ಬಯಲು ಶೌಚಾಲಯಕ್ಕೆ ಹೆದರಿ ಕನ್ನಡ ಶಾಲೆ ತೊರೆಯಲು ಮುಂದಾದ ವಿದ್ಯಾರ್ಥಿಗಳು; ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇದೆಂಥಾ ಅವಸ್ಥೆ!
ಕನ್ನಡ ಸುದ್ದಿ  /  ಕರ್ನಾಟಕ  /  ಬಯಲು ಶೌಚಾಲಯಕ್ಕೆ ಹೆದರಿ ಕನ್ನಡ ಶಾಲೆ ತೊರೆಯಲು ಮುಂದಾದ ವಿದ್ಯಾರ್ಥಿಗಳು; ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇದೆಂಥಾ ಅವಸ್ಥೆ!

ಬಯಲು ಶೌಚಾಲಯಕ್ಕೆ ಹೆದರಿ ಕನ್ನಡ ಶಾಲೆ ತೊರೆಯಲು ಮುಂದಾದ ವಿದ್ಯಾರ್ಥಿಗಳು; ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಇದೆಂಥಾ ಅವಸ್ಥೆ!

Toilet Facilities: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಮೈಸೂರಿನ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿನಿಯರು ಬಯಲು ಶೌಚಾಲಯಕ್ಕೆ ಹೆದರಿ ಶಾಲೆ ತೊರೆಯಲು ನಿರ್ಧರಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ

ಮೈಸೂರು: ಬಯಲು ಶೌಚಾಲಯಕ್ಕೆ ವಿದ್ಯಾರ್ಥಿಗಳು ಹೆದರಿ ಕನ್ನಡ ಶಾಲೆ ಬಿಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಹೈಟೆಕ್ ಶೌಚಾಲಯ ಕಟ್ಟುವ ನೆಪದಲ್ಲಿ ಅಧಿಕಾರಿಗಳು ಅನುದಾನವನ್ನೇ ತಿಂದು ತೇಗಿದ್ದಾರೆ ಎಂದು ಆರೋಪಿಸಿದ್ದಾರೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ.

ಈ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೂ 111 ವಿದ್ಯಾರ್ಥಿಗಳು ವಿದ್ಯಾಭ್ಯಾಸ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಪೈಕಿ 50ಕ್ಕೂ ಹೆಚ್ಚು ಬಾಲಕಿಯರೇ ಇದ್ದಾರೆ. ಆದರೆ ಶಿಕ್ಷಕಿಯರು, ಬಾಲಕಿಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ ಎಂಬುದು ವಿಪರ್ಯಾಸ. ಬಾಲಕಿಯರು, ಶಿಕ್ಷಕಿಯರು ಬಯಲು ಶೌಚವನ್ನೇ ಆವಲಂಬಿಸಬೇಕಾದ ಸ್ಥಿತಿ ಎದುರಾಗಿದೆ. ಶೌಚಾಲಯವಿಲ್ಲದಿರುವ ಕಾರಣ ಬಾಲಕಿಯರು ಕನ್ನಡ ಶಾಲೆ ತೊರೆಯಲು ಮುಂದಾಗಿದ್ದಾರೆ. 2020-21ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ 3.37 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ.

ಅನುದಾನ ಗುಳಂ ಎಂಬ ಆರೋಪ

ಹೈಟೆಕ್ ಶೌಚಾಲಯದ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ದೊಡ್ಡಕವಲಂದೆ ಗ್ರಾಮ ಪಂಚಾಯಿತಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನರೇಗ ಒಗ್ಗೂಡಿಸುವಿಕೆ ಯೋಜನೆ ಅಡಿಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವಂತೆ ಪಂಚಾಯಿತಿಗೆ ವಹಿಸಲಾಗಿತ್ತು. ಆದರೆ ಇನ್ನೂ, ಶೌಚಾಲಯ ನಿರ್ಮಾಣವೇ ಆಗಿಲ್ಲ. ಅನುದಾನ ದುರ್ಬಳಕೆ ಮಾಡಿಕೊಂಡು ಗುಳುಂ ಮಾಡಿದ್ದಾರೆ ಎಂಬ ಆರೋಪವಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದಿದ್ದರೂ ಕೂಡ ತಪ್ಪಿತಸ್ಥ ಪಿಡಿಒ ವಿರುದ್ಧ ಮಾತ್ರ ಶಿಸ್ತು ಕ್ರಮ ಆಗಿಲ್ಲ.

‘9 ಬಾರಿ ಅರ್ಜಿ ಸಲ್ಲಿಸಿದ್ದರೂ ಕ್ಯಾರೆ ಎನ್ನುತ್ತಿಲ್ಲ’

ಶಾಲಾ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಪುಟ್ಟ ಬಾಲಕಿಯರು, ಶಿಕ್ಷಕಿಯರು ಬಯಲು ಶೌಚಾಲಯವನ್ನು ಅವಲಂಬಿತವಾಗಿರುವ ದೃಶ್ಯ ಮನ ಕಲಕುವಂತಿದೆ. ಶಾಲೆಯ ಮುಖ್ಯ ಶಿಕ್ಷಕಿ‌ ಶಿಸಿಲಿಯಾ ಮೇರಿ ಅವರು ಶೌಚಾಲಯಕ್ಕಾಗಿ ಒಂಬತ್ತು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಹೈಟೆಕ್ ಶೌಚಾಲಯದ ಹೆಸರಿನಲ್ಲಿ ಅನುದಾನವನ್ನು ತಿಂದು ತೇಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.

Whats_app_banner