Prajwal Revanna: ಅತ್ಯಾಚಾರ ಆರೋಪ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್
Oct 21, 2024 04:08 PM IST
ಅತ್ಯಾಚಾರ ಆರೋಪ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರ ಪುತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಅತ್ಯಾಚಾರ ಆರೋಪ ಕೇಸ್‌ನಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು (ಅಕ್ಟೋಬರ್ 21) ತಿರಸ್ಕರಿಸಿದೆ. ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಮತ್ತು ಅಶ್ಲೀಲ ವಿಡಿಯೋಗಳ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಇದರೊಂದಿಗೆ ಮೂರು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ.
ಜಾಮೀನು ಅರ್ಜಿ ವಿಚಾರಣೆ- ಏನೇನು ನಡೆಯಿತು
ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನುಗಳ ಅರ್ಜಿ ವಿಚಾರಣೆ ನಡೆದಾಗ, ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಆರೋಪಿ ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದರು.
ಪ್ರಕರಣ 1- ಸಾಕ್ಷ್ಯವಾಗಿ ದಾಖಲಿಸಿರುವ ವಿಡಿಯೋದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಇರುವುದನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಿಲ್ಲ. ಸಂತ್ರಸ್ತೆ ನೀಡಿದ ದೂರಿನಲ್ಲಿ ವಿಶ್ವಾಸಾರ್ಹ ಎಂಬುದನ್ನು ದೃಢೀಕರಿಸುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಆಕ್ಷೇಪಣೆಗಳಿವೆ. ಸಂತ್ರಸ್ತೆಯು ಲೋಕಸಭಾ ಚುನಾವಣೆ ಮತದಾನ ದಿನಕ್ಕೆ ಕೆಲವು ದಿನ ಮೊದಲು ವಿದ್ಯುನ್ಮಾನ ಮಾಧ್ಯಮಕ್ಕೆ ಸಂದರ್ಶನ ನೀಡಿದಾಗ ಅಲ್ಲಿ ಆರೋಪಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿರಲಿಲ್ಲ. ಅತ್ಯಾಚಾರ ಕೇಸ್ ಸಂಬಂಧಿಸಿ ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ದಾಖಲಿಸುವಾಗ ಅಲ್ಲೂ ಅತ್ಯಾಚಾರದ ಆರೋಪ ಮಾಡಿಲ್ಲ. ಅದೂ ಅಲ್ಲದೆ 5 ವರ್ಷ ತಡವಾಗಿ ದೂರು ದಾಖಲಿಸಿದ್ದಕ್ಕೆ ವಿವರಣೆ ಕೂಡ ಕೊಟ್ಟಿಲ್ಲ. ಸಂತ್ರಸ್ತೆಯ ಪುತ್ರಿಯ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಿದ್ದು, ಆಕೆಯ ಹೇಳಿಕೆಗಳಲ್ಲೂ ವ್ಯತ್ಯಾಸವಿದೆ. ಒಂದೊಮ್ಮೆ ಏನಾದರೂ ನಡೆದಿದ್ದರೂ ಅದು ಪರಸ್ಪರ ಒಪ್ಪಿಕೊಂಡೇ ಆಗಿರುವಂಥದ್ದು ಎಂದು ವಾದ ಮಂಡಿಸಿದರು.
ಪ್ರಕರಣ 2- ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೂಡ ಅತ್ಯಾಚಾರ ಆರೋಪ ಮಾಡಿದ್ದು, ದೂರು ನೀಡುವುದಕ್ಕೂ ಮೊದಲು ಅವರು ಲೋಕಸಭಾ ಚುನಾವಣಾ ಸಮಾವೇಶದಲ್ಲಿ ಆರೋಪಿ ಜೊತೆಗೆ ಭಾಗವಹಿಸಿದ್ದರು. ಇದರಲ್ಲೂ ಆರೋಪ ದೃಢೀಕರಿಸುವ ಸಾಕ್ಷ್ಯ ಒದಗಿಸಿದ್ದರೂ ಅದರಲ್ಲಿ ಸ್ಪಷ್ಟತೆ ಇಲ್ಲ ಎಂದು ವಕೀಲರು ಪ್ರತಿಪಾದಿಸಿದರು.
ಪ್ರಕರಣ 3 - ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಯಾವುದೇ ಪಾತ್ರ ಇಲ್ಲ ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದರು.
ಮೇ 30 ರಿಂದ ಜೈಲಲ್ಲಿದ್ದಾರೆ ಪ್ರಜ್ವಲ್ ರೇವಣ್ಣ
ವಿವಿಧ ಕೇಸ್‌ಗೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅವರು ಮೇ 30 ರಿಂದ ಜೈಲಿನಲ್ಲಿದ್ದಾರೆ. ನ್ಯಾಯದಾನದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಯಾವುದೇ ಷರತ್ತು ವಿಧಿಸಿದರೂ ಅದಕ್ಕೆ ಪ್ರಜ್ವಲ್ ರೇವಣ್ಣ ತಲೆಬಾಗುತ್ತಾರೆ. ಇದನ್ನೆಲ್ಲ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ ರವಿವರ್ಮ ಕುಮಾರ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆರೋಪಿಯ ತಂದೆ ಶಾಸಕ ಹೆಚ್.ಡಿ. ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಶುರುವಾದ ಕೂಡಲೇ ಪ್ರಜ್ವಲ್ ವಿರುದ್ಧವೂ ಅತ್ಯಾಚಾರ ಆರೋಪ ಬಂದಿದೆ. ದೂರು ದಾಖಲಾದ ಕೂಡಲೇ ಪ್ರಜ್ವಲ್ ರೇವಣ್ಣ ದೇಶ ತೊರೆದಿದ್ದರು. ಸಾಕ್ಷ್ಯಗಳೆಲ್ಲವೂ ಹೊಂದಾಣಿಕೆಯಾಗುತ್ತಿದೆ ಎಂದು ವಾದ ಮಂಡಿಸಿದ್ದರು.