logo
ಕನ್ನಡ ಸುದ್ದಿ  /  ಕರ್ನಾಟಕ  /  ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್‌ ಪ್ರಶ್ನೆ

ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್‌ ಪ್ರಶ್ನೆ

Jayaraj HT Kannada

Nov 12, 2024 07:25 AM IST

google News

ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್‌ ಪ್ರಶ್ನೆ

    • ಜೈಲಿನ ಅಧಿಕಾರಿಗಳ ಸಹಕಾರ ಇಲ್ಲದೆ ಯಾವುದೇ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ ಎಂದು ಹೈಕೋರ್ಟ್‌ ಪ್ರಶ್ನಿಸಿದೆ. ಇದೇ ವೇಳೆ ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ಜನ ಎಂದು ಗರಂ ಆಗಿರುವ ಹೈಕೋರ್ಟ್‌, ಅವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.‌ (ಎಚ್.ಮಾರುತಿ)
ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್‌ ಪ್ರಶ್ನೆ
ಜೈಲು ಅಧಿಕಾರಿಗಳ ಸಹಕಾರವಿಲ್ಲದೆ ವಸ್ತುಗಳು ಜೈಲು ಪ್ರವೇಶಿಸಲು ಸಾಧ್ಯವೇ; ಹೈಕೋರ್ಟ್‌ ಪ್ರಶ್ನೆ

ಬೆಂಗಳೂರು: ಜೈಲು ಅಧಿಕಾರಿಗಳ ಸಹಕಾರ ಇಲ್ಲದೆ ಕಾನೂನು ಬಾಹಿರ ವಸ್ತುಗಳು ಜೈಲಿನ ಒಳಗೆ ಹೋಗಲು ಹೇಗೆ ಸಾಧ್ಯ ಎಂದು ಹೈಕೋರ್ಟ್‌ ಪ್ರಶ್ನಿಸಿದೆ. ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಯಾಗಿರುವ ರೌಡಿ ವಿಲ್ಸನ್ ಗಾರ್ಡನ್ ನಾಗ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಜೈಲಿನ ಅಧಿಕಾರಿಗಳು ಶಾಮೀಲಾಗದಿದ್ದರೆ ಇಂತಹ ಘಟನೆಗಳು ನಡೆಯವುದು ಸಾಧ್ಯವೇ ಇಲ್ಲ ಎಂದಿದೆ. ಆರೋಪಿಗಳಿಗೆ ಉತ್ತಮ ಕುರ್ಚಿಗಳನ್ನು ಸರ್ಕಾರಿ ಅಧಿಕಾರಿಗಳೇ ಒದಗಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಜೈಲಿನ ಅಧಿಕಾರಿಗಳ ಮೇಲೆ ವಿಚಾರಣೆ ನಡೆಸಲಿ. ಅರ್ಜಿದಾರರು ಕಾಫಿ ಕುಡಿಯುವುದು ತಪ್ಪೇ? ಅವರ ವಿರುದ್ಧ ಬಲವಂತದ ಕ್ರಮವನ್ನು ಏಕೆ ತೆಗೆದುಕೊಳ್ಳುತ್ತೀರಿ ಎಂದು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿಎನ್ ಜಗದೀಶ್ ಅವರನ್ನು ಪ್ರಶ್ನಿಸಿದರು.

ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಿದರು. ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಡೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಧೂಮಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಜೊತೆ ವಿಲ್ಸನ್ ಗಾರ್ಡನ್ ನಾಗ ಕೂಡಾ ಕುಳಿತಿದ್ದ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು 2024ರ ಆಗಸ್ಟ್ 26ರಂದು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ ಕಾಯ್ದೆ 2022ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ಜನ: ಹೈಕೋರ್ಟ್‌ ಗರಂ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿ(ಬೆಸ್ಕಾಂ) ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಜನ ಎಂದು ಹೈಕೋರ್ಟ್‌ ಕೆಂಡಾಮಂಡಲವಾಗಿದೆ. ಬೆಸ್ಕಾಂ ಅಧಿಕಾರಿಗಳು ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯಬಲ್ಲರು ಇಂತಹವರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದೂ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ನಮ್ಮ ವಿರುದ್ಧ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಜಗಳೂರು ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಜಿಎಂ ಪ್ರವೀಣ್, ವಿಭಾಗೀಯ ಅಧಿಕಾರಿ ಎಸ್‌ಸಿ ಗಂಗಾಧರ ತಿಲಕ್ ಮತ್ತು ಪಟ್ಟಣದ ಲೈನ್‌ಮನ್‌ ಅಸೀಫ್ ಸೋಮಲಾಪುರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿಯನ್ನು ವಿಚಾರಣೆಗೆ ಕೂಗುತ್ತಿದ್ದಂತೆ ನ್ಯಾಯಮೂರ್ತಿಗಳು ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ? ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಹೌದು ಎಂದು ಉತ್ತರಿಸಿ ತಮ್ಮ ವಾದವನ್ನು ಆರಂಭಿಸಲು ಮುಂದಾದರು.

ಇವರ ವಾದವನ್ನು ಅರ್ಧಕ್ಕೇ ತಡೆದ ನ್ಯಾಯಮೂರ್ತಿಗಳು, ಬೆಸ್ಕಾಂ ಅಧಿಕಾರಿಗಳು ದೂರು ಬಂದ ಪ್ರದೇಶಕ್ಕೆ ತ್ವರಿತವಾಗಿ ತೆರಳಿ ಸ್ಥಳ ಪರಿಶೀಲನೆ ಮಾಡುವುದಿಲ್ಲ. ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆದುಬಿಡುತ್ತಾರೆ. ಇವರ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು ಎಂದು ಕಿಡಿ ಕಾರಿದರು. ಪುಣ್ಯಕ್ಕೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರಿರುವ ಈ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದರು.

ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ನ್ಯಾಯಮೂರ್ತಿಗಳು ನಿರಾಕರಿಸಿ ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.

ಏನಿದು ಘಟನೆ?

ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ನಿವಾಸಿ 15ರ ವಯಸ್ಸಿನ ಪಾಂಡುರಂಗ 2020ರ ಅಕ್ಟೋಬರ್ 27ರಂದು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಹಸುವೊಂದು ಹೊಲಕ್ಕೆ ನುಗ್ಗುತ್ತಿದ್ದುದನ್ನು ತಡೆಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಆತನ ಕಾಲುಗಳಿಗೆ ವಿದ್ಯುತ್‌ ತಂತಿ ತಗುಲಿ ವಿದ್ಯುತ್‌ ಹರಿದಿತ್ತು. ಇದರಿಂದ ಆತನ ಎರಡೂ ಕಾಲುಗಳು ಮತ್ತು ಕೈಗಳಿಗೆ ಗಾಯಗಳಾಗಿದ್ದವು. ಪಾಂಡುರಂಗನ ಪೋಷಕರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ