BS Yediyurappa Case: ಮಾಜಿ ಸಿಎಂ ಬಿಎಸ್‌ವೈ ನಿರಾಳ, ಬಂಧನ ತಡೆ ಆದೇಶ ವಿಸ್ತರಣೆ, ಸೆಪ್ಟೆಂಬರ್ 6ಕ್ಕೆ ಮತ್ತೆ ವಿಚಾರಣೆ
Aug 31, 2024 07:25 AM IST
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದು ವಾರ ಕಾಲ ಕೋರ್ಟ್ ನಿರಾಳತೆ ನೀಡಿದೆ.
- Court News ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಬಂಧನ ತಡೆ ಆದೇಶ ಮುಂದುವರಿದಿದೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪರ ವಾದ ಮಂಡಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವರು ವಾದ ಮಂಡಿಸಿ, ಈ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಹೆಚ್ಚುವರಿಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ಕೋರಿದರು. ಈ ಪ್ರಕರಣದ ಅರ್ಜಿಯ ವಿಚಾರಣೆಯನ್ನು ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅನುಮತಿ ನೀಡಿ ವಿಚಾರಣೆಯನ್ನು ಮುಂದೂಡಿದರು.
ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸುತ್ತಾ, ದಿನಕ್ಕೊಬ್ಬರಂತೆ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಶರಣಾಗಬೇಕು ಇಲ್ಲವೇ ಜೈಲಿಗೆ ಹೋಗಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಚಿವರೇ ವಾದ ಮಂಡಿಸಲಿ. ಅವರ ಹಣೆಯಲ್ಲಿ ಜೈಲಿಗೆ ಹೋಗಬೇಕು ಎಂದು ಬರೆದಿದ್ದರೆ ಹಾಗೆಯೇ ಆಗುತ್ತದೆ. ನಾನು ವಾದಿಸುವುದನ್ನು ಬಿಡುವುದಿಲ್ಲ. ಸಚಿವರು ಒಂದು ರೀತಿ ಹೇಳಿಕೆ ನೀಡುತ್ತಿದ್ದರೆ, ಸಿಐಡಿ ಪರ ಇರುವ ಎಸ್ ಪಿಪಿ ಅವರು ಮುಂದೂಡುವಂತೆ ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಅಂತಿಮವಾಗಿ ಹೈಕೋರ್ಟ್ ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಯಡಿಯೂರಪ್ಪ ಅವರನ್ನು ಬಂಧಿಸಬಾರದು ಮವತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ ಎಂಬ ತನ್ನ ಮಧ್ಯಂತರ ಆದೇಶವನ್ನು ಪುನಃ ವಿಸ್ತರಿಸಿದೆ.
ಏನಿದು ಪ್ರಕರಣ ?
ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯಕ್ಕಾಗಿ ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಹೋಗಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಮನೆಗೆ ತೆರಳಿ ಸಹಾಯ ಕೇಳಿದಾಗ ಅವರು ನನ್ನ ಪುತ್ರಿಯನ್ನು ಪ್ರತ್ಯೇಕ ಕೊಠಡಿಯೊಳಕ್ಕೆ ಕರೆದೊಯ್ದು ನನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಒಂದಿಷ್ಟು ಹಣ ನೀಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.
ವಿಚಾರಣೆಗೆ ಹಾಜರು
ನಂತರ ಸದಾಶಿವ ನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರೂ ಯಡಿಯೂರಪ್ಪ ಗೈರು ಹಾಜರಾಗಿದ್ದರು. ಅಂತಿಮವಾಗಿ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಿರ್ದೇಶನದಂತೆ ಯಡಿಯೂರಪ್ಪ ಅವರು ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು.
ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಅವರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ವರದಿ: ಎಚ್. ಮಾರುತಿ, ಬೆಂಗಳೂರು