ಸ್ವಿಗ್ಗಿಯಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದ್ದ ಕೇಕ್ ತಿಂದು ಡೆಲಿವರಿ ಎಕ್ಸಿಕ್ಯೂಟಿವ್ನ 5 ವರ್ಷದ ಮಗ ಸಾವು; ಪೋಷಕರ ಸ್ಥಿತಿ ಗಂಭೀರ
Oct 08, 2024 06:55 PM IST
ಸ್ವಿಗ್ಗಿಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದನ್ನು ತಂದೆ ತಂದಿದ್ದ ಕೇಕ್ ತಿಂದು 5 ವರ್ಷದ ಬಾಲಕ ಸಾವು
Bengaluru Boy Dies: ಸ್ವಿಗ್ಗಿಯಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದ್ದನ್ನು ತಂದೆ ತಂದಿದ್ದ ಕೇಕ್ ಅನ್ನು ತಿಂದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೆ, ಪೋಷಕರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು: ನಗರದ ಭುವನೇಶ್ವರಿ ನಗರದಲ್ಲಿ ಸೋಮವಾರ (ಅಕ್ಟೋಬರ್ 7) ಕೇಕ್ ಸೇವಿಸಿದ 5 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ಪೋಷಕರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟ ಬಾಲಕನ ಹೆಸರು ಧೀರಜ್. ಬಾಲಕ ತನ್ನ ಮನೆಯಲ್ಲಿ ಕೇಕ್ ತಿಂದ ಸ್ವಲ್ಪ ಸಮಯದ ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದನು. ಆ ಬಳಿಕ ಸಾವನ್ನಪ್ಪಿದ್ದಾನೆ.
ಬಾಲಕನ ತಂದೆ ಬಾಲರಾಜ್ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಹಕರೊಬ್ಬರು ತಮ್ಮ ಆರ್ಡರ್ ಅನ್ನು ಕ್ಯಾನ್ಸನ್ ಮಾಡಿದ ನಂತರ ಕೇಕ್ ಅನ್ನು ಮನೆಗೆ ತಂದಿದ್ದರು. ಕುಟುಂಬವು ಕೇಕ್ ಹಂಚಿಕೊಂಡ ಸ್ವಲ್ಪ ಸಮಯದ ನಂತರ, ಮೂವರೂ ಅನಾರೋಗ್ಯಕ್ಕೆ ತುತ್ತಾದರು. ಆದರೆ ಧೀರಜ್ ಪ್ರಾಣ ಕಳೆದುಕೊಂಡನು.
ಆತ್ಮಹತ್ಯೆಯೂ ಆಗಿರಬಹುದೆಂದ ಪೊಲೀಸರು
ಆದರೆ, ಬಾಲರಾಜ್ ಮತ್ತು ಅವರ ಪತ್ನಿ ನಾಗಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಕ್ನಲ್ಲಿ ವಿಷ ಆಹಾರ ಇರಬಹುದು ಎಂಬ ಅಂಶವನ್ನು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಸ್ತುತ ಪೊಲೀಸರು ತನಿಖೆ ಕೈಗೊಂಡಿದ್ದು, ಆತ್ಮಹತ್ಯೆಯೂ ಆಗಿರಬಹುದೆಂದು ಶಂಕಿಸಿದ್ದಾರೆ.
ಅಲ್ಲದೆ, ಕೇಕ್ ಸೇವನೆಯು ಆತ್ಮಹತ್ಯೆ ಪ್ರಯತ್ನದ ಭಾಗವಾಗಿರಬಹುದು ಎಂಬುದು ಸೇರಿದಂತೆ ಇತರ ಸಾಧ್ಯತೆಗಳನ್ನು ತನಿಖಾಧಿಕಾರಿಗಳು ತಳ್ಳಿ ಹಾಕಿಲ್ಲ. ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಘಟನೆಯ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕುಟುಂಬದ ಹಠಾತ್ ಅನಾರೋಗ್ಯಕ್ಕೆ ಕಾರಣವೇನು ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರಸ್ತುತ ಕೇಕ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೆಚ್ಚಿನ ವೈದ್ಯಕೀಯ ವರದಿಗಳಿಗಾಗಿ ಕಾಯುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸ್ವಿಗ್ಗಿ ಹೇಳಿದ್ದೇನು?
ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ನಮ್ಮ ಹೃದಯ ಚೂರಾಗಿದೆ. ಕುಟುಂಬಕ್ಕೆ ನಮ್ಮ ಸಾಂತ್ವನಗಳು. ಕುಟುಂಬವನ್ನು ಭೇಟಿ ಮಾಡಲು ನಮ್ಮ ತಂಡವು ಆಸ್ಪತ್ರೆಗೆ ಭೇಟಿ ನೀಡಿದೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ. ಅಧಿಕಾರಿಗಳು ಈ ವಿಷಯವನ್ನು ತನಿಖೆ ಮಾಡುತ್ತಿರುವುದರಿಂದ ಅವರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಸ್ವಿಗ್ಗಿ ತಿಳಿಸಿದೆ.
ಆಹಾರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲಾ ರೆಸ್ಟೋರೆಂಟ್ ಪಾಲುದಾರರು ನಮ್ಮ ಪ್ಲಾಟ್ಫಾರಂನಲ್ಲಿ ಪಟ್ಟಿ ಮಾಡುವ ಮೊದಲು ಎಫ್ಎಸ್ಎಸ್ಎಐ ಪರವಾನಗಿ ಹೊಂದಿರಬೇಕು ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.