logo
ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೋ ಪ್ರಕರಣ: ಯಡಿಯೂರಪ್ಪ ಬಂಧಿಸದಂತೆ ನಿರ್ಬಂಧ ವಿಸ್ತರಿಸಿದ ಹೈಕೋರ್ಟ್, ಮಾಜಿ ಮುಖ್ಯಮಂತ್ರಿ ಮತ್ತೊಮ್ಮೆ ನಿರಾಳ

ಪೋಕ್ಸೋ ಪ್ರಕರಣ: ಯಡಿಯೂರಪ್ಪ ಬಂಧಿಸದಂತೆ ನಿರ್ಬಂಧ ವಿಸ್ತರಿಸಿದ ಹೈಕೋರ್ಟ್, ಮಾಜಿ ಮುಖ್ಯಮಂತ್ರಿ ಮತ್ತೊಮ್ಮೆ ನಿರಾಳ

D M Ghanashyam HT Kannada

Jul 27, 2024 09:53 PM IST

google News

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

    • ಸದ್ಯಕ್ಕೆ ಜಾಮೀನು ಪಡೆದುಕೊಂಡಿರುವ ಯಡಿಯೂರಪ್ಪ ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. (ವರದಿ: ಮಾರುತಿ ಎಚ್.)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (HT_PRINT)

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ವಿಸ್ತರಿಸಿದ ನಿರ್ಬಂಧವನ್ನು ಹೈಕೋರ್ಟ್ ವಿಸ್ತರಿಸಿದೆ. ಇದರಿಂದ ಯಡಿಯೂರಪ್ಪ ಅವರು ಬಂಧನ ಭೀತಿಯಿಂದ ನಿರಾಳರಾಗಿದ್ದಾರೆ. ಈ ಪ್ರಕರಣ ಕುರಿತು ಶಾಸಕರು ಮತ್ತು ಸಂಸದರ ವಿರುದ್ದದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ವಿಚಾರಣೆ ನಡೆಸಿ ಒಂದು ವಾರ ನಿರ್ಬಂಧವನ್ನು ಮುಂದೂಡಿದರು.

ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 53 ವರ್ಷದ ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ 81 ವರ್ಷದ ಯಡಿಯೂರಪ್ಪ ಈ ಆರೋಪವನ್ನು ನಿರಾಕರಿಸಿದ್ದರು. ವಿಶೇಷ ಎಂದರೆ ಈ ಮಹಿಳೆ ತಮ್ಮ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ನ್ಯಾಯ ಒದಗಿಸಲು ಸಹಾಯ ಮಾಡುವಂತೆ ಕೋರಿ ಯಡಿಯೂರಪ್ಪ ಅವರ ಬಳಿ ಬಂದಿದ್ದರು.

ಡಾಲರ್ಸ್ ಕಾಲೋನಿಯ ಮನೆಗೆ ಹೋಗಿ ಸಹಾಯ ಕೇಳಿದಾಗ ಯಡಿಯೂರಪ್ಪ ಅವರು ಕೊಠಡಿಯೊಳಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಒಂದಿಷ್ಟು ಹಣ ನೀಡಿ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದರು ಎಂದು ಸಂತ್ರಸ್ತ ಬಾಲಕಿಯ ತಾಯಿ ಆರೋಪಿಸಿದ್ದರು.

ಈ ಆರೋಪಕ್ಕೆ ಪುಷ್ಟಿಯಾಗಿ ಲಭ್ಯವಿದ್ದ ವಿಡಿಯೋ ತುಣುಕುಗಳ ದಾಖಲೆಯನ್ನು ಯಡಿಯೂರಪ್ಪ ಅವರ ಬೆಂಬಲಿಗರು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಅನಾರೋಗ್ಯದಿಂದ ತಿಂಗಳ ಹಿಂದೆ ಈ ಮಹಿಳೆ ಮೃತರಾಗಿದ್ದಾರೆ. ಯಡಿಯೂರಪ್ಪ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ನಂತರ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದರೆ, ವಿಚಾರಣೆಗೆ ಅವರು ಹಾಜರಾಗಿರಲಿಲ್ಲ. ತದನಂತರ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕೋರಿ ನಗರದ 1ನೇ ತ್ವರಿತಗತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಯಡಿಯೂರಪ್ಪ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬಂಧಿಸದಂತೆ ಈ ಹಿಂದೆಯೂ ನಿರ್ದೇಶನ ನೀಡಿತ್ತು. ಆಗಲೂ ಅವರು ಬಂಧನ ಭೀತಿಯಿಂದ ಪಾರಾಗಿದ್ದರು. ಹೈಕೋರ್ಟ್ ನಿರ್ದೇಶನದಂತೆ ಯಡಿಯೂರಪ್ಪ ಅವರು ಸಿಐಡಿ ಎದುರು ವಿಚಾರಣೆಗೆ ಹಾಜರಾಗಿದ್ದರು.

ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಯಡಿಯೂರಪ್ಪ ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ