ಬೆಂಗಳೂರಲ್ಲಿ ಸದ್ಯ ಮಳೆ ಇಲ್ವಾ, ದೀಪಾವಳಿಗೆ ಮಳೆ ಅಡ್ಡಿಯಾಗುತ್ತ, ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆಯ ಸಾಧ್ಯತೆ; ಕರ್ನಾಟಕದ ಹವಾಮಾನ ಇಂದು
Oct 26, 2024 07:16 AM IST
ಕರ್ನಾಟಕದ ಹವಾಮಾನ ಇಂದು (ಅಕ್ಟೋಬರ್ 26): ಬೆಂಗಳೂರಲ್ಲಿ ಸದ್ಯ ಮಳೆ ಇಲ್ವಾ, ದೀಪಾವಳಿಗೆ ಮಳೆ ಅಡ್ಡಿಯಾಗುತ್ತ ಎನ್ನುವ ಪ್ರಶ್ನೆ, ಕುತೂಹಲ ಸಹಜ, ಇಲ್ಲಿದೆ ಹವಾಮಾನ ವಿವರ. (ಸಾಂಕೇತಿಕ ಚಿತ್ರ)
ವಾರ ಕಾಲ ಸತತವಾಗಿ ಸುರಿದ ಮಳೆಗೆ ಕಂಗಾಲಾಗಿದ್ದ ಬೆಂಗಳೂರು ಜನರ ನಡುವೆ ಇಂದು ಮಳೆ ಬರುತ್ತಾ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತೆ. ಬೆಂಗಳೂರಲ್ಲಿ ಸದ್ಯ ಮಳೆ ಇಲ್ವಾ, ದೀಪಾವಳಿ ಹತ್ತಿರವೇ ಇದ್ದು ಅದಕ್ಕೆ ಮಳೆ ಅಡ್ಡಿಯಾಗುತ್ತ ಎಂಬ ಪ್ರಶ್ನೆಯೂ ಇದೆ. ಸದ್ಯ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಕರ್ನಾಟಕ ಹವಾಮಾನ ಇಂದು ಹೇಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು: ಹೆಚ್ಚು ಕಡಿಮೆ ಒಂದು ವಾರ ಸುರಿದ ಮಳೆಗೆ ಬೆಂಗಳೂರು ಉತ್ತರ ಮತ್ತು ಪೂರ್ವ ಹಾಗೂ ಇತರೆ ಕೆಲವು ಪ್ರದೇಶ ಜನರು ತತ್ತರಿಸಿ ಹೋಗಿದ್ದರು. ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿ ಕಡೆಗೆ ಮರಳತೊಡಗಿದೆ. ನೀರು ನಿಂತ ಪ್ರದೇಶಗಳಲ್ಲಿ ಈಗ ಹಲವು ಸಮಸ್ಯೆಗಳು ಎದುರಾಗತೊಡಗಿದ್ದು, ಮಲೇರಿಯಾ, ಡೆಂಘಿ ಮೊದಲಾದ ಅನಾರೋಗ್ಯಗಳ ಭೀತಿಯೂ ಕಾಡತೊಡಗಿದೆ. ಇಂತಹ ಸನ್ನಿವೇಶದಲ್ಲಿ ಇಂದು ಮಳೆ ಬರುತ್ತಾ ಎಂಬ ಕಳವಳದೊಂದಿಗೆ ಸಹಜವಾಗಿಯೇ ಹವಾಮಾನ ಕಡೆಗೆ ನಿತ್ಯವೂ ಗಮನಹರಿದುಬಿಡುತ್ತದೆ. ಮಾತಿಗಿಳಿದರೆ ಸಾಕು, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬುದು ಮೊದಲ ಪ್ರಶ್ನೆಯಾಗುತ್ತದೆ. ವಾಯುಭಾರ ಕುಸಿತ ಮತ್ತು ದಾನಾ ಚಂಡ ಮಾರುತದ ಪರಿಣಾಮ ಕಡಿಮೆಯಾಗಿದ್ದು, ಮಳೆಯ ತೀವ್ರತೆಯೂ ಕಡಿಮೆಯಾಗಿದೆ. ಇನ್ನೊಂದೆಡೆ ಕೇರಳದ ಕೆಳ ತುದಿಯಿಂದ ಮಳೆ ಬರತೊಡಗಿದೆ. ಇಂದು ಕೇರಳದ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ಮಳೆ ಮತ್ತೆ ಆವರಿಸತೊಡಗಿದೆ.
ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ; ಹವಾಮಾನ ಮುನ್ಸೂಚನೆ ಹೀಗಿದೆ
ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ಪ್ರಕಾರ, ಅಕ್ಟೋಬರ್ 27ರ ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಬಹುತೇಕ ಬಿಸಿಲು ಆವರಿಸಲಿದ್ದು, ಕೊಂಚ ನೆಮ್ಮದಿಯ ವಾತಾವರಣ ಕಾಣಬಹುದು. ಸಾಮಾನ್ಯವಾಗಿ ಚಳಿ ಇರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ತುಸು ಚಳಿಯ ಅನುಭವವಾದೀತು.
ಇನ್ನುಳಿದಂತೆ, ಬೆಂಗಳೂರಿನಲ್ಲಿ ಸಹಜ ವಾತಾವರಣ ಇರಲಿದೆ. ಪ್ರವಾಹ ಪೀಡಿತ, ಜಲಾವೃತ ಪ್ರದೇಶಗಳಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿ ತರುವ ಕೆಲಸ ಪ್ರಗತಿಯಲ್ಲಿದ್ದು, ಸಂಕಷ್ಟಕ್ಕೆ ಒಳಗಾದ ಜನರ ಬದುಕಿಗೆ ನೆರವಾಗುವ ಕೆಲಸವೂ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟು ಕಾಳಜಿವಹಿಸಬೇಕು. ಮೂಲಸೌರ್ಕಯಗಳನ್ನು ಒದಗಿಸುವ ಕಡೆಗೆ ಸರ್ಕಾರ ಗಮನಹರಿಸಬೇಕು ಎಂಬ ಆಗ್ರಹವೂ ಸಮಾಜದ ನಡುವೆ ಕೇಳಿಬರುತ್ತಿದೆ.
ಕರ್ನಾಟಕ ಹವಾಮಾನ ಇಂದು ಹೀಗಿದೆ
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಅಕ್ಟೋಬರ್ 27ರ ಬೆಳಗ್ಗೆ 8.30ರ ತನಕ ಮಳೆಯ ಸುಳಿವು ಇರಲ್ಲ. ಉತ್ತರ ಒಳನಾಡಿನ ಯಾವುದೇ ಜಿಲ್ಲೆಗಳಲ್ಲೂ ಅಂದರೆ, ಬಾಗಲಕೋಟೆ, ಬೆಳಗಾವಿ, ಬೀದರ್, ದಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆಯೇ ಇರಲ್ಲ ಎಂದು ಹವಾಮಾನ ಇಲಾಖೆ ನೀಡಿರುವ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಿಶೇಷವಾಗಿ ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಶೇಕಡ 50 ಭೂ ಪ್ರದೇಶದಲ್ಲಿ (ಅಲ್ಲಲ್ಲಿ) ಚದುರಿದಂತೆ ಸಾಧಾರಣೆ ಮಳೆ ಸುರಿಯುವ ಸಾಧ್ಯತೆ ಇದೆ. ಆದರೆ ಯಾವುದೇ ಮುನ್ನೆಚ್ಚರಿಕೆಯನ್ನು ಈ ಜಿಲ್ಲೆಗಳಿಗೆ ನೀಡಿಲ್ಲ. ಮಳೆಯ ತೀವ್ರತೆಯೂ ಹೇಳುವಷ್ಟಿರಲ್ಲ ಎಂಬುದು ಇದಕ್ಕೆ ಕಾರಣ. ಇನ್ನುಳಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಇಂದು ಮಳೆ ಇರಲ್ಲ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಕಳೆದ ವಾರ ಸುರಿದ ಹಿಂಗಾರು ಮಳೆಯ ಅಬ್ಬರಕ್ಕೆ ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಬೆಳೆ ಹಾನಿಗಳಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಬೆಳೆದ ಫಸಲು ಕೈಸೇರದೆ ನಷ್ಟ ಅನುಭವಿಸಿದ್ದು, ಅದರ ಅಂದಾಜು ಲೆಕ್ಕಾಚಾರ ಒಂದೆಡೆ ನಡೆಯುತ್ತಿದೆ. ಸದ್ಯ ಹವಾಮಾನ ಮುನ್ಸೂಚನೆ ಪ್ರಕಾರ ಮಳೆಯ ಅನಾಹುತ ಇಲ್ಲ ಎಂಬ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಸುಧಾರಿಸುವ ಪ್ರಯತ್ನದಲ್ಲಿದ್ದಾರೆ ಜನ.