ಬೆಂಗಳೂರು ಆಟೋ ಪ್ರಯಾಣ ಇನ್ನಷ್ಟು ಸುಲಭ; 'ನಮ್ಮ ಕೋಡ್' ಮೂಲಕ ಒಂದೇ ದಿನ ಹಲವು ಟ್ರಿಪ್ ಅವಕಾಶ, ಬಳಸೋದು ಹೇಗೆ ನೋಡಿ
Nov 02, 2024 03:00 PM IST
ಬೆಂಗಳೂರು ಆಟೋ ಪ್ರಯಾಣ ಇನ್ನಷ್ಟು ಸುಲಭ; 'ನಮ್ಮ ಕೋಡ್' ಮೂಲಕ ಒಂದೇ ದಿನ ಹಲವು ಟ್ರಿಪ್ ಅವಕಾಶ
- ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ನಗರ ಮೀಟರ್ ಆಟೋರಿಕ್ಷಾ ಆ್ಯಪ್ ಮೂಲಕ ಆ್ಯಪ್ ಮೂಲಕ ನಮ್ಮ ಕೋಡ್ ವೈಶಿಷ್ಟ್ಯ ಪರಿಚಯಿಸಲಾಗಿದ್ದು, ಬಳಕೆದಾರರು ಒಂದೇ ದಿನ ಹಲವು ಟ್ರಿಪ್ ಮಾಡಲು ಒಂದೇ ಕೋಡ್ ಬಳಸಬಹುದಾಗಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಾವಿರಾರು ಆಟೋ ರಿಕ್ಷಾಗಳಿವೆ. ನಗರದಲ್ಲಿ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗಿಸುವ ನಿಟ್ಟಿನಲ್ಲಿ ನಗರ ಮೀಟರ್ ಆಟೋರಿಕ್ಷಾ ಆ್ಯಪ್ ಬಳಕೆಯಲ್ಲಿದೆ. ಈ ಅಪ್ಲಿಕೇಶನ್‌ನಲ್ಲಿ ಇದೀಗ'ನಮ್ಮ ಕೋಡ್' ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಆಟೋರಿಕ್ಷಾ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈ ಹೊಸ ವೈಶಿಷ್ಟ್ಯ ಘೋಷಣೆಯಾಗಿದ್ದು, ಪ್ರಯಾಣಿಕರು ಇಡೀ ದಿನ ಒಂದೇ ಕೋಡ್‌ನೊಂದಿಗೆ ಹಲವು ಟ್ರಿಪ್ ಮಾಡಬಹುದು. ಮರುಬಳಕೆ ಮಾಡಬಹುದಾದ ಕೋಡ್‌ನೊಂದಿಗೆ ಒಂದೇ ದಿನ ಹಲವು ಬಾರಿ ರಿಕ್ಷಾದಲ್ಲಿ ಪ್ರಯಾಣಿಸುವುದು ಮತ್ತಷ್ಟು ಸರಳವಾಗುತ್ತದೆ.
ಸುದ್ದಿಸಂಸ್ಥೆ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಈ ಹಿಂದೆ ನಗರ ಮೀಟರ್ ಆ್ಯಪ್ ಪ್ರತಿ ಟ್ರಿಪ್‌ಗೆ ಹೊಸ ಕೋಡ್ ನೀಡುತ್ತಿತ್ತು. ಈಗ ಹಾಗಿಲ್ಲ. ಒಂದು ಕೋಡ್‌ನೊಂದಿಗೆ ಬಳಕೆದಾರರು ಆ ದಿನ ಮಧ್ಯರಾತ್ರಿಯವರೆಗೆ ಮಾನ್ಯವಾಗಿರುವ ನಾಲ್ಕು ಅಂಕಿಯ ಕೋಡ್ ಸ್ವೀಕರಿಸುತ್ತಾರೆ. ಹೀಗಾಗಿ ಒಂದು ಬಾರಿ ಕೋಡ್ ನಮೂದಿಸಿದರೆ, ಅವರ ವಿವರಗಳನ್ನು ಮತ್ತೆ ನಮೂದಿಸುವ ಅಗತ್ಯ ಇರುವುದಿಲ್ಲ. ಅದರೊಂದಿಗೆ ಆ ದಿನ ವಿವಿಧ ಸ್ಥಳಗಳಿಂದ ರಿಕ್ಷಾ ಪ್ರಯಾಣವನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ.
ಕೋಡ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಕೋಡ್ ಅನ್ನು ಪಡೆಯಲು ನಗರ ವಾಟ್ಸಾಪ್ ಚಾಟ್ಬಾಟ್ 9620020042 ಸಂಖ್ಯೆಯಲ್ಲಿ "Hi" ಎಂದು ಸಂದೇಶ ಕಳುಹಿಸಬಹುದು. ಬಳಕೆದಾರರು ತಮ್ಮ ಆರಂಭಿಕ ಪಿಕ್ ಅಪ್ ವಿವರ ಹಂಚಿಕೊಂಡ ನಂತರ, ಅವರಿಗೆ ಚಾಲಕ ಮತ್ತು ಆಟೋರಿಕ್ಷಾದ ಮಾಹಿತಿ ಸಿಗುತ್ತದೆ. ಆ ದಿನ ಹೆಚ್ಚುವರಿ ಪ್ರಯಾಣ ಮಾಡಬೇಕಿದ್ದರೆ, ಅದೇ ಕೋಡ್ ಅನ್ನು ಮತ್ತೆ ಬಳಸಬಹುದು.
ವರದಿಯ ಪ್ರಕಾರ, ಈ ಅಪ್ಲಿಕೇಶನ್ ಅನ್ನು ಅಗ್ನಿಬು ಟೆಕ್ನಾಲಜೀಸ್ ಮತ್ತು ಬ್ರಾಂಡ್ ಪ್ರೈಡ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಪ್ರಯಾಣಿಕರು ಮತ್ತು ಚಾಲಕರ ಅನುಕೂಲಕ್ಕಾಗಿ ಈ ಫೀಚರ್ ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಬ್ರಾಂಡ್ ಪ್ರೈಡ್ ಮೊಬಿಲಿಟಿಯ ಸಿಇಒ ನಿರಂಜನಾರಾಧ್ಯ ಎನ್ ಮಾತನಾಡಿ, ಸಮಯವನ್ನು ಉಳಿಸುವ ಮೂಲಕ ನಮ್ಮ ಕೋಡ್ ಚಾಲಕರಿಗೆ ಪ್ರಯೋಜನ ನೀಡುತ್ತದೆ. ಚಾಲಕರು ಗ್ರಾಹಕರನ್ನು ಹೆಚ್ಚು ಪರಿಣಾಮಕಾರಿಯಾಗಿ ಹುಡುಕಲು ಮತ್ತು ಪ್ರತಿದಿನ ಹೆಚ್ಚಿನ ಸವಾರಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಬಿಎಂಆರ್‌ಸಿಎಲ್ ಸಹಯೋಗ
ನಮ್ಮ ಮೆಟ್ರೋದ ಚಾಟ್‌ಬಾಟ್ ವೈಶಿಷ್ಟ್ಯದೊಂದಿಗೆ ನಮ್ಮ ಕೋಡ್ ಅನ್ನು ಸಂಯೋಜಿಸಲು ಕಂಪನಿಯು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಜೊತೆಗೆ ಮಾತುಕತೆ ನಡೆಸುತ್ತಿದೆ. ಈ ಯೋಜನೆ ಜಾರಿಗೆ ಬಂದ ನಂತರ, ಮೆಟ್ರೋ ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ನಮ್ಮ ಕೋಡ್ ಅನ್ನು ಬಳಸಬಹುದು. ಇದು ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ತಡೆರಹಿತ ಆಟೋರಿಕ್ಷಾ ಬುಕಿಂಗ್‌ಗೆ ಅನುವು ಮಾಡಿಕೊಡುತ್ತದೆ. ಪ್ರಸ್ತುತ, ನಗರ ಅಪ್ಲಿಕೇಶನ್‌ನಲ್ಲಿ 6,200ಕ್ಕೂ ಹೆಚ್ಚು ಆಟೋ ಚಾಲಕರು ಇದ್ದಾರೆ.