Bengaluru: ರ‍್ಯಾಪಿಡೋ ಬೈಕ್ ಹತ್ತಿದ್ದಕ್ಕೆ ಬೆಂಗಳೂರು ಟೆಕ್ಕಿಯ ಮೇಲೆ ಆಟೋ ಹತ್ತಿಸಲು ಯತ್ನಿಸಿದ ಚಾಲಕ VIDEO
May 26, 2023 05:34 PM IST
ಟೆಕ್ಕಿಯ ಮೇಲೆ ಆಟೋ ಹತ್ತಿಸಲು ಯತ್ನಿಸಿದ ಚಾಲಕ
- Rapido Bike vs Autorickshaw: ಆಟೋ ಹತ್ತಲು ನಿರಾಕರಿಸಿದ ಅಜರ್ ಖಾನ್ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಬೈಕ್ ಟ್ಯಾಕ್ಸಿಗೆ ಕಾಯುತ್ತಾ ಇರುವ ವೇಳೆ ಆಟೋ ಚಾಲಕ ಅಜರ್ ಖಾನ್ಗೆ ಡಿಕ್ಕಿ ಹೊಡೆದು ಆತನ ಮೇಲೆ ಆಟೋ ಹತ್ತಿಸಲು ಯತ್ನಿಸಿರುವುದು ಅಜರ್ ಖಾನ್ ಶೇರ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಚಾಲಕರು ಮತ್ತು ರಿಕ್ಷಾ ಚಾಲಕರ ನಡುವಿನ ಸಂಘರ್ಷದ ವಾತಾವರಣದ ನಡುವೆ ಮತ್ತೊಂದು ಘಟನೆ ನಡೆದಿದೆ. ಆಟೋ ನಿರಾಕರಿಸಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ ವ್ಯಕ್ತಿಯ ಮೇಲೆ ಆಟೋ ಹತ್ತಿಸಲು ಚಾಲಕ ಯತ್ನಿಸಿರುವ ಘಟನೆ ಮೊನ್ನೆ (ಮೇ 24, ಬುಧವಾರ ) ತಡರಾತ್ರಿ ನಡೆದಿದೆ.
ಬುಧವಾರ ತಡರಾತ್ರಿ 3 ಗಂಟೆಯ ವೇಳೆಗೆ ಬೆಂಗಳೂರಿನ ಟೆಕ್ಕಿ ಅಜರ್ ಖಾನ್ ಎಂಬುವವರು ಹಾಗೂ ಆಟೋ ಚಾಲಕನ ಜೊತೆ ಮಾತಿನ ಚಕಮಕಿ ನಡೆದಿದೆ. ಆಟೋ ಹತ್ತಲು ನಿರಾಕರಿಸಿದ ಅಜರ್ ಖಾನ್ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಬೈಕ್ ಟ್ಯಾಕ್ಸಿಗೆ ಕಾಯುತ್ತಾ ಇರುವ ವೇಳೆ ಆಟೋ ಚಾಲಕ ಅಜರ್ ಖಾನ್ಗೆ ಡಿಕ್ಕಿ ಹೊಡೆದು ಆತನ ಮೇಲೆ ಆಟೋ ಹತ್ತಿಸಲು ಯತ್ನಿಸಿರುವುದು ಅಜರ್ ಖಾನ್ ಶೇರ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿದೆ. ಅದೃಷ್ಟವಶಾತ್ ಅಜರ್ ಖಾನ್ ಅಪಘಾತದಿಂದ ಪಾರಾಗಿದ್ದಾರೆ, ಆದರೆ ರಸ್ತೆ ಬದಿ ಬಿದ್ದಿದ್ದಾರೆ.
“ಕಳೆದ ರಾತ್ರಿ 3:00 ಗಂಟೆಗೆ ನಾನು ರ‍್ಯಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಸವಾರಿ ಮಾಡುತ್ತಿದ್ದೆ. ಮತ್ತು HSR ಲೇಔಟ್ ಸೆಕ್ಟರ್ 1 ರಲ್ಲಿ ಕುಡಿದ ಅಮಲಿನಲ್ಲಿ ಆಟೋ ಚಾಲಕನು ತನ್ನ ಆಟೋದಿಂದ ನನಗೆ ಗುದ್ದಿದನು. ನನ್ನ ಬಳಿ ಕಂಪನಿಯ ಲ್ಯಾಪ್ಟಾಪ್ ಮತ್ತು ಗ್ಯಾಜೆಟ್ಗಳು ಇದ್ದವು. ಚಾಲಕ ತನ್ನ ಆಟೋದಲ್ಲಿ ನನಗೆ ಗುದ್ದಿ ಪರಾರಿಯಾದನು” ಎಂದು ಬರೆದು ಟ್ವಿಟರ್ನಲ್ಲಿ ಸಿಸಿಟಿವಿ ವಿಡಿಯೋ ಹಂಚಿಕೊಂಡಿರುವ ಅಜರ್ ಖಾನ್, ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ಬೆಂಗಳೂರು ನಗರ ಪೊಲೀಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ನಗರದಲ್ಲಿ ‘ಅಕ್ರಮ’ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ನಿಷೇಧಿಸುವಂತೆ ಆಟೋ ಒಕ್ಕೂಟಗಳು ಪ್ರತಿಭಟನೆ ನಡೆಸಿದ್ದವು. ನಂತರ ನಗರದಲ್ಲಿ ಮೊಬೈಲ್ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳು ಒದಗಿಸುವ ಬೈಕ್ ಟ್ಯಾಕ್ಸಿ ಸೇವೆಗಳ ಬಳಕೆಯನ್ನು ನಿಷೇಧಿಸಬೇಕೆಂದು ಒಕ್ಕೂಟವು ರಾಜ್ಯ ಸರ್ಕಾರವನ್ನು ಒತ್ತಾಯಿಸಿತು. ಸಾರಿಗೆ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ದ್ವಿಚಕ್ರ ವಾಹನಗಳಿಗೆ ವೈಟ್‌ಬೋರ್ಡ್‌ಗಳನ್ನು ಹಾಕುವ ಮೂಲಕ ಅಗ್ರಿಗೇಟರ್‌ಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬಳಸಲು ಯುವಜನರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆಟೋ ಚಾಲಕರು ಆರೋಪಿಸಿದ್ದರು. ಕೋಪದಲ್ಲಿ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಟೋ ಚಾಲಕರು ಹಲ್ಲೆ ನಡೆಸಿದ ಘಟನೆಗಳೂ ನಡೆದಿವೆ.
ಮಾರ್ಚ್‌ನಲ್ಲಿ ಇಂದಿರಾನಗರ ಮೆಟ್ರೋ ನಿಲ್ದಾಣ ಸಮೀಪ ಆಟೋ ಚಾಲಕನು ರಾಪಿಡೋ ಚಾಲಕನಿಗೆ ಕಿರುಕುಳ ನೀಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆದ ತಕ್ಷಣ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಲಾಗಿತ್ತು. ಕೆಲ ದಿನಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಘಟನೆ ಬಳಿಕ ಆಟೋ ನಿಲ್ದಾಣಗಳ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಾಪಿಡೋ ಚಾಲಕರು ಹೆದರುತ್ತಿದ್ದಾರೆ.
ರಾಪಿಡೋ ಸೇವೆಯು ಕಡಿಮೆ ದರಕ್ಕೆ ದೊರಕುವುದರಿಂದ ಮತ್ತು ಹೆಚ್ಚು ತ್ವರಿತವಾಗಿ ಪ್ರಯಾಣಿಸಲು ಸಾಧ್ಯವಿರುವುದರಿಂದ ಹೆಚ್ಚಿನ ಜನರು ರಾಪಿಡೋ ಸೇವೆ ಪಡೆಯುತ್ತಿದ್ದಾರೆ. ಆಟೋ ಚಾಲಕರು ದುಬಾರಿ ಮೊತ್ತ ಕೇಳುವುದರಿಂದ ಆಟೋಕ್ಕಿಂತ ರಾಪಿಡೋ ವಾಸಿ ಎಂದು ಕೆಲವು ಜನರು ಭಾವಿಸುತ್ತಿದ್ದಾರೆ.