ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆ: ಸಿಸಿಟಿವಿಯಲ್ಲಿ ಕಂಡಿದ್ದ ಚಿರತೆ
Sep 25, 2024 02:52 PM IST
ಬೆಂಗಳೂರಲ್ಲಿ ಕೊನೆಗೆ ಸೆರೆ ಸಿಕ್ಕ ಚಿರತೆ.
- ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಅದು ಜನನಿಬಿಡ ಸ್ಥಳ. ಜನವಸತಿ ಸ್ಥಳವೂ ಹೌದು. ಈ ಪ್ರದೇಶದಲ್ಲಿ ಕೆಲ ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿತ್ತು. ಈ ಭಾಗದಲ್ಲಿ ಚಿರತೆ ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಚಿರತೆ ಇರುವುದನ್ನು ಕೇಳಿದ್ದ ಬಹುತೇಕ ನಿವಾಸಿಗಳು ಸಿಸಿಟಿವಿ ಕ್ಯಾಮರದಲ್ಲಿ ಚಿರತೆ ಚಲನವಲನ ಇರುವುದು ಖಚಿತವಾದ ನಂತರವೂ ಇನ್ನಷ್ಟು ಭಯಗೊಂಡಿದ್ದರು. ಕೂಡಲೇ ಚಿರತೆ ಸೆರೆ ಹಿಡಿದು ದೂರದ ಕಾಡಿಗೆ ಬಿಡಿ ಎಂದು ಮನವಿ ಮಾಡಿದ್ದರು. ಚಿರತೆ ಇರುವಿಕೆ ಖಚಿತಪಡಿಸಿಕೊಂಡಿದ್ದ ಬೆಂಗಳೂರು ನಗರ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯನ್ನು ವಾರದ ಹಿಂದೆಯೇ ಆರಂಭಿಸಿದ್ದರು. ಬೋನು ಇರಿಸಿ ಕಾಯುತ್ತಿದ್ದರು. ಕೊನೆಗೆ ಚಿರತೆಯನ್ನು ಬುಧವಾರ ಸೆರೆ ಹಿಡಿಯಲಾಗಿದೆ. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಎರಡು ವಾರಗಳಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾ ಬಳಿ ಮೊದಲು ಕಾಣಿಸಿಕೊಂಡ ದೊಡ್ಡ ಬೆಕ್ಕನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಮೇಲ್ವಿಚಾರಣೆ ಮಾಡಿದ ನಂತರ ಅಂತಿಮವಾಗಿ ಸೆರೆಹಿಡಿಯಲಾಯಿತು ಎಂದು ಬೆಂಗಳೂರು ನಗರ ವಿಭಾಗದ ಡಿಸಿಎಫ್ ಎಸ್.ಎನ್. ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯ ವಿವಿಧ ಸ್ಥಳಗಳಲ್ಲಿ ಮೂರು ಬೋನುಗಳನ್ನು ಇರಿಸಿದ್ದೆವು. ಸುಮಾರು 6 ವರ್ಷ ವಯಸ್ಸಿನ ಚಿರತೆ ಅಂತಿಮವಾಗಿ ಹೆಲಿಪ್ಯಾಡ್ ಬಳಿ ಸಿಕ್ಕಿಬಿದ್ದಿದೆ. ಇದು ಆಗಾಗ್ಗೆ ಭೇಟಿ ನೀಡುತ್ತಿದ್ದ ಏಕಾಂತ ಸ್ಥಳವಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ ಅದನ್ನು ಮೈಸೂರು ಬಳಿಯ ಕಾಡಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.
ಚಿರತೆ ಸಿಕ್ಕಿಬಿದ್ದಿದ್ದು ಹೇಗೆ?
ಚಿರತೆಯ ಉಪಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ ನಂತರ, ಅರಣ್ಯ ಇಲಾಖೆ ಕ್ರಮ ಕೈಗೊಂಡಿತು. ಚಿರತೆಯ ಚಲನವಲನಗಳನ್ನು ಪತ್ತೆಹಚ್ಚಲು ತಂಡವನ್ನು ನಿಯೋಜಿಸಲಾಯಿತು ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಸ್ಥಾಪಿಸಲಾಯಿತು. ಚಿರತೆ ಅಡಗಿದೆ ಎಂದು ನಂಬಲಾದ ಪ್ರತ್ಯೇಕ ಪ್ರದೇಶಗಳಲ್ಲಿ ಬಲೆಗಳನ್ನು ಹಾಕಲಾಯಿತು. ಈ ವೇಳೆ ಅದು ಬಲೆಗೆ ಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ, ಕ್ಯಾಮೆರಾಗಳು ಚಿರತೆ ಅನೇಕ ದೃಶ್ಯಗಳನ್ನು ಸೆರೆಹಿಡಿದಿವೆ, ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಬಳಿಯ ಪ್ರತ್ಯೇಕ ಪ್ರದೇಶವು ಚಿರತೆಗೆ ಸುರಕ್ಷಿತ ಹಸಿರು ತಾಣವಾಗಿ ಮಾರ್ಪಟ್ಟಿತ್ತುಎಂದು ತೋರುತ್ತದೆ. ಜತೆಗೆ ಇದು ಜನದಟ್ಟಣೆಯ ಸನ್ನಿವೇಶವನ್ನೂ ತಪ್ಪಿಸುತ್ತದೆ. ಅಲ್ಲಿಯೇ ಚಿರತೆ ಇರುವುದು ಖಚಿತವಾದ ನಂತರ ಅರಣ್ಯ ಇಲಾಖೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ತಂತ್ರಗಳನ್ನು ಹೆಣೆದು ಗಂಡು ಚಿರತೆಯನ್ನು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯೂ ಆಯಿತು.
ಹಲವು ದಿನಗಳ ಪ್ರಯತ್ನದ ನಂತರ, ಹೆಲಿಪ್ಯಾಡ್ ಬಳಿ ರಾತ್ರಿಯಲ್ಲಿ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಈ ಕಾರ್ಯಾಚರಣೆಯು ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಗಳು ಮತ್ತು ಐಟಿ ಉದ್ಯೋಗಿಗಳಿಗೆ ನೆಮ್ಮದಿ ತಂದಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಬೆಂಗಳೂರಲ್ಲಿವೆ ಚಿರತೆ
ಬೆಂಗಳೂರು ನಗರದ ಸುತ್ತಮುತ್ತಲೂ ಸಾಕಷ್ಟು ಅರಣ್ಯ ಪ್ರದೇಶ, ಹಸಿರು ವಲಯ ಇರುವುದರಿಂದ ಚಿರತೆಗಳ ಸಂಖ್ಯೆಯೂ ಸಾಕಷ್ಟಿದೆ.ಅಲ್ಲಲ್ಲಿಯೇ ಅವು ನೆಲೆ ಕಂಡುಕೊಂಡಿವೆ. ಜನರ ಮೇಲೆ ದಾಳಿ ಮಾಡಿದ ಉದಾಹರಣೆ ಕಡಿಮೆ.ರಾತ್ರಿ ವೇಳೆ ನಾಯಿ ಹಿಡಿಯಲು ಬಂದಾಗ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ ಉದಾಹರಣೆ ಇವೆ. ಕಳೆದ ವರ್ಷ ಇದೇ ರೀತಿ ಚಿರತೆಯೊಂದು ಬೆಂಗಳೂರಿನ ಬೊಮ್ಮನಹಳ್ಳಿ ಭಾಗದ ಹೊಸೂರು ರಸ್ತೆ ಕೂಡ್ಲುಗೇಟ್ ಬಳಿಯ ಎಇಸಿಎಸ್( AECS) ಲೇಔಟ್ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಸೇರಿಕೊಂಡಾಗ ಸೆರೆ ಕಾರ್ಯಾಚರಣೆ ನಡೆದಿತ್ತು. ಚಿರತೆ ಕೊನೆಗೆ ಪ್ರಾಣ ಬಿಟ್ಟಿತ್ತು.