮಾಡುವಲ್ಲಿ ಯಶಸ್ವಿಯಾದರಾದರೂ ರಾಜ್ಯದ ಜನತೆ ಅನುಮಾನದಿಂದ ನೋಡುತ್ತಿರುವುದು ಸುಳ್ಳಲ್ಲ. ಹಾಗೆಂದು ವಿಪಕ್ಷಗಳು ಕೈಕಟ್ಟಿ ಕುಳಿತಿಲ್ಲ. ಹಗರಣಗಳನ್ನು ನಿಭಾಯಿಸುವಲ್ಲಿ ಸರ್ಕಾರ ಮತ್ತು ಪಕ್ಷ ಸೋತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಹುಬ್ಲೋಟ್ ವಾಚ್ ವಿವಾದದ ನೆನಪು

ಸಿದ್ದರಾಮಯ್ಯ ಆಪಾದನೆಗಳಿಗೆ ಗುರಿಯಾಗಿದ್ದು ಇದೇ ಮೊದಲಲ್ಲ. ಆದರೂ ಇಂತಹ ಗಂಭೀರ ಅಪಾದನೆ ಇದೇ ಮೊದಲು ಎನ್ನುವುದು ಅಷ್ಟೇ ಸತ್ಯ. 2016ರಲ್ಲಿ ದುಬಾರಿ ಬೆಲೆಯ ಹುಬ್ಲೋಟ್‌ ವಾಚ್‌ ಧರಿಸಿದಾಗ ಸಮಾಜವಾದಿಯ ಮುಖ ಕಳಚಿ ಬಿದ್ದಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಜರಿದಿದ್ದರು. ನಿರಂತರ ಟೀಕೆಗಳಿಗೆ ಗುರಿಯಾದಾಗ ಆ ಕೈಗಡಿಯಾರವನ್ನು ಸರಕಾರದ ಸುಪರ್ದಿಗೆ ಒಪ್ಪಿಸಿದ್ದರು.

ಸಿದ್ದರಾಮಯ್ಯ ಸೋತಿದ್ದಾದರೂ ಹೇಗೆ

ದಶಕಗಳ ಕಾಲ ರಾಜಕೀಯ ಪಟ್ಟುಗಳನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ಅವರು ಸೋತಿದ್ದಾದರೂ ಏಕೆ ಎನ್ನುವುದು ಅವರ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದೆ. ಅತ್ತ ಬಿಜೆಪಿ ಮತ್ತು ಜೆಡಿಎಸ್‌ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರುವರೆಗೆ ಹತ್ತು ದಿನಗಳ ಪಾದಯಾತ್ರೆ ಹಮ್ಮಿಕೊಂಡಿವೆ. ಸಿದ್ದರಾಮಯ್ಯ ತಮ್ಮ ಇಮೇಜ್ ಅನ್ನು ಮರಳಿ ಗಳಿಸಿಕೊಳ್ಳುವರೇ ಅಥವಾ ಅವರ ಘನತೆಗೆ ಕಪ್ಪು ಮಸಿ ಬಳಿಯುವಲ್ಲಿ ವಿಪಕ್ಷಗಳು ಮೇಲುಗೈ ಸಾಧಿಸಲಿವೆಯೇ ಎಂದು ಕಾದು ನೋಡಬೇಕಿದೆ.

Whats_app_banner