logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Puc Results: ಕರ್ನಾಟಕದಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

Karnataka Puc Results: ಕರ್ನಾಟಕದಲ್ಲಿ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

Umesha Bhatta P H HT Kannada

Mar 30, 2024 07:06 PM IST

google News

ಫಲಿತಾಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು

    • ಕರ್ನಾಟಕದಲ್ಲಿ ಕಳೆದ ತಿಂಗಳು ನಡೆಸಲಾಗಿದ್ದು ಪ್ರಥಮ ಪಿಯುಸಿ ಫಲಿತಾಂಶಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ(KSEAB) ಪ್ರಕಟಿಸಿದೆ. 
ಫಲಿತಾಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು
ಫಲಿತಾಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು:ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ(KSEAB) ಮಂಡಳಿ ಮೊದಲ ಬಾರಿಗೆ ಆಯಾ ಕಾಲೇಜುಗಳ ಮೂಲಕ ನಡೆಸಿದ್ದ ಪ್ರಥಮ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗಳು ಫೆಬ್ರವರಿ 2024ರಲ್ಲಿ ನಡೆದಿದ್ದವು. ಮೌಲ್ಯಮಾಪನಗಳು ನಡೆದು ಶನಿವಾರ ಆಯಾ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದ್ದು. ಬಹುತೇಕರು ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿ ತಿಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮೊದಲಿನಿಂದಲೂ ಬೋರ್ಡ್‌ನಿಂದಲೇ ನಡೆಸಿ ಫಲಿತಾಂಶವನ್ನು ನೀಡುತ್ತಾ ಬರಲಾಗುತ್ತಿದೆ. ಆದರೆ ಪ್ರಥಮ ಪಿಯುಸಿ ಪರೀಕ್ಷೆಗಳಲ್ಲೂ ಶಿಸ್ತು ತರಲೆಂದು ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ(KSEAB)ಯ ಸುಪರ್ದಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಿದ್ದರು. ಅವರಿಗೆ ಮಂಡಳಿ ತಯಾರಿಸಿದ ಪ್ರಶ್ನೆ ಪತ್ರಿಕೆಗಳನ್ನೇ ನೀಡಲಾಗಿತ್ತು. ಏಕ ರೂಪದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಎಲ್ಲಾ ವಿಷಯಗಳಿಗೆ ನೀಡಲಾಗಿತ್ತು. ಅದನ್ನಾಧರಿಸಿಯೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.

ಆಯಾ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆಯ ಉಸ್ತುವಾರಿಯಲ್ಲಿಯೇ ಕಾಲೇಜುಗಳು ಪರೀಕ್ಷೆ ನಡೆಸಿದ್ದವು. ಮೌಲ್ಯಮಾಪನವನ್ನು ಕಾಲೇಜುಗಳಲ್ಲಿ ನಡೆಸಿ ಆಯಾ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಫಲಿತಾಂಶ ನೀಡಲಾಗಿತ್ತು. ಅವರ ಅನುಮೋದನೆ ಮೇರೆಗೆ ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಯಿತು ಎಂದು ಮೈಸೂರಿನ ವಿಜಯವಿಠ್ಠಲ ಕಾಲೇಜು ಪ್ರಾಂಶುಪಾಲ ಎಚ್‌.ಸತ್ಯಪ್ರಸಾದ್‌ ತಿಳಿಸಿದರು.

ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಯಿತು. ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸಿ ವಿವರಗಳನ್ನು ಪಡೆದುಕೊಂಡರು. ಫಲಿತಾಂಶ ಆಧರಿಸಿ ದ್ವಿತೀಯ ಪಿಯುಸಿಗೆ ಸೋಮವಾರದ ನಂತರ ಶುಲ್ಕ ತುಂಬುವ ಪ್ರಕ್ರಿಯೆಗಳು ನಡೆಯಲಿವೆ.

ಸಪ್ಲಿಮೆಂಟರಿ ಪರೀಕ್ಷೆಗೆ ಸೂಚನೆ

ಪ್ರತಿ ವರ್ಷ ಪ್ರಥಮ ಪಿಯುಸಿಯ ವಾರ್ಷಿಕ/ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಕ ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಆಯೋಜಿಸುತ್ತಾ ಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಬಹುತೇಕ ವಿಷಯಗಳ ಪರೀಕ್ಷೆಗಳು ನಡೆದಿವೆ. ಕೆಲವು ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 12.30ರವರೆಗೆ ನಡೆದಿವೆ.

ಇದಲ್ಲದೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಪರೀಕ್ಷೆಯನ್ನು ಬರೆಯಲಾಗದವರಿಗೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಶುಲ್ಕ ತುಂಬಲು ಏಪ್ರಿಲ್‌ 20ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ