ವಿವಿಧ ಸಂಘಟನೆಗಳಿಂದ ಭಾರಿ ವಿರೋಧ; ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಆಮಂತ್ರಣ ರದ್ದು
Nov 22, 2023 06:45 PM IST
ಕಂಬಳಕ್ಕೆ ಬ್ರಿಜ್ ಭೂಷಣ್ ಆಮಂತ್ರಣ ರದ್ದು
- Kambala sports event in Bangalore: ನವೆಂಬರ್ 25 ಮತ್ತು 26ರಂದು ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಕಂಬಳಕ್ಕೆ ಆಹ್ವಾನ ನೀಡಲಾಗಿದ್ದ ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹೆಸರನ್ನು ಈಗ ಕೈಬಿಡಲಾಗಿದೆ. ಅವರ ಆಹ್ವಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಕರಾವಳಿ ಮೂಲದ ಸಾಂಪ್ರದಾಯಿಕ ಕ್ರೀಡೆ ಕಂಬಳ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಬೆಂಗಳೂರು ಕಂಬಳಕ್ಕೆ ಮುಖ್ಯ ಅತಿಥಿಯಾಗಿ ಬರಬೇಕಿದ್ದ ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಮಂತ್ರಣ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: Bengaluru Kambala: ಮೊಟ್ಟ ಮೊದಲ ಬೆಂಗಳೂರು ಕಂಬಳಕ್ಕೆ ದಿನಗಣನೆ: ಘಟ್ಟ ಹತ್ತಲಿವೆ ಓಟದ 300 ಕೋಣಗಳು
ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಯೋಜಕರು ಆಹ್ವಾನಿಸಿ ಆಹ್ವಾನ ಪತ್ರಿಕೆ ಮುದ್ರಿಸಿದ್ದರು. ಬ್ರಿಜ್‌ಭೂಷಣ್ ಭಾಗವಹಿಸಲು ಭಾರಿ ವಿರೋಧ ವ್ಯಕ್ತವಾಯಿತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಕಂಬಳದಲ್ಲಿ ಭಾಗವಹಿಸಬಾರದು ಎಂದು ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಭಾರಿ ವಿರೋಧ
ಒಲಿಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿರುವ ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಿಶ್ವಕಪ್ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವವರಿಗೆ ಸಾಂಪ್ರದಾಯಿಕ ಕಂಬಳಕ್ಕೆ ಆಹ್ವಾನ ನೀಡಿರುವುದು ಎಷ್ಟು ಸರಿ ಎಂದು ಟೀಕೆ ವ್ಯಕ್ತವಾಗಿತ್ತು.
ಗಣ್ಯರು ಭಾಗಿ
25ರಂದು ನಡೆಯುವ ಕುಸ್ತಿಪಟುಗಳ ಅಭಿನಂದನಾ ಸಮಾರಂಭಕ್ಕೆ ಬ್ರಿಜ್ಭೂಷಣ್ರನ್ನು ಆಹ್ವಾನಿಸಲಾಗಿತ್ತು. ಈಗ ಅವರಿಗೆ ನೀಡಿದ್ದ ಆಹ್ವಾನವನ್ನು ಕಂಬಳ ಆಯೋಜಕರು ರದ್ದುಗೊಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಯಾಂಡರ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬಿಜೆಪಿ ಪ್ರಮುಖ ನಾಯಕ ಅರವಿಂದ ಲಿಂಬಾವಳಿ ಮತ್ತು ಹಲವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ನ.25ರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಸಂಜೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಶಾಸಕ ಅಶೋಕ್ ರೈ ಸ್ಪಷ್ಟನೆ
ಈ ಬಗ್ಗೆ ಪುತ್ತೂರು ಶಾಸಕ ಮತ್ತು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಸ್ಪಷ್ಟನೆ ನೀಡಿದ್ದು, ಬ್ರಿಜ್‌ಭೂಷಣ್ ಕಾರ್ಯಕ್ರಮಕ್ಕೆ ಬರಲ್ಲ ಎಂದು ತಿಳಿಸಿದ್ದಾರೆ. ಕಂಬಳ ಎಂಬುದು ಕ್ರೀಡೆಯಷ್ಟೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಬ್ರಿಜ್ ಭೂಷಣ್ ಸಿಂಗ್ ಅವರು ಈ ಹಿಂದೆ ಕುಡುಬಿ ಮತ್ತು ಸಿದ್ದಿ ಜನಾಂಗಕ್ಕೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಹೀಗಾಗಿ ಸಿದ್ದಿ ಜನಾಂಗದವರ ಮನವಿ ಮೇರೆಗೆ ಆಹ್ವಾನ ನೀಡಲಾಗಿತ್ತು. ಆದರೆ ಬ್ರಿಜ್‌ಭೂಷಣ್ ಅವರೇ ಎರಡು ದಿನಗಳ ಹಿಂದೆ ಕಾರ್ಯಕ್ರಮಕ್ಕೆ ಬರುವುದಿಲ್ಲ ಮಾಹಿತಿ ನೀಡಿದ್ದಾರೆ ಎಂದು ಅಶೋಕ್ ರೈ ತಿಳಿಸಿದರು.
7 ಲಕ್ಷ ಜನ ಭಾಗವಹಿಸುವ ನಿರೀಕ್ಷೆ
ಇದೀಗ ಅಂತಿಮ ಕ್ಷಣದಲ್ಲಿ ಆಹ್ವಾನ ಪತ್ರಿಕೆ ಬದಲಿಸಲಾಗಿದೆ. ಆ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ ಎಂದು ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದರು. ಸದ್ಯ ಈ ಕಾರ್ಯಕ್ರಮಕ್ಕೆ 7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷಗಳು ಸೇರಿ ಒಟ್ಟಾಗಿಯೇ ನಡೆಸಲಾಗುತ್ತಿದೆ. ಇಲ್ಲ ಸಲ್ಲದೆ ಸುದ್ದಿಗಳನ್ನು ಹರಡುವುದು ಸರಿಯಲ್ಲ ಎಂದು ಹೇಳಿದ್ದಾರೆ.