ಮಹಾಲಕ್ಷ್ಮೀ ನನ್ನನ್ನೇ ಕೊಂದು ಸೂಟ್ಕೇಸ್ನಲ್ಲಿ ತುಂಬಲು ಯತ್ನಿಸಿದ್ಲು; ಆರೋಪಿ ಡೆತ್ನೋಟ್ನಲ್ಲಿ ಮತ್ತಷ್ಟು ಮಾಹಿತಿ ಬಹಿರಂಗ
Oct 12, 2024 07:58 AM IST
ಮಹಾಲಕ್ಷ್ಮೀ
- Mahalakshmi Murder Case: ಮಹಾಲಕ್ಷ್ಮೀಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಹೋಗಿದ್ದ ಘಟನೆ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಇದಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದೆ.
ಬೆಂಗಳೂರು: ನಗರದಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಆರೋಪಿಯು ಅಚ್ಚರಿಯ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಕೊಲೆಗೈದು ಒಡಿಶಾಗೆ ಓಡಿ ಹೋಗಿ ನೇಣಿಗೆ ಶರಣಾಗಿದ್ದ ಮುಕ್ತಿ ರಂಜನ್ ರಾಯ್, ತನ್ನ ಡೆತ್ ನೋಟ್ನಲ್ಲಿ ಬರೆದಿಟ್ಟಿದ್ದ ಅಚ್ಚರಿ ಅಂಶವೊಂದು ಬೆಳಕಿಗೆ ಬಂದಿದೆ. ‘ನಾನು ಅವಳನ್ನು ಕೊಲ್ಲದಿದ್ದರೆ, ಮಹಾಲಕ್ಷ್ಮೀ ನನ್ನನ್ನೇ ಕೊಲ್ಲುತ್ತಿದ್ದಳು’ ಎಂದು ಡೆತ್ನೋಟ್ನಲ್ಲಿರುವ ಅಂಶ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಹೋಗಿದ್ದ ಘಟನೆ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು.
ಈ ಬಗ್ಗೆ ವಿಜಯ ಕರ್ನಾಟಕದ ವರದಿ ಮಾಡಿದ್ದು, ಮಹಾಲಕ್ಷ್ಮೀ ತನ್ನನ್ನು ಕೊಲೆಗೈದು ಸೂಟ್ಕೇಸ್ನಲ್ಲಿ ತುಂಬಲು ಯತ್ನಿಸಿದ್ದಳು. ನನ್ನ ಕೊಂದು ದೇಹವನ್ನು ಹೊತ್ತೊಯ್ಯಲು ಕಪ್ಪು ಸೂಟ್ಕೇಸ್ ಖರೀದಿಸಿದ್ದಳು. ನನ್ನ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಸೂಟ್ಕೇಸ್ನಲ್ಲಿ ತುಂಬಿ ಬಿಸಾಡುವುದು ಅವಳ ಉದ್ದೇಶವಾಗಿತ್ತು. ನಾನು ಅವಳನ್ನು ಕೊಲ್ಲದಿದ್ದರೆ, ಮಹಾಲಕ್ಷ್ಮೀಯೇ ನನ್ನನ್ನು ಕೊಂದು ನನ್ನ ದೇಹವನ್ನು ಎಸೆಯುತ್ತಿದ್ದಳು. ಹೀಗಾಗಿ, ಆತ್ಮರಕ್ಷಣೆಗಾಗಿ ನಾನು ಅವಳನ್ನು ಕೊಂದೆ ಎಂದು ಡೆತ್ ನೋಟ್ನಲ್ಲಿ ಮುಕ್ತಿ ರಂಜನ್ ರಾಯ್ ಹೇಳಿದ್ದಾನೆ. ತನಿಖೆಯ ವೇಳೆ ಪೊಲೀಸರು ಆಕೆ ಮನೆಯೊಳಗಿನ ಫ್ರಿಜ್ ಬಳಿಯಿದ್ದ ಕಪ್ಪು ಸೂಟ್ಕೇಸ್ ಅನ್ನೂ ವಶಕ್ಕೆ ಪಡೆದರು.
ಡೆತ್ ನೋಟ್ ಒರಿಯಾ ಭಾಷೆಯಲ್ಲಿ ಬರೆಯಲಾಗಿತ್ತು. ಇದೀಗ ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ಅದರಲ್ಲಿ ಬರೆದಿದ್ದ ವಿಷಯಗಳ ಕುರಿತು ಈಗ ಪೊಲೀಸರು ರಿವೀಲ್ ಮಾಡಿದ್ದಾರೆ. ಕೊಲೆಗೂ ಮುನ್ನ ನಡೆದಿದ್ದ ಜಗಳ ನಡೆದಿತ್ತು. ಆದರೆ ಕೊಲೆಗೆ ಅದೊಂದೇ ಕಾರಣವಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಹಾಲಕ್ಷ್ಮೀ ಬೇಡಿಕೆಗಳು ದಿನದಿಂದ ಹೆಚ್ಚಾಗುತ್ತಿದ್ದವು. ನಾನು ಚಿನ್ನದ ಸರ ಕೊಡಿಸಿದ್ದರ ಜೊತೆಗೆ 7 ಲಕ್ಷ ಕೂಡ ನೀಡಿದ್ದೆ. ಇಷ್ಟಾದರೂ ನನ್ನನ್ನು ತುಂಬಾ ಹಿಂಸೆ ಮಾಡುತ್ತಿದ್ದಳು. ಹೊಡೆಯುತ್ತಿದ್ದಳು. ಜೊತೆಗೆ ನನ್ನನ್ನೇ ಸಾಯಿಸಲು ಮುಂದಾಗಿದ್ದಕ್ಕೆ ಆತ್ಮ ರಕ್ಷಣೆಗೆ ನಾನು ಆಕೆಯನ್ನು ಕೊಲ್ಲುವುದು ಅನಿವಾರ್ಯವಾಗಿತ್ತು ಎಂದು ಡೆತ್ನೋಟ್ನಲ್ಲಿ ಬರೆದಿದ್ದಾನೆ.
ಮಹಾಲಕ್ಷ್ಮೀ ಕೊಲೆ ಪ್ರಕರಣದ ವಿವರ
29 ವರ್ಷದ ಸೇಲ್ಸ್ ವುಮನ್ ಮಹಾಲಕ್ಷ್ಮೀ ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ನಾಪತ್ತೆಯಾಗಿದ್ದರು. ಆದರೆ ಮಹಾಲಕ್ಷ್ಮೀ ಮನೆಯಲ್ಲಿ ದುರ್ವಾಸನೆ ಬೀರಿದ ಕಾರಣ ಮಾಲೀಕರಿಗೆ ದೂರು ನೀಡಿದ್ದರು. ಮನೆ ಮಾಲೀಕರು ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅದರಂತೆ ಸೆಪ್ಟೆಂಬರ್ 21ರಂದು ತಾಯಿ ಮತ್ತು ಗಂಡ (ಪತಿಯಿಂದ ದೂರವಿದ್ದಳು) ಮನೆಗೆ ಬಂದು ಫ್ರಿಡ್ಜ್ ತೆಗೆದು ನೋಡಿದಾಗ 59 ತುಂಡುಗಳಾಗಿ ಕತ್ತರಿಸಿದ ತಮ್ಮ ಮಗಳ ಮೃತದೇಹ ಕಾಣಿಸಿಕೊಂಡಿತು. ಹಾಗಾಗಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡರು. ಆರೋಪಿ ಬಂಧನಕ್ಕೆ 8 ತಂಡಗಳನ್ನು ರಚಿಸಲಾಗಿತ್ತು. ಕೆಲವು ದಿನಗಳ ನಂತರ ಆರೋಪಿಯನ್ನು ಪತ್ತೆ ಹಚ್ಚಲಾಗಿತ್ತು. ಆತನ ಬಂಧಿಸಲು ಪೊಲೀಸರು ಒಡಿಶಾಕ್ಕೆ ಹೊರಟರು.
ಕೆಲವು ದಿನಗಳ ನಂತರ, ಆರೋಪಿ ಮುಕ್ತಿರಂಜನ್ ರಾಯ್ (31) ಎಂದು ಒಡಿಶಾದ ಭದ್ರಾಕ್ ಜಿಲ್ಲೆಯ ಧುಸುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದ. ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾದ ಆತ್ಮಹತ್ಯೆ ಪತ್ರದಲ್ಲಿ ತನ್ನ ಸಂಗಾತಿ ಮಹಾಲಕ್ಷ್ಮಿಯ ಕೊಲೆಯ ತಪ್ಪೊಪ್ಪಿಗೆಯನ್ನು ಒಳಗೊಂಡಿದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಇಬ್ಬರು ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹವು ಅಂತಿಮವಾಗಿ ಪ್ರಣಯ ಸಂಬಂಧಕ್ಕೆ ತಿರುಗಿತು. ಮಹಾಲಕ್ಷ್ಮಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದು ಆಗಾಗ್ಗೆ ಗಲಾಟೆಗಳಿಗೆ ಕಾರಣವಾಗಿದ್ದವು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.