logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ, ಆದೇಶವಷ್ಟೇ ಬಾಕಿ

ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ, ಆದೇಶವಷ್ಟೇ ಬಾಕಿ

Prasanna Kumar P N HT Kannada

Sep 19, 2024 09:46 PM IST

google News

ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ

    • ಬಿಜೆಪಿ ಶಾಸಕ ಮುನಿರತ್ನಗೆ ಷರತ್ತುಬದ್ದ ಜಾಮೀನು‌ ನೀಡಲಾಗಿದೆ. ಸೆಪ್ಟೆಂಬರ್​​ 20ರಂದು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಇದರ ಜೊತೆಗೆ ಪ್ರಜ್ವಲ್‌ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣದ ವಾದ ಪ್ರತಿವಾದ ಮುಕ್ತಾಯವಾಗಿದ್ದು ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. (ವರದಿ-ಎಚ್. ಮಾರುತಿ)
ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ
ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ

ಬೆಂಗಳೂರು: ಮಾಜಿ ಬಿಬಿಎಂಪಿ ಸದಸ್ಯ ವೇಲು ನಾಯ್ಕರ್ ದಾಖಲಿಸಿದ್ದ ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಮುಖಂಡ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಷರತ್ತುಬದ್ದ ಜಾಮೀನು‌ ದೊರೆತಿದೆ. ಜಾಮೀನು ಆದೇಶವನ್ನು ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಗುರುವಾರ (ಸೆಪ್ಟೆಂಬರ್​ 19) ಆದೇಶವನ್ನು ಪ್ರಕಟಿಸಿದರು. 

2 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು. ಸಾಕ್ಷ್ಯಾಧಾರಗಳನ್ನು ನಾಶಪಡಿಸಕೂಡದು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿ ಮುನಿರತ್ನ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಸಮಯದ ಅಭಾವದಿಂದ ನ್ಯಾಯಲಯದ ಷರತ್ತುಗಳನ್ನು ಪೂರೈಸಲು ಗುರುವಾರ ಸಾಧ್ಯವಾಗಿಲ್ಲ. ಆದ್ದರಿಂದ ಶುಕ್ರವಾರ ನ್ಯಾಯಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲಿದ್ದು, ನಾಳೆಯೇ (ಸೆಪ್ಟೆಂಬರ್​ 20) ಜೈಲಿನಿಂದ ಮುನಿರತ್ನ ಬಿಡುಗಡೆಯಾಗಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಬಿಜೆಪಿ ಮುಖಂಡ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ಪರಿಶಿಷ್ಟ ಜಾತಿ ನಿಂದನೆ ಆರೋಪದಡಿ ಮಾಜಿ ಬಿಬಿಎಂಪಿ ಸದಸ್ಯ ವೇಲುನಾಯ್ಕರ್ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶವನ್ನು ನ್ಯಾಯಾಲಯ ಗುರುವಾರಕ್ಕೆ ಕಾಯ್ದಿರಿಸಿತ್ತು. 

ಶಾಸಕ ಮುನಿರತ್ನ ಪರವಾಗಿ ಹೈಕೋರ್ಟ್‌ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಗೂ ಪ್ರಾಸಿಕ್ಯೂಷನ್ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಿ.ಎಸ್.ಪ್ರದೀಪ್ ವಾದ ಮಂಡಿಸಿದರು. 

ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣ: ಆದೇಶ ಕಾಯ್ದಿರಿಸಿದ ಕೋರ್ಟ್

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳ ಕುರಿತಾದ ವಾದ ಪ್ರತಿವಾದ ಗುರುವಾರಕ್ಕೆ ಪೂರ್ಣಗೊಂಡಿದ್ದು ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ. ಹೊಳೆನರಸೀಪುರ ಟೌನ್ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಸಾಮಾನ್ಯ ಜಾಮೀನು ಅರ್ಜಿ ಮತ್ತು ಇತರ 2 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.'

ಪ್ರಜ್ವಲ್‌ ರೇವಣ್ಣ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ ಮೊದಲ ಪ್ರಕರಣದಲ್ಲಿ 6 ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಎರಡನೇ ಪ್ರಕರಣದಲ್ಲಿ 5 ವರ್ಷಗಳ ನಂತರ ದೂರು ನೀಡಿದ್ದಾರೆ. ಮೂರನೇ ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣ ನಡೆದಿಲ್ಲ. ಬದಲಾಗಿ ವಿಡಿಯೋ ಪೆನ್ ಡ್ರೈವ್​​ಗಳನ್ನು ಹಂಚಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಇದರಲ್ಲೂ ನಮ್ಮ ಕಕ್ಷಿದಾರರನ್ನು ಆರೋಪಿಯನ್ನಾಗಿ ಮಾಡಲಾಗಿದೆ.

ಪ್ರಜ್ವಲ್ ಅವರು ಮೇ 30 ರಿಂದ ಜೈಲಿನಲ್ಲಿದ್ದಾರೆ. ಅವರಿಗೆ ನಷ್ಟ ಉಂಟಾಗಿದ್ದು, ಇಡೀ ಕುಟುಂಬವನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಾದಿಸಿದ್ದರು. ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ದೂರು ದಾಖಲಾದ ನಂತರ ಆರೋಪಿ ವಿದೇಶಕ್ಕೆ ಹಾರಿದ್ದರು. ಒಂದು ತಿಂಗಳ ನಂತರ ಹಿಂತಿರುಗಿದ್ದಾರೆ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ