Bengaluru News: ಬೆಂಗಳೂರು ಫುಟ್‌ಪಾತ್ ಮೇಲಿದ್ದ ತಂತಿ ಮೆಟ್ಟಿದ 23ರ ಯುವತಿ, 9 ತಿಂಗಳ ಮಗು ಸಾವು, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್
Nov 20, 2023 12:01 PM IST
ಬೆಂಗಳೂರು ಫುಟ್‌ಪಾತ್ ಮೇಲಿದ್ದ ತಂತಿ ಮೆಟ್ಟಿದ 23ರ ಯುವತಿ, 9 ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ. ಬೆಸ್ಕಾಂನ 5 ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ 23 ವರ್ಷದ ಯುವತಿ ಮತ್ತು ಆಕೆಯ 9 ತಿಂಗಳ ಹೆಣ್ಣುಮಗು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಭಾನುವಾರ ನಡೆದಿದೆ. ಈ ದುರಂತಕ್ಕೆ ಸಂಬಂಧಿಸಿ ಬೆಸ್ಕಾಂನ 5 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಅತ್ಯಂತ ದುರದೃಷ್ಟಕರ ಘಟನೆಯೊಂದರಲ್ಲಿ 23 ವರ್ಷದ ತಾಯಿ ಮತ್ತು 9 ತಿಂಗಳ ಹೆಣ್ಣು ಮಗು ರಸ್ತೆ ಮೇಲಿದ್ದ ತಂತಿ ಮೆಟ್ಟಿದ ಕಾರಣ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆ. ಕರ್ನಾಟಕದ ಇಂಧನ ಸಚಿವ ಕೆಜೆ ಜಾರ್ಜ್ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಸಮೀಪ ಫುಟ್‌ಪಾತ್ ಮೇಲೆ ಈ ತಾಯಿ ಮಗು ಭಾನುವಾರ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ಸೌಂದರ್ಯ ಮತ್ತು ಅವರ ಮಗಳು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ದುರಂತ
ಎಕೆಜಿ ಕಾಲನಿಯ ನಿವಾಸಿ, ಸೌಂದರ್ಯ ಮತ್ತು ಅವರ ಮಗು ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾಗ ಅವರ ಅರಿವಿಗೆ ಬಾರದೆ ಪಾದಚಾರಿ ದಾರಿಯಲ್ಲಿದ್ದ ತಂತಿಯನ್ನು ಮೆಟ್ಟಿದ್ದರು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದು ಅವರ ಅರಿವಿಗೆ ಬಂದಿರಲಿಲ್ಲ. ಕೂಡಲೇ ಅವರಿಗೆ ವಿದ್ಯುತ್ ಆಘಾತವಾಗಿದ್ದು, ಮಗುವಿನ ಸಹಿತ ಅಲ್ಲೇ ಮೃತಪಟ್ಟರು.
“ಸೌಂದರ್ಯ ಅವರು ಲೈವ್ ವೈರ್ ಅನ್ನು ಆಪ್ಟಿಕಲ್ ಫೈಬರ್ ಕೇಬಲ್ ಎಂದು ಭಾವಿಸಿ ಅದರ ಮೇಲೆ ಹೆಜ್ಜೆ ಹಾಕುತ್ತಿದ್ದರು. ತಾಯಿ ಮತ್ತು ಮಗಳು ಇಬ್ಬರೂ ವಿದ್ಯುತ್ ಆಘಾತವಾಗಿ ಅಲ್ಲೇ ಸಾವನ್ನಪ್ಪಿದ್ದಾರೆ. ಜತೆಗೇ ಇದ್ದ ಸೌಂದರ್ಯ ಅವರ ಪತಿ [ಕುಮಾರ್] ವಿದ್ಯುತ್ ಆಘಾತದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಂಪತಿ ತಮಿಳುನಾಡಿನ ಸೇಲಂನಲ್ಲಿರುವ ತಮ್ಮ ಊರಿನಲ್ಲಿ ದೀಪಾವಳಿ ಆಚರಿಸಿ ಬಸ್ ಮೂಲಕ ಬೆಂಗಳೂರಿಗೆ ಹಿಂತಿರುಗಿದ್ದರು. ಹೋಪ್ ಫಾರ್ಮ್ ಜಂಕ್ಷನ್ ಬಳಿ ಬಸ್ ಇಳಿದರು. ಮಹಿಳೆ ತನ್ನ ಮಗಳು ಮತ್ತು ಚೀಲವನ್ನು ಹೊತ್ತೊಯ್ಯುತ್ತಿದ್ದರೆ, ಆಕೆಯ ಪತಿ ಟ್ರಾಲಿಯನ್ನು ಹೊತ್ತೊಯ್ಯುತ್ತಿದ್ದರು. ಕುಮಾರ್ ಅವರು ಪತ್ನಿ ಮತ್ತು ಮಗಳನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಆಘಾತಕ್ಕೊಳಗಾಗಿ ಅಸಹಾಯಕರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ, ಬೆಸ್ಕಾಂನ 3 ಸಿಬ್ಬಂದಿ ಅಮಾನತು
ಭಯಾನಕ ದುರಂತದ ಬೆನ್ನಲ್ಲೆ ಇಂಧನ ಸಚಿವ ಕೆಜೆ ಜಾರ್ಜ್ ಅವರು ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಅಲ್ಲದೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಬೆಸ್ಕಾಂ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುುವುದಾಗಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಸ್ಪರ್ಶದಿಂದ ಮಹಿಳೆ ಮತ್ತು ಮಗು ಸಾವನ್ನಪ್ಪಿದ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಈ ಕುರಿತು ನಾವು ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ವರದಿಗಾಗಿ ಕಾಯುತ್ತಿದ್ದೇವೆ. ಕರ್ತವ್ಯ ಲೋಪವೆಸಗಿದ ಲೈನ್ ಮ್ಯಾನ್, ಎಇ ಹಾಗೂ ಎಇಇಯನ್ನು ಅಮಾನತು ಮಾಡಲಾಗಿದೆ. ಈ ಅಪಘಾತಕ್ಕೆ ಕಾರಣರಾದ ಬೇರೆಯವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು, ಇದರಿಂದ ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸುವುದಿಲ್ಲ ಎಂದು ಸಚಿವ ಕೆಜೆ ಜಾರ್ಜ್ ಟ್ವೀಟ್ ಮಾಡಿದ್ದಾರೆ.
ಬೆಸ್ಕಾಂನ 5 ಸಿಬ್ಬಂದಿ ವಿರುದ್ಧ ಪೊಲೀಸ್ ಕೇಸ್
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ)ನ ಮೂರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 304 ಎ ಅಡಿಯಲ್ಲಿ ಸಾವಿಗೆ ಕಾರಣವಾದ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) (ವೈಟ್‌ಫೀಲ್ಡ್) ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಕಾರ್ಯಪಾಲಕ ಎಂಜಿನಿಯರ್ ಶ್ರೀರಾಮ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಮಣಿ, ಸಹಾಯಕ ಎಂಜಿನಿಯರ್ ಚೇತನ್ ಮತ್ತು ಸಿಬ್ಬಂದಿ ರಾಜಣ್ಣ, ಮಂಜು ಸೇರಿದಂತೆ ವೈಟ್‌ಫೀಲ್ಡ್ ಉಪವಿಭಾಗದ ಬೆಸ್ಕಾಂನ ಐವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.