Bangalore News: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅತಿ ಎತ್ತರದ ಆಕಾಶ ಗೋಪುರ ನಿರ್ಮಾಣ, ಆಕ್ಷೇಪಣೆ ಇದ್ದರೆ ಸಲ್ಲಿಸಲು ಬಿಬಿಎಂಪಿ ಸಲಹೆ
ಬೆಂಗಳೂರು ನಗರದ ಸೌಂದರ್ಯವನ್ನು ಅತೀ ಎತ್ತರದ ಆಕಾಶಗೋಪುರ( ಸ್ಕೈ ಡೆಕ್) ಮೂಲಕ ವೀಕ್ಷಣೆಗೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ನೈಸ್ ರಸ್ತೆ ಬಳಿ ನಿರ್ಮಾಣಕ್ಕೆ ಆಕ್ಷೇಪಣೆಗಳನ್ನ ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ.
ಬೆಂಗಳೂರು: ಬೆಂಗಳೂರು ನಗರವನ್ನು ಮೇಲ್ಮಟ್ಟದಲ್ಲಿ ನಿಂತು ಸೌಂದರ್ಯ ಸವಿಯಲು ಅನುವಾಗುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ನಿರ್ಮಿಸಲು ಉದ್ದೇಶಿರುವ ಆಕಾಶ ಗೋಪುರವನ್ನು ನೈಸ್ ರಸ್ತೆಯಲ್ಲಿ ನಿರ್ಮಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಣಿಯಾಗಿದೆ. ಹಲವಾರು ಸ್ಥಳಗಳನ್ನು ಗುರುತಿಸಿ ನೈಸ್ ರಸ್ತೆಯಾದರೆ ಒಳ್ಳೆಯದು ಎನ್ನುವ ಚರ್ಚೆಗಳನ್ನಾಧರಿಸಿ ಬಿಬಿಎಂಪಿ ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನಿಸಿದೆ. ನವೆಂಬರ್ 6ರ ಒಳಗೆ ಬಿಬಿಎಂಪಿ ಆಯುಕ್ತರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಯೋಜನೆ ಆಶಯ, ಉದ್ದೇಶ, ಈಗಾಗಲೇ ಆಗಿರುವ ತಯಾರಿಯೂ ಸೇರಿದಂತೆ ಹಲವಾರು ವಿಚಾರಗಳನ್ನು ಬಿಬಿಎಂಪಿ ಪ್ರಸ್ತಾಪಿಸಿದೆ.
ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು, ಬೆಂಗಳೂರು ನಗರವನ್ನು ಆಕಾಶದ ಮೇಲೆತ್ತರದಿಂದ ವೀಕ್ಷಿಸಲು, ಉದ್ಯೋಗ ಸೃಷ್ಟಿಸಲು. ಆದಾಯ ಹೆಚ್ಚಿಸುವ ಜತೆಗೆ ನಗರದ ಆಧುನಿಕತೆಯನ್ನು ಸಂಭ್ರಮಿಸುವುದಕ್ಕಾಗಿಯೇ ಆಕರ್ಷಣೀಯ ಆಕಾಶ ಗೋಪುರ೯ ಸ್ಕೈ ಡೆಕ್) ನಿರ್ಮಿಸಲು ಉದ್ದೇಶಿಸಲಾಗಿದೆ, ಇದಕ್ಕಾಗಿ ಎನ್‌ಜಿಜಿಎಫ್, ಬೆನ್ನಿಗಾನಹಳ್ಳಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಯಶವಂತಪುರ, ಕರ್ನಾಟಕ ಟ್ರೇಡ್ ಪ್ರಮೋಷನ್ ಆರ್ಗನೈಷೇಷನ್, ವೈಟ್ ಫೀಲ್ಡ್, ಜಕ್ಕೂರು, ರೇಸ್ ಕೋರ್ಸ್, ಮೆಜಸ್ಟಿಕ್, ಅರಮನೆ ಆವರಣದಲ್ಲಿ ಜಾಗಗಳನ್ನು ಗುರುತಿಸಲಾಗಿತ್ತು, ಕೆಲವು ಜಾಗದಲ್ಲಿ ಅಡಚಣೆ ಇರುವುದರಿಂದ ನೈಸ್ ರಸ್ತೆಯ ಹೆಮ್ಮಿಗೆ ಪುರವನ್ನು ಪ್ರಥಮ ಪ್ರಾಶಸ್ತ್ಯವಾಗಿ ಪ್ರಸ್ತಾಪಿಸಲಾಗಿದೆ. ಈ ಸ್ಥಳದ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಆಕಾಶ ಗೋಪುರ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಡಲು ಆಸ್ಟ್ರಿಯಾ ಮೂಲದ ಸಂಸ್ಥೆಗೆ ಈಗಾಗಲೇ ಬಿಬಿಎಂಪಿ ಆಯ್ಕೆ ಮಾಡಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಸಂಸ್ಥೆಯಷ್ಟೇ ಭಾಗವಹಿಸಿದ್ದರಿಂದ ಅದೇ ಕಂಪನಿಗೆ ಡಿಪಿಆರ್ ಸಿದ್ಧಪಡಿಸುವ ಹೊಣೆ ವಹಿಸಲಾಗಿದೆ. ಯೋಜನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ಶೀಘ್ರದಲ್ಲೇ ಕೈಗೊಂಡು ಅಂತಿಮ ವರದಿ ಸಿದ್ದಪಡಿಸಲು ಬಿಬಿಎಂಪಿ ಅಣಿಯಾಗಿದ್ದು. ಇದಕ್ಕಾಗಿ ನೈಸ್ ರಸ್ತೆಯನ್ನು ಆಯ್ಕೆ ಮಾಡಿ ಆಕ್ಷೇಪಣೆಗೆ ಆಹ್ವಾನಿಸಿದೆ.
ಯಶವಂತಪುರ ಕ್ಷೇತ್ರದ ವ್ಯಾಪ್ತಿಯ ನೈಸ್ ರಸ್ತೆಗೆ ಹೊಂದಿಕೊಂಡ ಹೆಮ್ಮಿಗೆಪುರ ಭಾಗದ 25 ಎಕರೆ ಪ್ರದೇಶ ವಿಶೇಷ ಕಟ್ಟಡ ನಿರ್ಮಿಸುವುದು ಬಿಬಿಎಂಪಿ ಉದ್ದೇಶ. 250 ಮೀಟರ್ ಎತ್ತರದ ಆಕಾಶ ಗೋಪುರ( ಸ್ಕೈಡೆಕ್) ನಿರ್ಮಾಣವಾದರೆ ಪ್ರಮುಖ ಪ್ರವಾಸಿ ತಾಣವಾಗಲಿದ್ದು.ಮೆಟ್ರೋ ಸಹಿತ ಸಾರಿಗೆ ಸಂಪರ್ಕ ಒದಗಿಸಲು ಯೋಜಿಸಲಾಗುತ್ತಿದೆ. ಇದರ ಭಾಗವಾಗಿಯೇ ಬಿಬಿಎಂಪಿ ತ್ವರಿತಗತಿಯಲ್ಲಿ ಚಟುವಟಿಕೆ ಕೈಗೊಂಡಿದೆ.
ಬೆಂಗಳೂರು ವಿಮಾನ ನಿಲ್ದಾಣ, ಯಲಹಂಕ ವಿಮಾನ ನಿಲ್ದಾಣ ಹಾಗೂ ಎಚ್‌ಎಎಲ್ ವಿಮಾನ ನಿಲ್ದಾನಗಳ ಸುರಕ್ಷತೆ ದೃಷ್ಟಿಯಿಂದ ಅಲ್ಲಿ ಅವಕಾಶವಿಲ್ಲ. ಕಲರ್ ಕೋಡೆಡ್ ಝೋನಿಂಗ್ ಮ್ಯಾಪ್ ಅನುಸಾರ ಎಲ್ಲಾ ಸ್ಥಳಗಳಲ್ಲಿ 250 ಮೀಟರ್ ಎತ್ತರ ಗೋಪುರ ನಿರ್ಮಾಣಕ್ಕೆ ನಿರ್ಬಂಧವಿದೆ. ಜಕ್ಕೂರು ವಿಮಾನ ಶಾಲೆಯಿಂದಲೂ ನಿರ್ಬಂಧಗಳಿವೆ. ಈ ಕಾರಣದಿಂದ ಬೆಂಗಳೂರು ಪಶ್ಚಿಮ ಹಾಗೂ ನೈರುತ್ಯ ಭಾಗದಲ್ಲಿ ನಿರ್ಮಿಸಲು ಅವಕಾಶವಿದೆ. ಪರ್ಯಾವಾಗಿ ಹೆಮ್ಮಿಗೆಪುರದ ನೈಸ್ ಕ್ಲೋವರ್ ಲೀಫ್ ಹತ್ತಿರ, ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿ ಹಾಗೂ ಕೊಮ್ಮಘಟ್ಟದ ನೈಸ್ ರಸ್ತೆ ಬಳಿ ಸಂಭಾವ್ಯ ಸ್ಥಳ ಗುರುತಿಸಲಾಗಿತ್ತು. ಈ ಎರಡೂ ಸ್ಥಳಗಳಲ್ಲೂ ಅಡಚಣೆ ಇರುವುದರಿಂದ ಹೆಮ್ಮಿಗೆ ಪುರ ನೈಸ್ ರಸ್ತೆ ಸ್ಥಳ ಗುರುತಿಸಲಾಗಿದೆ. ಈ ಸ್ಥಳದ ಬಗ್ಗೆ ಆಕ್ಷೇಪಣೆಗಳಿದ್ದರೆ ಮುಖ್ಯ ಆಯುಕ್ತರು. ಬಿಬಿಬಿಎಂ ಪಿ ಕೇಂದ್ರ ಕಚೇರಿ ನರಸಿಂಹರಾಜ ಚೌಕ ಬೆಂಗಳೂರು ಇಲ್ಲಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. bbmpeepc3@gmail.comಗೂ ಆಕ್ಷೇಪಣೆ ಕಳುಹಿಸಬಹುದು ಎಂದು ಹೇಳಿದ್ದಾರೆ.