logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ಜಾತಿ ನಿಂದನೆ ಪ್ರಕರಣ: ಮುನಿರತ್ನ ಧ್ವನಿ ಎಫ್‌ ಎಸ್‌ ಎಲ್‌ ಪರೀಕ್ಷೆಯಲ್ಲಿ ದೃಢ

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ಜಾತಿ ನಿಂದನೆ ಪ್ರಕರಣ: ಮುನಿರತ್ನ ಧ್ವನಿ ಎಫ್‌ ಎಸ್‌ ಎಲ್‌ ಪರೀಕ್ಷೆಯಲ್ಲಿ ದೃಢ

Umesh Kumar S HT Kannada

Nov 26, 2024 06:59 AM IST

google News

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಧ್ವನಿ ದೃಢವಾಗಿದೆ. (ಕಡತ ಚಿತ್ರ)

  • ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಸಿಕ್ಕ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಮುನಿರತ್ನ ಧ್ವನಿ ಎಂಬುದು ಎಫ್‌ ಎಸ್‌ ಎಲ್‌ ಪರೀಕ್ಷೆಯಲ್ಲಿ ದೃಢವಾಗಿದೆ. (ವರದಿ- ಎಚ್‌. ಮಾರುತಿ, ಬೆಂಗಳೂರು)

ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಧ್ವನಿ ದೃಢವಾಗಿದೆ. (ಕಡತ ಚಿತ್ರ)
ಬಿಜೆಪಿ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಧ್ವನಿ ದೃಢವಾಗಿದೆ. (ಕಡತ ಚಿತ್ರ) (LM)

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ಕಳುಹಿಸಿದ್ದ ಆಡಿಯೊ ಮಾದರಿ ವರದಿ ಬಂದಿದ್ದು, ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎನ್ನುವುದು ದೃಢಪಟ್ಟಿದೆ.ಇದರಿಂದ ಮುನಿರತ್ನ ಅವರಿಗೆ ಆತಂಕ ಎದುರಾಗಿದೆ. ಜಾತಿ ನಿಂದನೆ ಪ್ರಕರಣ ದೃಢಪಡುವ ಲಕ್ಷಣಗಳಿವೆ ಎಂದು ಹೇಳಲಾಗುತ್ತಿದೆ. ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ವೇಲು ನಾಯ್ಕರ್ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಮುನಿರತ್ನ ವಿರುದ್ಧ ಸೆಪ್ಟಂಬರ್‌.13 ರಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣ, ಏನಿದು

ಮುನಿರತ್ನ ಅವರನ್ನು ಕೋಲಾರದ ಸಮೀಪ ಸೆ.14ರಂದು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದರು. ಇದು ಮೊದಲ ಪ್ರಕರಣ. ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪದಡಿಯಲ್ಲಿ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಎರಡೂ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವರ್ಗಾವಣೆ ಮಾಡಿತ್ತು. ದೂರುದಾರರು ನೀಡಿದ ಆಡಿಯೊ ಕ್ಲಿಪ್ ಅನ್ನು ಎಸ್‌ಐಟಿ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಇದೀಗ ಅದರ ವರದಿ ಬಂದಿದ್ದು ಆಡಿಯೊದಲ್ಲಿ ಇರುವುದು ಮುನಿರತ್ನ ಅವರದ್ದೇ ಧ್ವನಿ ಎನ್ನುವುದು ದೃಢವಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಎಫ್‌ಎಸ್ಎಲ್ ತಜ್ಞರು ಮುನಿರತ್ನ ಅವರ ಧ್ವನಿ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದರು. ಅಲ್ಲದೇ ದೂರುದಾರ ವೇಲು ನಾಯ್ಕರ್‌ ಅವರ ಧ್ವನಿ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ಆಡಿಯೋದ ಮೂಲ ತುಣುಕು ಹಾಗೂ ಆಡಿಯೋ ರೆಕಾರ್ಡ್ ಮಾಡಿದ್ದ ಸಾಧನವನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ತಜ್ಞರ ವರದಿ ತನಿಖಾಧಿಕಾರಿಗಳ ಕೈ ಸೇರಿದೆ ಎಂದು ತಿಳಿದು ಬಂದಿದೆ.

ಹಿಂದೂ ದೇವತೆಗಳ ಅವಹೇಳನ; ಅಂಜುಂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಹಿಂದೂ ದೇವತೆಗಳನ್ನು ಕುರಿತು ಅಶ್ಲೀಲ ಪದ ಬಳಸಿ, ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಈ ಸಂಬಂಧ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಹಾಸಭಾದ ಉಪಾಧ್ಯಕ್ಷ ಬಿ.ಎಸ್.ರಾಘವೇಂದ್ರ ಭಟ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಅಂಜುಂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಆರೋಪಿ ಅಂಜುಂ ಶೇಕ್ ಎಂಬಾತ ಗಣಪತಿ, ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬೆ, ತಿರುಪತಿ ತಿಮ್ಮಪ್ಪ, ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ ಕುರಿತು ಆಶ್ಲೀಲ ಪದ ಬಳಕೆ ಮಾಡಿದ್ದಾನೆ. ಇದರಿಂದ ಹಿಂದೂ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಈತ ಉದ್ದೇಶಪೂರ್ವಕವಾಗಿ ಎರಡೂ ಧರ್ಮಗಳ ನಡುವೆ ಕೋಮುಧ್ವೇಷ ಉಂಟು ಮಾಡುವ ದೃಷ್ಟಿಯಿಂದಲೇ ಈತ ಈ ರೀತಿ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾನೆ. ಆದ್ದರಿಂದ ಆರೋಪಿ ವಿರುದ್ಧ ಕಾನೂನೂ ಕ್ರಮ ಜರುಗಿಸಬೇಕೆಂದು ರಾಘವೇಂದ್ರ ಅವರು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

(ವರದಿ- ಎಚ್‌. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ